ಲಂಡನ್: ವಿಂಬಲ್ಡನ್ ಗ್ರ್ಯಾಂಡ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ರೋಜರ್ ಫೆಡರರ್ ಪ್ರಾಬಲ್ಯ ಮುಂದುವರಿದಿದೆ. ದಾಖಲೆಯ 9ನೇ ಬಾರಿಗೆ ಚಾಂಪಿಯನ್ ಪಟ್ಟಅಲಂಕರಿಸಲು ಕಣಕ್ಕಿಳಿದಿರುವ ಫೆಡರರ್, ಬುಧವಾರ ಪುರುಷರ ಸಿಂಗಲ್ಸ್ 2ನೇ ಸುತ್ತಿನಲ್ಲಿ ಸ್ಲೋವಾಕಿಯಾದ ಲುಕಾಸ್ ಲ್ಯಾಕೋ ವಿರುದ್ಧ 6-4,6-4,6-1 ಸೆಟ್‌ಗಳಲ್ಲಿ ನಿರಾಯಾಸವಾಗಿ ಗೆಲುವು ಸಾಧಿಸಿದರು.
35 ನೇರ ಸರ್ವ್ ಅಂಕಗಳನ್ನು ಗಳಿಸಿದ ಅಗ್ರ ಶ್ರೇಯಾಂಕಿತ ಆಟಗಾರ ಫೆಡರರ್, ಪಂದ್ಯದಲ್ಲಿ ಬರೋಬ್ಬರಿ 16 ಏಸ್‌ಗಳನ್ನು ಹಾಕಿ ಗೆಲುವನ್ನು ಸುಲಭಗೊಳಿಸಿಕೊಂಡರು. ಇದರೊಂದಿಗೆ ವಿಂಬಲ್ಡನ್‌ನಲ್ಲಿ ಸತತ 27 ಸೆಟ್ ಗೆಲುವು ದಾಖಲಿಸಿದರು. ಇದೇ ವೇಳೆ 11ನೇ ಶ್ರೇಯಾಂಕಿತ ಆಟಗಾರ ಅಮೆರಿಕದ ಸ್ಯಾಮ್ ಕ್ವೆರ್ರಿ ಹಾಗೂ 13ನೇ ಶ್ರೇಯಾಂಕಿತ ಆಟಗಾರ ಕೆನಡಾದ ಮಿಲೋಸ್ ರವೊನಿಚ್ ಸಹ 3ನೇ ಸುತ್ತಿಗೆ ಪ್ರವೇಶ ಪಡೆದರು.
ಮಹಿಳಾ ಸಿಂಗಲ್ಸ್ 2ನೇ ಸುತ್ತಿನಲ್ಲಿ ಗೆದ್ದ 7ನೇ ಶ್ರೇಯಾಂಕಿತೆ ಕ್ಯಾರೊಲೊನಾ ಪ್ಲಿಸ್ಕೋವಾ, 9ನೇ ಶ್ರೇಯಾಂಕಿತೆ ವೀನಸ್ ವಿಲಿಯಮ್ಸ್ ಮುಂದಿನ ಹಂತಕ್ಕೇರಿದರೆ, ಮಂಗಳವಾರ ರಾತ್ರಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಸೋಲುಂಡ ಮಾಜಿ ಚಾಂಪಿಯನ್ ಮರಿಯಾ ಶರಪೋವಾ ಟೂರ್ನಿಯಿಂದ ಹೊರಬಿದ್ದರು. ರಷ್ಯಾದವರೇ ಆದ ಡಿಯಾಟ್ಚೆಂಕೋ ವಿರುದ್ಧ 7-6, 6-7,4-6 ಸೆಟ್‌ಗಳಲ್ಲಿ ಸೋಲುಂಡ ಶರಪೋವಾ, ವಿಂಬಲ್ಡನ್‌ನಲ್ಲಿ ಮೊದಲ ಬಾರಿಗೆ ಮೊದಲ ಸುತ್ತಲ್ಲೇ ಸೋತ ಅಪಖ್ಯಾತಿಗೆ ಗುರಿಯಾದರು.
ರಾಜಾ ಜೋಡಿಗೆ ಸೋಲು: ಭಾರತದ ಪೂರವ್ ರಾಜಾ ಹಾಗೂ ಫ್ರಾನ್ಸ್‌ನ ಫಾಬ್ರೈಸ್ ಮಾರ್ಟಿನ್ ಪುರುಷರ ಡಬಲ್ಸ್ ಮೊದಲ ಸುತ್ತಲ್ಲಿ ವೀರೋಚಿತ ಸೋಲು ಅನುಭವಿಸಿ ಹೊರಬಿದ್ದಿದೆ. ಮೊದಲ ಸುತ್ತಿನ ಪಂದ್ಯದಲ್ಲಿ ರಾಜಾ-ಮಾರ್ಟಿನ್ ಜೋಡಿ, ಮಿರ್ಜಾ ಬೇಸಿಚ್ ಹಾಗೂ ದುಸಾನ್ ಲಜೋವಿಚ್ ವಿರುದ್ಧ 2-6, 4-6, 7-6,6-4,9-11 ಸೆಟ್‌ಗಳಲ್ಲಿ ಸೋಲುಂಡಿತು.