
ಬೆಂಗಳೂರಿನಲ್ಲಿ ನಡೆಯುವ 4ನೇ ಯುದ್ಧಕ್ಕೆ ಭಾರತ-ಆಸ್ಟ್ರೇಲಿಯಾ ಆಟಗಾರರು ಸಜ್ಜಾಗಿ ನಿಂತಿದ್ದಾರೆ. ಆದ್ರೆ ಟೀಂ ಇಂಡಿಯಾದಲ್ಲಿರುವ ಐವರು ಆಟಗಾರರಿಗೆ ಚಿನ್ನಸ್ವಾಮಿ ಸ್ಟೇಡಿಯಂ ಮಾತೃಭೂಮಿ. ಇಬ್ಬರು ಬೆಂಗಳೂರಿನಲ್ಲೇ ಆಡಿ ಬೆಳೆದಿದ್ದರೆ, ಮೂವರು ಐಪಿಎಲ್ನಲ್ಲಿ ಆರ್‌ಸಿಬಿ ಪರ ಆಡ್ತಿದ್ದಾರೆ. ಅವರಿಗೆ ಚಿನ್ನಸ್ವಾಮಿ ಸ್ಟೇಡಿಯಂ 2ನೇ ತವರು. ಈ ಐವರು ಇಂದು ಆಡಲಿದ್ದು, ಚಿನ್ನಸ್ವಾಮಿ ಯುದ್ಧ ಯಾರು ಗೆಲ್ಲಿಸಿಕೊಡ್ತಾರೆ ಅನ್ನೋ ಕುತೂಹಲವಿದೆ. ಈ ಐವರು ಪಂಚ ಪಾಂಡವರಂತೆ ಅವರ ಪಾತ್ರ ನಿರ್ವಹಿಸಬೇಕಿದೆ. ಇವರೇ ಇಂದಿನ ಮ್ಯಾಚ್ ವಿನ್ನರ್ಸ್.
ಧರ್ಮರಾಯನ ಹಾಗೆ ಶಾಂತವಾಗಿ ಬ್ಯಾಟಿಂಗ್ ಮಾಡ್ತಾರಾ ಕೇದರ್..?
ಮಹಾಭಾರತದಲ್ಲಿ ಧರ್ಮರಾಜ ಹೇಗೋ ಹಾಗೆ ಕೇದರ್ ಜಾಧವ್. ಸದಾ ಶಾಂತವಾಗಿರುವ ಕೇದರ್, ಸೈಲೆಂಟ್ ಕಿಲ್ಲರ್. ಎಚ್ಚರಿಕೆಯಿಂದಲೇ ಬ್ಯಾಟಿಂಗ್ ಮಾಡಿ ರನ್ ಗುಡ್ಡೆಹಾಕ್ತಾರೆ. ಪದೇಪದೇ ಬ್ಯಾಟಿಂಗ್ ಕ್ರಮಾಂಕ ಬದಲಾವಣೆಯಿಂದಾಗಿ ವಿಫಲವಾಗಿದ್ದಾರೆ. ಆದ್ರೂ ತಮ್ಮ 2ನೇ ತವರು ಬೆಂಗಳೂರಿನಲ್ಲಿ ಇಂದು ಒಳ್ಳೆ ಫರ್ಫಾಮೆನ್ಸ್ ನೀಡಲು ಕಾದು ಕುಳಿತಿದ್ದಾರೆ. ಮ್ಯಾಚ್ ಫಿನಿಶರ್ ಆಗಿರುವ ಕೇದರ್ ಇಂದು ಆ ಪಾತ್ರ ನಿರ್ವಹಿಸಿದ್ರೂ ಆಶ್ಚರ್ಯವಿಲ್ಲ.
ಬಲ ಭೀಮನಂತೆ ಬ್ಯಾಟ್ ಬೀಸ್ತಾರಾ ಕೊಹ್ಲಿ..?
10 ವರ್ಷಗಳಿಂದ ಆರ್‌ಸಿಬಿ ಪರ ಆಡುತ್ತಿರುವ ವಿರಾಟ್ ಕೊಹ್ಲಿಗೆ ಚಿನ್ನಸ್ವಾಮಿ ಸ್ಟೇಡಿಯಂ 2ನೇ ತವರು. ಆರ್‌ಸಿಬಿ ಪರ ಕೊಹ್ಲಿ ಇಲ್ಲಿ ಸೆಂಚುರಿಗಳನ್ನ ಸಿಡಿಸಿದ್ದಾರೆ. ಆದರೆ ಇದುವರೆಗೂ ಟೀಂ ಇಂಡಿಯಾ ಪರ ಬೆಂಗಳೂರಲ್ಲಿ ಕ್ಲಿಕ್ ಆಗೇ ಇಲ್ಲ. ಮಿಡ್ಲ್ ಆರ್ಡರ್ ಬಲವಾಗಿರುವ ಕೊಹ್ಲಿ, ಬಲ ಭೀಮನಂತೆ ಬ್ಯಾಟ್ ಬೀಸಿದ್ರೆ ಕಾಂಗರೂ ಬೇಟೆ ಕನ್ಫರ್ಮ್. ಕಿಲ್ಲರ್ ಕೊಹ್ಲಿ ಇಂದಿನ ಬ್ಯಾಟಿಂಗ್ ಟ್ರಂಪ್ಕಾರ್ಡ್ ಆಗಿರೋದ್ರಿಂದ ಇಂದು ರನ್ ಹೊಳೆ ಗ್ಯಾರಂಟಿ.
ಅರ್ಜುನನಂತೆ ಆಸೀಸ್ ಚಕ್ರವ್ಯೂಹ ಬೇಧಿಸ್ತಾರಾ ಪಾಂಡೆ..?
ಮಧ್ಯಮ ಕ್ರಮಾಂಕದ ಬಲ ಮನೀಶ್ ಪಾಂಡೆ. ಮಹಾಭಾರತದಲ್ಲಿ ಅರ್ಜುನ ಹೇಗೆ ಮುಖ್ಯಪಾತ್ರ ನಿರ್ವಹಿಸ್ತಾರೋ ಹಾಗೆ ಪಂದ್ಯದಲ್ಲಿ ಪಾಂಡೆ ಮಹತ್ವದ ಪಾತ್ರ ವಹಿಸಬೇಕಿದೆ. ಮಿಡ್ಲ್ ಆರ್ಡರ್ನಲ್ಲಿ ಮನೀಶ್ ಉತ್ತಮ ಪ್ರದರ್ಶನ ನೀಡಿದ್ರೆ ಅರ್ಧ ಪಂದ್ಯ ಗೆದ್ದಂತೆಯೇ. ಇಂದೋರ್ನಲ್ಲಿ ಆರ್ಭಟಿಸಿದ್ದ ಪಾಂಡೆ, ಬೆಂಗಳೂರಿನಲ್ಲೂ ಅಬ್ಬರಿಸೋ ಚಾನ್ಸಸ್ ಇದೆ. ಪಾಂಡೆಗೆ ತವರಿನಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯ. ಹೀಗಾಗಿ ಸ್ವಲ್ಪ ಎಕ್ಸೈಟ್ ಆಗಿದ್ದಾರೆ.
ನಕುಲ-ಸಹದೇವರಂತೆ ಚಾಣಾಕ್ಷತೆ ಮೆರೆಯುತ್ತಾರಾ ರಾಹುಲ್-ಚಹಲ್..?
ಮಹಾಭಾರತದಲ್ಲಿ ಮೊದಲ ಮೂವರಿಗಿಂತ ಅತಿ ಬುದ್ದಿವಂತ ಹಾಗೂ ಚಾಣಾಕ್ಷರು ನಕುಲ-ಸಹದೇವ. ಟೀಂ ಇಂಡಿಯಾದಲ್ಲಿ ಹಾಗೆ. ಕೆಎಲ್ ರಾಹುಲ್ ಮತ್ತು ಯುಜವೇಂದ್ರ ಚಹಲ್ ತಮ್ಮ ಚಾಣಾಕ್ಷ ಆಟದಿಂದಲೇ ಎದುರಾಳಿಗಳನ್ನ ಕಿಲ್ ಮಾಡ್ತಾರೆ. ರಾಹುಲ್ ಈ ಸಿರೀಸ್ನಲ್ಲಿ ಯಾವ್ದೇ ಮ್ಯಾಚ್ ಆಡಿಲ್ಲ. ಆದ್ರೆ ನಿನ್ನೆ ಮೊನ್ನೆ ಹೆಚ್ಚಾಗಿ ಪ್ರಾಕ್ಟೀಸ್ ಮಾಡಿದ್ದು ನೋಡಿದ್ರೆ ಇಂದು ಅವರು ಆಡೇ ಆಡ್ತಾರೆ. ಅಲ್ಲಿಗೆ ತಮ್ಮ ಚಾಣಾಕ್ಷತನದಿಂದ ಪಂದ್ಯ ಗೆಲ್ಲಿಸಲು ರೆಡಿಯಾಗಿದ್ದಾರೆ.
ತಮ್ಮ ಬುದ್ಧಿವಂತಿಕೆಯಿಂದಲೇ ಕಾಂಗರೂ ಬ್ಯಾಟ್ಸ್ಮನ್ಗಳ ಬೇಟೆಯಾಡೋ ಚಾಣಾಕ್ಷ ಬೌಲರ್ ಯುಜವೇಂದ್ರ ಚಹಲ್. ರಿಸ್ಟ್ ಸ್ಪಿನ್ನರ್ ಚಹಲ್ ಇದೇ ವರ್ಷ ಫೆಬ್ರವರಿಯಲ್ಲಿ ಇಲ್ಲಿಯೇ ಇಂಗ್ಲೆಂಡ್ ವಿರುದ್ಧ 6 ವಿಕೆಟ್ ಪಡೆದು ಟಿ20 ಪಂದ್ಯ ಗೆಲ್ಲಿಸಿದ್ದರು. ಅದೇ ಪರ್ಫಾಮೆನ್ಸ್ ರಿಪೀಟ್ ಮಾಡಲು ಎದುರು ನೋಡ್ತಿದ್ದಾರೆ.
ಒಟ್ನಲ್ಲಿ ಐವರು ಆಟಗಾರರಿಗೆ ಚಿನ್ನಸ್ವಾಮಿ ತವರು ಪಿಚ್. ಇದು ಟೀಂ ಇಂಡಿಯಾಗೆ ವರವಾದ್ರೆ ಆಸ್ಟೇಲಿಯಾಗೆ ಶಾಪವಾಗಿ ಪರಿಣಮಿಸುತ್ತೆ. ಪಂಚ ಪಾಂಡವರಲ್ಲಿ ಯಾರಾದ್ರೂ ಒಬ್ರು ಆರ್ಭಟಿಸಿದ್ರೆ ನಮ್ಮದೇ ಜಯ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.