ಪ್ರೌಢಶಾಲಾ ಶಿಕ್ಷಕರ ಬಡ್ತಿ: 12 ವರ್ಷಗಳ ಬಳಿಕ ಪದೋನ್ನತಿಗೆ ಡೇಟ್ ಫಿಕ್ಸ್ ಮಾಡಿದ ಸಭಾಪತಿ!

By Sathish Kumar KH  |  First Published Dec 9, 2024, 1:13 PM IST

ಕಳೆದ 12 ವರ್ಷಗಳಿಂದ ಬಾಕಿ ಉಳಿದಿರುವ ಪ್ರೌಢಶಾಲಾ ಶಿಕ್ಷಕರ ಪದೋನ್ನತಿ ಪ್ರಕ್ರಿಯೆಯನ್ನು ಫೆಬ್ರವರಿ 15 ರೊಳಗೆ ಪೂರ್ಣಗೊಳಿಸುವಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಶಿಕ್ಷಣ ಸಚಿವರಿಗೆ ತಾಕೀತು ಮಾಡಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಎರಡೂವರೆ ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದರು.


ವಿಧಾನ ಪರಿಷತ್ (ಡಿ.09): ರಾಜ್ಯದಲ್ಲಿ ಕಳೆದ 12 ವರ್ಷಗಳಿಂದ ಪ್ರೌಢಶಾಲಾ ಶಿಕ್ಷಕರ ಪದೋನ್ನತಿ (ಪ್ರಮೋಷನ್) ಮಾಡಿಲ್ಲ. ಈ ಪದೋನ್ನತಿ ಪ್ರಕ್ರಿಯೆ ಯಾವಾಗ ಮಾಡುತ್ತೀರಿ ಎಂದು ಕೇಳಿದ್ದಕ್ಕೆ ಶಿಕ್ಷಣ ಸಚಿವರು ಎರಡೂವರೆ ತಿಂಗಳಲ್ಲಿ ಮಾಡುತ್ತೇವೆಂದು ಹೇಳಿದರು. ಇದಕ್ಕೆ ಕಿಡಿಕಾರಿದ ಸಭಾಪತಿ ಬಸವರಾಜ ಹೊರಟ್ಟಿ ಅವರು ಫೆಬ್ರವರಿ 15ರೊಳಗೆ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರು ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಹುದ್ದೆಗೆ ಯಾಕೆ 12 ವರ್ಷಗಳಿಂದ ಪ್ರಮೋಷನ್ ಕೊಡಲಿಲ್ಲ. ಸರ್ಕಾರದಿಂದ ಸಣ್ಣ ನಿರ್ಣಯ ಮಾಡದ ಪರಿಣಾಮ ಸಾವಿರಾರು ಶಿಕ್ಷಕರಿಗೆ ಅನ್ಯಾಯ ಆಗಿದೆ. ಎಷ್ಟೋ ಮಂದಿ ಶಿಕ್ಷಕರು ಪ್ರಮೋಷನ್ ಸಿಗದೆ ನಿವೃತ್ತರಾಗಿದ್ದಾರೆ. ಇದಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತ್ವರಿತಗತಿಯಲ್ಲಿ ಪ್ರಮೋಷನ್ ಪ್ರಕ್ರಿಯೆ ಪೂರ್ಣಗೊಳಿಸುತ್ತೇವೆ ಎಂದು ಹೇಳುತ್ತಾರೆ.

Tap to resize

Latest Videos

ಆದರೆ, ಇದಕ್ಕೆ ಸಮಾಧಾನವಾಗದ ಪರಿಷತ್ ಸದಸ್ಯ ಸಂಕನೂರು ಅವರು, ಇದಕ್ಕೆ ನಾವು ಒಪ್ಪಲ್ಲ ಟೈಂ ಬಾಂಡ್ ಫಿಕ್ಸ್ ಮಾಡಿ ಎಂದು ಒತ್ತಾಯ ಮಾಡಿದರು. ಆಗ ಇದಕ್ಕೆ ಪುನಃ ಉತ್ತರಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಮುಂದಿನ ಎರಡೂವರೆ (2.5) ತಿಂಗಳಲ್ಲಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ಸಭೆಗೆ ಉತ್ತರ ನೀಡಿದರು. ಈ ವೇಳೆ ಪರಿಷತ್ತಿನಲ್ಲಿದ್ದ ಕೈ ಸದಸ್ಯರು ಒಪ್ಪಿಗೆ ಸೂಚಿಸಿದರು. ಆದರೆ, ಇದಕ್ಕೆ ಬಿಜೆಪಿ ಸದಸ್ಯರು ದಿನಾಂಕ ನಿಗದಿಗೊಳಿಸುವಂತೆ ತಾಕೀತು ಮಾಡಿದರು.

ಇದನ್ನೂ ಓದಿ: ಅತಿಥಿ ಶಿಕ್ಷಕರ ವೇತನ ಹೆಚ್ಚಳಕ್ಕೆ ತಿಲಾಂಜಲಿ ಇಟ್ಟರೇ ಶಿಕ್ಷಣ ಸಚಿವ ಮಧು ಬಂಗಾರಪ್ಪ.?

ಮಧ್ಯ ಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು, ಕಳೆದ 12 ವರ್ಷಗಳಿಂದ ಕಾಯಿಸುತ್ತಿರುವುದು ನಿಮಗೆ ಸಾಕಾಗಿಲ್ವಾ? ಇದೀಗ ನಿಮಗೆ ಎರಡೂವರೆ ತಿಂಗಳು ಯಾಕೆ ಬೇಕು..? ಮುಂಬರುವ ಫೆಬ್ರವರಿ 15 ರೊಳಗೆ ಪ್ರೌಢಶಾಲಾ ಸಹ ಶಿಕ್ಷಕರ ಪದೋನ್ನತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

ಶಿವಮೊಗ್ಗ ಆಯುರ್ವೇದ ವಿಶ್ವ ವಿದ್ಯಾಲಯ: 
ಇದೇ ವೇಳೆ ಮತ್ತೊಬ್ಬ ವಿಧಾನ ಪರಿಷತ್ ಸದಸ್ಯ ಅರುಣ್ ಅವರು, ಶಿವಮೊಗ್ಗದಲ್ಲಿ ಆಯುರ್ವೇದ ವಿವಿ ಸ್ಥಾಪನೆಗೆ ಮೀಸಲಿಟ್ಟ ಜಾಗ ಏನಾಯ್ತು? ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಶಿವಮೊಗ್ಗದಲ್ಲಿ ಆಯುರ್ವೇದ 100 ಎಕರೆ ಜಾಗ ಮೀಸಲಿಡಲಾಗಿತ್ತು. ಇದರಲ್ಲಿ ವಸತಿ ಇಲಾಖೆಗೆ ಸ್ವಲ್ಪ ನೀಡಲಾಗಿದೆ. ಇದರಲ್ಲಿ ಬಗರಹುಕುಂ ಜಾಗವೂ ಇದೆ. ಈಗ ಇರೋದೇ 8 ಎಕರೆ. ಇನ್ನು ವಿಶ್ವ ವಿದ್ಯಾಲಯ ಸ್ಥಾಪನೆಗೆ ಕನಿಷ್ಠ 100 ಎಕರೆ ಭೂಮಿ ಇರಬೇಕು. ಜೊತೆಗೆ 200 ಕೋಟಿ ರೂ. ಅಗತ್ಯವಿದೆ. ಆದರೆ, ಆಯುರ್ವೇದ ವಿಶ್ವವಿದ್ಯಾಲಯದ ಅಗತ್ಯವಿದೆಯೇ ಎಂದು ಪ್ರಶ್ನಿಸಿದ ಸಚಿವ ದಿನೇಶ್ ಗುಂಡೂರಾವ್ ಅವರು, ಹಲವು ವಿಶ್ವ ವಿದ್ಯಾಲಯಗಳು ಇದ್ದೂ ಇಲ್ಲದಂತಿವೆ. ಸಿಬ್ಬಂದಿ ಕೊರತೆ ಸೇರಿದಂತೆ ಹಲವು ಸಮಸ್ಯೆ ಎದುರಿಸುತ್ತಿವೆ. ಹೀಗಾಗಿ ವಿಶ್ವ ವಿದ್ಯಾಲಯ ಸ್ಥಾಪನೆಯಿಂದ ಅನುಕೂಲ ಇದೆಯೇ ಎಂದು ಚರ್ಚಿಸೋಣ ಎಂದು ಹೇಳಿದರು.

click me!