
ಬೆಂಗಳೂರು (ಅ.14): ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿ, ಎಡಿಜಿಪಿ (ಪ್ರಸ್ತುತ ಹುದ್ದೆ) ಅಲೋಕ್ ಕುಮಾರ್ ಅವರಿಗೆ ಇಂದು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (CAT - Central Administrative Tribunal) ಮಹತ್ವದ ಗೆಲುವು ತಂದುಕೊಟ್ಟಿದೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಅವಧಿಯಲ್ಲಿ ನಡೆದ ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲೋಕ್ ಕುಮಾರ್ ವಿರುದ್ಧ ರಾಜ್ಯ ಸರ್ಕಾರ ನೀಡಿದ್ದ ಇಲಾಖಾ ತನಿಖೆಯ ಆದೇಶವನ್ನು ಸಿಎಟಿ ರದ್ದುಗೊಳಿಸಿದೆ. ಸರ್ಕಾರದ ಈ ನಿರ್ಧಾರಕ್ಕೆ ಇದು ಭಾರಿ ಹಿನ್ನಡೆಯಾಗಿದೆ.
ರಾಜ್ಯದಲ್ಲಿ 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಆಡಳಿತದಲ್ಲಿದ್ದಾಗ ಫೋನ್ ಟ್ಯಾಪಿಂಗ್ ಹಗರಣವು ಭಾರೀ ಸದ್ದು ಮಾಡಿತ್ತು. ಈ ಪ್ರಕರಣದಲ್ಲಿ ಅಂದಿನ ಗೃಹ ಇಲಾಖೆಯ ಕೆಲವು ಅಧಿಕಾರಿಗಳ ಪಾತ್ರದ ಕುರಿತು ತನಿಖೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ, ಅಲೋಕ್ ಕುಮಾರ್ ಸೇರಿದಂತೆ ಕೆಲವು ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿತ್ತು. ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಅಲೋಕ್ ಕುಮಾರ್ ಅವರು ಸಿಎಟಿ ಮೊರೆ ಹೋಗಿದ್ದರು.
ಅಲೋಕ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ, ಸಿಎಟಿಯ ಇಬ್ಬರು ನ್ಯಾಯಾಧೀಶರ ನಡುವೆ ವಿಭಿನ್ನ ತೀರ್ಪುಗಳು ಹೊರಬಂದಿದ್ದವು. ಒಬ್ಬ ನ್ಯಾಯಾಧೀಶರು ಸರ್ಕಾರದ ಆದೇಶವನ್ನು ಎತ್ತಿಹಿಡಿದರೆ, ಇನ್ನೊಬ್ಬರು ರದ್ದುಗೊಳಿಸಬೇಕೆಂದು ಅಭಿಪ್ರಾಯಪಟ್ಟಿದ್ದರು. ಈ ಭಿನ್ನಾಭಿಪ್ರಾಯದ ಕಾರಣದಿಂದ ಪ್ರಕರಣವನ್ನು ಸಿಎಟಿ ಮುಖ್ಯಸ್ಥರಾದ ನ್ಯಾಯಮೂರ್ತಿ ರಣ್‌ಜೀತ್ ಸಿಂಗ್ ಅವರ ಬಳಿಗೆ ಕಳುಹಿಸಲಾಗಿತ್ತು.
ಸುದೀರ್ಘ ವಿಚಾರಣೆ ನಡೆಸಿದ ಬಳಿಕ, ಇಂದು (ಅ.14) ನ್ಯಾಯಮೂರ್ತಿ ರಣ್‌ಜೀತ್ ಸಿಂಗ್ ಅವರು ಪ್ರಕರಣದ ತೀರ್ಪನ್ನು ಪ್ರಕಟಿಸಿದರು. ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳು, ಅಂತಿಮವಾಗಿ ರಾಜ್ಯ ಸರ್ಕಾರದ ಇಲಾಖಾ ತನಿಖೆಯ ಆದೇಶವನ್ನು ರದ್ದುಗೊಳಿಸಿ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಪರವಾಗಿ ತೀರ್ಪು ನೀಡಿದರು.
ಇಲಾಖಾ ತನಿಖೆ ಬಾಕಿ ಇದ್ದ ಕಾರಣದಿಂದ ಅಲೋಕ್ ಕುಮಾರ್ ಅವರಿಗೆ ಸಲ್ಲಬೇಕಿದ್ದ ಬಡ್ತಿ ಮತ್ತು ಇತರ ಸೌಲಭ್ಯಗಳು ತಡೆ ಹಿಡಿಯಲ್ಪಟ್ಟಿದ್ದವು. ಇದೀಗ ತನಿಖೆ ಆದೇಶ ರದ್ದಾಗಿರುವ ಹಿನ್ನೆಲೆಯಲ್ಲಿ, ತಕ್ಷಣವೇ ಅಲೋಕ್ ಕುಮಾರ್ ಅವರಿಗೆ ಸಲ್ಲಬೇಕಾದ ಬಡ್ತಿ ಸವಲತ್ತುಗಳನ್ನು ಹಾಗೂ ಇತರೆ ಪ್ರಯೋಜನಗಳನ್ನು ನೀಡುವಂತೆ ನ್ಯಾಯಮೂರ್ತಿಗಳು ರಾಜ್ಯ ಸರ್ಕಾರಕ್ಕೆ ಆದೇಶಿಸಿದ್ದಾರೆ.
ಸಿಎಟಿಯ ಈ ಮಹತ್ವದ ತೀರ್ಪು ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರಿಗೆ ವೃತ್ತಿಜೀವನದಲ್ಲಿ ದೊಡ್ಡ ನಿರಾಳತೆಯನ್ನು ತಂದಿದ್ದು, ಮತ್ತೊಂದೆಡೆ ರಾಜ್ಯ ಸರ್ಕಾರಕ್ಕೆ ಈ ಕಾನೂನು ಸಮರದಲ್ಲಿ ಹಿನ್ನಡೆಯುಂಟಾದಂತಾಗಿದೆ. ಈ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಯಾವ ಮುಂದಿನ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.