
ಲಂಡನ್: ವಿಂಬಲ್ಡನ್ ಗ್ರ್ಯಾನ್ ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಮಹಿಳಾ ಸಿಂಗಲ್ಸ್‌ನಂತೆ ಪುರುಷರ ಸಿಂಗಲ್ಸ್‌ನಲ್ಲೂ ಈ ಬಾರಿ ಹೊಸ ಚಾಂಪಿಯನ್‌ನ ಉದಯವಾಗಿದೆ. ವಿಶ್ವ ನಂ.1 ಆಟಗಾರ, ಇಟಲಿಯ ಯಾನ್ನಿಕ್ ಸಿನ್ನರ್ ಚೊಚ್ಚಲ ಬಾರಿಗೆ ವಿಂಬಲ್ಡನ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಭಾನುವಾರ ನಡೆದ ಫೈನಲ್‌ನಲ್ಲಿ ಸ್ಪೇನ್‌ನ ಕಾರ್ಲೋಸ್ ಆಲ್ಕರಜ್ ವಿರುದ್ಧ 4-6, 6-4, 6-4, 6-4 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.
ಇದರೊಂದಿಗೆ ಹ್ಯಾಟ್ರಿಕ್ ವಿಂಬಲ್ಡನ್ ಪ್ರಶಸ್ತಿ ಗೆಲ್ಲುವ ಆಲ್ಕರಜ್ ಕನಸು ಭಗ್ನಗೊಂಡಿತು. 2023, 2024ರಲ್ಲಿ ಚಾಂಪಿಯನ್ ಆಗಿದ್ದ ಆಲ್ಕರಜ್, ಮತ್ತೊಂದು ಪ್ರಶಸ್ತಿ ನಿರೀಕ್ಷೆಯಲ್ಲಿದ್ದರು. ಆದರೆ ಫೈನಲಲ್ಲಿ ಸಿನ್ನರ್‌ಗೆ ಶರಣಾದರು. ಇದರೊಂದಿಗೆ ವಿಂಬಲ್ಡನ್‌ನಲ್ಲಿ ಸತತ 20 ಗೆಲುವುಗಳ ಓಟಕ್ಕೂ ತೆರೆ ಬಿತ್ತು.
ಸಿನ್ನರ್‌ಗೆ ಇದು ಈ ವರ್ಷ 2ನೇ ಹಾಗೂ ಒಟ್ಟಾರೆ 4ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ. ಸತತ 4ನೇ ಗ್ರ್ಯಾನ್‌ಸ್ಲಾಂ ಫೈನಲ್‌ನಲ್ಲಿ ಆಡಿದ ಸಿನ್ನರ್, 3ನೇ ಪ್ರಶಸ್ತಿ ಜಯಿಸಿದರು.
ಫ್ರೆಂಚ್ ಓಪನ್ ಸೋಲಿಗೆ ಸೇಡು ತೀರಿಸಿಕೊಂಡ ಸಿನ್ನರ್!
ಕಳೆದ ತಿಂಗಳು ಸಿನ್ನರ್ ಹಾಗೂ ಆಲ್ಕರಜ್ ಫ್ರೆಂಚ್ ಓಪನ್ ಗ್ರ್ಯಾನ್ ಸ್ಲಾಂ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದರು. ಆ ಪಂದ್ಯದಲ್ಲಿ ಆಲ್ಕರಜ್ ಗೆದ್ದಿದ್ದರು. ಪ್ಯಾರಿಸ್‌ನಲ್ಲಿ ಎದುರಾಗಿದ್ದ ಸೋಲಿಗೆ ಸಿನ್ನರ್, ಲಂಡನ್‌ನಲ್ಲಿ ಸೇಡು ತೀರಿಸಿಕೊಂಡಿದ್ದಾರೆ.
34.75 ಕೋಟಿ ರು: ಚಾಂಪಿಯನ್ ಆದ ಸಿನ್ನರ್‌ಗೆ 30 ಲಕ್ಷ ಪೌಂಡ್ (ಅಂದಾಜು 34.75 ಕೋಟಿ ರು.) ಬಹುಮಾನ ಮೊತ್ತ ದೊರೆಯಿತು.
17.61 ಕೋಟಿ ರು: ರನ್ನರ್ ಅಪ್ ಆದ ಆಲ್ಕರಜ್‌ಗೆ 15.2 ಲಕ್ಷ ಪೌಂಡ್ (ಅಂದಾಜು 17.61 ಕೋಟಿ ರು.) ಬಹುಮಾನ ಮೊತ್ತ ಸಿಕ್ಕಿತು.
ವೆರೋನಿಕಾ-ಎಲಿಸ್ ಜೋಡಿಗೆ ಒಲಿದ ಮಹಿಳಾ ಡಬಲ್ಸ್ ಪ್ರಶಸ್ತಿ
ರಷ್ಯಾದ ವೆರೋನಿಕಾ ಕುಡೆರ್ಮೆಟೋವಾ ಮತ್ತು ಬೆಲ್ಜಿಯಂನ ಎಲಿಸ್ ಮೆರ್ಟೆನ್ಸ್ ಜೋಡಿಯು ವಿಂಬಲ್ಡನ್ ಟೆನಿಸ್ ಗ್ರ್ಯಾನ್‌ಸ್ಲಾಂ ಮಹಿಳೆಯರ ಟೆನಿಸ್ ಗ್ರ್ಯಾನ್‌ಸ್ಲಾಂ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹ್ಸೀವ್ ಸು-ವೀ ಮತ್ತು ಜೆಲೆನಾ ಒಸ್ಪಾಪೆಂಕೊ ಎದುರು ಜಯಭೇರಿ
ಭಾನುವಾರ ನಡೆದ ಫೈನಲ್‌ನಲ್ಲಿ ಎಂಟನೇ ಶ್ರೇಯಾಂಕಿತ ವೆರೋನಿಕಾ ಕುಡೆರ್ಮೆಟೋವಾ-ಎಲಿಸ್ ಮೆರ್ಟೆನ್ಸ್ ಜೋಡಿ ಮೊದಲ ಸೆಟ್‌ನಲ್ಲಿ 3-6ರ ಹಿನ್ನಡೆ ಅನುಭವಿಸಿತು. ಅದರೆ ಎರಡನೆ ಹಾಗೂ ಮೂರನೇ ಸೆಟ್‌ನಲ್ಲಿ 6-2, 6-4 ಸೆಟ್‌ಗಳಲ್ಲಿ ಗೆಲುವು ದಾಖಲಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದರು.
ಹರಿಕೃಷ್ಣನ್ ಭಾರತದ 87ನೇ ಗ್ರ್ಯಾಂಡ್ ಮಾಸ್ಟರ್
ನವದೆಹಲಿ: ಭಾರತದ 87ನೇ ಚೆಸ್ ಗ್ರ್ಯಾಂಡ್ ಮಾಸ್ಟರ್ ಆಗಿ ತಮಿಳುನಾಡಿನ ಹರಿಕೃಷ್ಣನ್ ಹೊರಹೊಮ್ಮಿದ್ದಾರೆ. ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಲಾ ಪಾಗ್ನೆ ಅಂ.ರಾ. ಚೆಸ್ ಹಬ್ಬದಲ್ಲಿ 24 ವರ್ಷದ ಹರಿಕೃಷ್ಣನ್ ಗ್ರ್ಯಾಂಡ್ ಮಾಸ್ಟರ್ ಆಗಲು ಬೇಕಿರುವ ರೇಟಿಂಗ್ ಅಂಕಗಳನ್ನು ತಲುಪಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.