
ವರದಿ: ನವೀನ್ ಕೊಡಸೆ
ನವದೆಹಲಿ(ಸೆ.22): ಕುತೂಹಲ ಮೂಡಿಸಿದ ಪಂದ್ಯದಲ್ಲಿ ಅಂತಿಮವಾಗಿ ಗೆಲುವಿನ ನಗೆ ಬೀರಿದ್ದು ಯು ಮುಂಬಾ. ರೈಡರ್ ಶ್ರೀಕಾಂತ್ ಜಾದವ್, ಅನುಭವಿ ಆಟಗಾರ ಕಾಶಿಲಿಂಗ್ ಅಡಿಕೆ ಅವರ ಕಾರಾರುವಕ್ ಆಟದ ನೆರವಿನಿಂದ ತವರಿನ ತಂಡ ದಬಾಂಗ್ ಡೆಲ್ಲಿಯನ್ನು 28-30 ಅಂಕಗಳ ಅಂತರದಲ್ಲಿ ಯು ಮುಂಬಾ ಸೋಲಿಸಿತು. ಇದರೊಂದಿಗೆ ಡೆಲ್ಲಿ ಪಡೆ ಹ್ಯಾಟ್ರಿಕ್ ಸೋಲು ಕಂಡಿತು.
ಇಲ್ಲಿನ ತ್ಯಾಗರಾಜ್ ಸ್ಪೋರ್ಟ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭವಾದ ಡೆಲ್ಲಿ ಚರಣದ ಮೊದಲ ಪಂದ್ಯದಲ್ಲಿ ತವರಿನ ದಬಾಂಗ್ ಡೆಲ್ಲಿ ಹಾಗೂ ಯು ಮುಂಬಾ ಮುಖಾಮುಖಿಯಾದವು. ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ ಕಣಕ್ಕಿಳಿದ ಮಿರಜ್ ಶೇಕ್ ನಾಯಕತ್ವದ ಡೆಲ್ಲಿ, ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಮೊದಲ ರೈಡ್’ನಲ್ಲಿ ಉಭಯ ತಂಡದ ನಾಯಕರಾದ ಮಿರಾಜ್ ಹಾಗೂ ಅನೂಪ್ ಕುಮಾರ್ ಇಬ್ಬರು ಖಾಲಿ ಕೈನಲ್ಲಿ ಮರಳಿದರು. ಆದರೆ ಮರು ರೈಡ್’ನಲ್ಲಿ ಶಬ್ಬೀರ್ ಬಾಪು ಯು ಮುಂಬಾಗೆ ಮೊದಲ ಅಂಕ ತಂದಿತ್ತರು. ಇದರ ಬೆನ್ನಲ್ಲೇ ಅಬುಲ್ ಫಜಲ್ ತಮ್ಮ ಮೊದಲ ರೈಡ್’ನಲ್ಲೇ ಡೆಲ್ಲಿಗೆ ಎರಡು ಅಂಕ ಪಡೆಯುವಲ್ಲಿ ಯಶಸ್ವಿಯಾದರು. ಮೂರನೇ ನಿಮಿಷದಲ್ಲಿ ಕಾಶಿಲಿಂಗ್ ಅಡಕೆ ಯು ಮುಂಬಾಗೆ ಮತ್ತೊಂದು ಅಂಕ ತಂದುಕೊಡುವ ಮೂಲಕ 2-2 ಸಮಬಲ ಸಾಧಿಸುವಂತೆ ಮಾಡಿದರು. ಆದರೆ ನಂತರ ನಿರಂತರ ಅಂಕಗಳಿಸುತ್ತಾ ಸಾಗಿದೆ ತವರು ತಂಡ ಡೆಲ್ಲಿ 12ನೇ ನಿಮಿಷದಲ್ಲಿ 6-3 ಅಂಕಗಳ ಮುನ್ನಡೆ ಕಾಯ್ದು ಕೊಂಡಿತು.
ಈ ಸಮಯದಲ್ಲಿ ನಾಯಕ ಮಿರಾಜ್ ಶೇಕ್ ಸೂಪರ್ ರೈಡ್ ನೆರವಿನಿಂದ ಯು ಮುಂಬಾ ತಂಡವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. 8ನೇ ನಿಮಿಷದಲ್ಲಿ ದಬಾಂಗ್ ಡೆಲ್ಲಿ 11-3 ಅಂಕಗಳ ಮುನ್ನಡೆ ಕಾಯ್ದುಕೊಂಡಿತ್ತು. ಆರಂಭದಲ್ಲಿ ಉಂಟಾದ ಆಘಾತದಿಂದ ಎಚ್ಚೆತ್ತುಕೊಂಡ ಯು ಮುಂಬಾ ಕೂಡಾ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಕಾಶಿಲಿಂಗ್ ಅಡಿಕೆ ಹಾಗೂ ನಾಯಕ ಶ್ರೀಕಾಂತ್ ಜಾಧವ್ ಮಿಂಚಿನ ದಾಳಿ ನಡೆಸುವ ಮೂಲಕ ಮೊದಲಾರ್ಧ ಮುಕ್ತಾಯಕ್ಕೆ ಕೊನೆಯ 3 ನಿಮಿಷಗಳಿದ್ದಾಗ ಡೆಲ್ಲಿಯನ್ನು ಆಲೌಟ್’ಗೆ ಗುರಿಪಡಿಸಿತು. ಉಭಯ ತಂಡಗಳು ಜಿದ್ದಾಜಿದ್ದಿನಿಂದ ಹೋರಾಟ ನಡೆಸಿದ ಪರಿಣಾಮ ಮೊದಲಾರ್ಧ ಮುಕ್ತಾಯದ ವೇಳೆಗೆ ಎರಡು ತಂಡಗಳು 16-16 ಅಂಕಗಳ ಸಮಬಲ ಕಾಯ್ದುಕೊಂಡವು.
ಮೊದಲಾರ್ಧ ಸಮಬಲ ಸಾಧಿಸಿದ್ದರಿಂದ ದ್ವಿತಿಯಾರ್ಧ ಇನ್ನಷ್ಟು ರೋಚಕತೆಗೆ ಸಾಕ್ಷಿಯಾಯಿತು. ಪಂದ್ಯದ 27ನೇ ನಿಮಿಷದಲ್ಲಿ ಎರಡೂ ತಂಡಗಳು 20-20 ಅಂಕಗಳ ಸಮಬಲ ಸಾಧಿಸಿದವು. ಈ ವೇಳೆ ಮಿರಾಜ್ ಅವರನ್ನು ಟ್ಯಾಕಲ್ ಮಾಡಿದ ಯು ಮುಂಬಾ ಮತ್ತೆ ಒಂದು ಅಂಕ ಮುನ್ನಡೆ ಕಾಯ್ದುಕೊಂಡಿತು. ಅದರೆ ಇದಕ್ಕೆ ಡೆಲ್ಲಿ ಕೂಡ ಅಷ್ಟೇ ತೀಕ್ಷ್ಣ ಉತ್ತರ ನೀಡುವಲ್ಲಿ ಸಫಲವಾಯಿತು. ಪರಿಣಾಮ ಅನೂಪ್ ಕುಮಾರ್ ಡೆಲ್ಲಿ ಟ್ಯಾಕಲ್’ಗೆ ಬಲಿಯಾದರು. ಮತ್ತೆ 30ನೇ ನಿಮಿಷದಲ್ಲೂ ಉಭಯ ತಂಡಗಳು 22-22 ಅಂಕಗಳ ಸಮಬಲ ಕಾಯ್ದುಕೊಂಡವು. ಹೀಗಾಗಿ ಕೊನೆಯ 10 ನಿಮಿಷಗಳ ಆಟ ಇನ್ನಷ್ಟು ರೋಚಕತೆ ಹೆಚ್ಚಿಸಿತು. ಪಂದ್ಯದ ಕೊನೆಯ 5 ನಿಮಿಷವಿದ್ದಾಗ ಮತ್ತೆ 25-25ರ ಸಮಬಲ ಸಾಧಿಸಿದ್ದವು. ಹೀಗಾಗಿ ನೆರೆದಿದ್ದ ಪ್ರೇಕ್ಷಕರ ಫಲಿತಾಂಶ ಏನಾಗಬಹುದೆಂದು ತುದಿಗಾಲಿನಲ್ಲಿ ಕುಳಿತಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಮಿಂಚಿನ ದಾಳಿ ಸಂಘಟಿಸಿದ ಯು ಮುಂಬಾ ತವರಿನ ತಂಡಕ್ಕೆ ಆಘಾತ ನೀಡುವಲ್ಲಿ ಯಶಸ್ವಿಯಾಯಿತು. ಪರಿಣಾಮ ಯು ಮುಂಬಾ 30-28 ಅಂಕಗಳ ಅಂತರದಿಂದ ಗೆಲ್ಲುವ ಮೂಲಕ ಗುಜರಾತ್ ಫಾರ್ಚೂನ್’ಜೈಂಟ್ಸ್ ವಿರುದ್ಧ ಎದುರಾಗಿದ್ದ ಹೀನಾಯ ಸೋಲಿನ ಶಾಕ್’ನಿಂದ ಹೊರಬರುವಲ್ಲಿ ಯಶಸ್ವಿಯಾಯಿತು. ಈ ಗೆಲುವಿನ ಮೂಲಕ ಎ ವಲಯದಲ್ಲಿ ಯು ಮುಂಬಾ 3 ನೇ ಸ್ಥಾನಕ್ಕೆ ದಾಪುಗಾಲಿಟ್ಟರೆ, ಹ್ಯಾಟ್ರಿಕ್ ಸೋಲು ಕಂಡ ದಬಾಂಗ್ ಡೆಲ್ಲಿ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿಯಿತು.
ರಾಷ್ಟ್ರಗೀತೆ ಹಾಡಿದ ಗಂಭೀರ್: ಅರ್ಜುನ ಪ್ರಶಸ್ತಿ ವಿಜೇತ ಟೀಂ ಇಂಡಿಯಾ ಕ್ರಿಕೆಟಿಗ, ಲೋಕಲ್ ಹೀರೋ ಗೌತಮ್ ಗಂಭೀರ್ ರಾಷ್ಟ್ರಗೀತೆ ಹಾಡುವ ಮೂಲಕ ದೆಹಲಿ ಚರಣದ ಕಬಡ್ಡಿಗೆ ಚಾಲನೆ ನೀಡಿದರು.
ಟರ್ನಿಂಗ್ ಪಾಯಿಂಟ್: ಪಂದ್ಯದ ಕೊನೆಯ ಎರಡು ನಿಮಿಷಗಳಿದ್ದಾಗ ಡು ಆರ್ ಡೈ ರೈಡ್’ನಲ್ಲಿ ಅಬುಲ್ ಫಜಲ್ ಅವರನ್ನು ಟ್ಯಾಕಲ್ ಮಾಡಿದ ಯು ಮುಂಬಾ ಮರುರೈಡ್’ನಲ್ಲೇ ಸೂಪರ್ ರೈಡ್ ಮೂಲಕ ಮತ್ತೆರಡು ಅಂಕಗಳನ್ನು ಕಸಿಯುವಲ್ಲಿ ಯಶಸ್ವಿಯಾಯಿತು. ಮಹತ್ವದ ಸಮಯದಲ್ಲಿ ನಾಯಕ ಮಿರಾಜ್ ಶೇಕ್ ತಂಡದಿಂದ ಹೊರಗುಳಿದಿದ್ದು, ದಬಾಂಗ್ ಡೆಲ್ಲಿಗೆ ದುಬಾರಿಯಾಗಿ ಪರಿಣಮಿಸಿತು.
ಶ್ರೇಷ್ಠ ರೈಡರ್: ಶ್ರೀಕಾಂತ್ ಜಾದವ್(11 ಅಂಕ)
ಶ್ರೇಷ್ಠ ಡಿಫೆಂಡರ್: ಸುನಿಲ್(4 ಟ್ಯಾಕಲ್)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.