
ಬೆಂಗಳೂರು (ಜು.10): ರಾಜ್ಯದ ಪ್ರತಿಷ್ಠಿತ ಕರ್ನಾಟಕ ಲೋಕಸೇವಾ ಆಯೋಗದ (KPSC) ಅಧ್ಯಕ್ಷರ ಪುತ್ರಿಯೇ ಸುಳ್ಳು ದಾಖಲೆಗಳನ್ನು ಸಲ್ಲಿಸಿ ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳಲು ಯತ್ನಿಸಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ಪುತ್ರಿ ಸುಮಾ ಎಸ್. ಸಾಹುಕಾರ್ ವಿರುದ್ಧ ಈಗ ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.
ಕೆಪಿಎಸ್‌ಸಿಯ ಕೈಗಾರಿಕಾ ವಿಸ್ತರಣಾಧಿಕಾರಿಯ 50 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಧ್ಯಕ್ಷರ ಪುತ್ರಿ ಸುಮಾ ಅವರು ಪಾಲ್ಗೊಂಡಿದ್ದರು. ಮೇ 12, 2025 ರಂದು ನಡೆದಿದ್ದ ಕನ್ನಡ ಭಾಷಾ ಪರೀಕ್ಷೆ ಹಾಗೂ ಜುಲೈ 13, 2025 ರಂದು ನಡೆದಿದ್ದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅವರು ಹಾಜರಾಗಿದ್ದರು. ಜನವರಿ 21, 2026 ರಂದು ಪ್ರಕಟವಾದ ಅರ್ಹತಾ ಪಟ್ಟಿಯಲ್ಲಿ ಸುಮಾ ಅವರ ಹೆಸರು ಆಯ್ಕೆಯಾಗಿತ್ತು. ಫೆಬ್ರವರಿ 19, 2026 ರಂದು ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ನಡೆದಾಗ ವಂಚನೆಯ ಅಸಲಿ ಮುಖವಾಡ ಕಳಚಿದೆ.
ಸುಮಾ ಸಾಹುಕಾರ್ ಅವರು ಪರೀಕ್ಷೆಯಲ್ಲಿ ಮೀಸಲಾತಿ ಪಡೆಯುವ ಉದ್ದೇಶದಿಂದ ನಕಲಿ ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಅವರು ಸಲ್ಲಿಸಿದ ದಾಖಲೆಯಲ್ಲಿ ಕುಟುಂಬದ ವಾರ್ಷಿಕ ಆದಾಯವನ್ನು ಕೇವಲ 40 ಸಾವಿರ ರೂಪಾಯಿ ಎಂದು ನಮೂದಿಸಲಾಗಿತ್ತು. ಆದರೆ, ಸುಮಾ ಅವರ ತಂದೆ ಶಿವಶಂಕರಪ್ಪ ಸಾಹುಕಾರ್ ಅವರು ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದು, ಅವರ ಮಾಸಿಕ ವೇತನವೇ ಸುಮಾರು 2 ಲಕ್ಷದ 25 ಸಾವಿರ ರೂಪಾಯಿಗಳಾಗಿದೆ. ಮಾಸಿಕ ಲಕ್ಷಾಂತರ ರೂಪಾಯಿ ಸಂಬಳ ಪಡೆಯುವ ತಂದೆಯ ಆದಾಯವನ್ನು ವಾರ್ಷಿಕವಾಗಿ ಕೇವಲ 40 ಸಾವಿರ ಎಂದು ತೋರಿಸಿರುವುದು ಸ್ಪಷ್ಟವಾಗಿ ನಿಯಮಗಳ ಉಲ್ಲಂಘನೆ ಮತ್ತು ಕಾನೂನುಬಾಹಿರ ಕೃತ್ಯವಾಗಿದೆ.
ಅರ್ಜಿಯ ಘೋಷಣೆ ಕಾಲಂನಲ್ಲಿ ಸುಳ್ಳು ಮಾಹಿತಿ ನೀಡಿ ಸರ್ಕಾರದ ಕಣ್ಣಿಗೆ ಮಣ್ಣೆರಚಲು ಯತ್ನಿಸಿದ ಸುಮಾ ವಿರುದ್ಧ ಕೆಪಿಎಸ್‌ಸಿ ಸಹಾಯಕ ಕಾರ್ಯದರ್ಶಿ ಶೋಭಾ ಬಿ.ಎನ್. ಅವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರಂಭದಲ್ಲಿ ದೂರಿನ ಪರಿಶೀಲನೆ ನಡೆಸಿದ ಪೊಲೀಸರು, ಈಗ ಅಧಿಕೃತವಾಗಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಸುಳ್ಳು ದಾಖಲೆ ನೀಡಿ ಮೀಸಲಾತಿ ದುರುಪಯೋಗಪಡಿಸಿಕೊಳ್ಳಲು ಯತ್ನಿಸಿದ ಸುಮಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಬೇಕಾದ ಅಧ್ಯಕ್ಷರ ಕುಟುಂಬವೇ ಇಂತಹ ಹಗರಣದಲ್ಲಿ ಭಾಗಿಯಾಗಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.