
ಚಾಂಪಿಯನ್ಸ್ ಟ್ರೋಫಿಯಲ್ಲಿ ಗೋಲ್ಡನ್ ಬ್ಯಾಟ್ ಗೆಲ್ಲಲು ಇಷ್ಟು ದಿನ ಬೇರೆ ಬೇರೆ ತಂಡದ ಆಟಗಾರರ ನಡುವೆ ಸ್ಪರ್ಧೆ ಇರುತ್ತಿತ್ತು. ಆದರೆ ಈ ಬಾರಿ ಮಾತ್ರ ಭಾರತೀಯ ಆಟಗಾರರ ನಡುವೆ ಫೈಟ್ ಬಿದ್ದಿದೆ. ಅದು ತ್ರಿಮೂರ್ತಿಗಳ ನಡುವೆ. ಹಾಗಾದ್ರೆ ಈ ಸಲ ಗೋಲ್ಡನ್ ಬ್ಯಾಟ್ ರೇಸ್ನಲ್ಲಿ ಇರುವವರು ಯಾರು? ಇಲ್ಲಿದೆ ವಿವರ.
ಗೋಲ್ಡನ್ ಬ್ಯಾಟ್'ಗೆ ತ್ರಿಮೂರ್ತಿಗಳ ನಡುವೆ ಬಿದ್ದಿದೆ ಬಿಗ್ ಫೈಟ್
ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಟೀಂ ಇಂಡಿಯಾ ಇನ್ನೊಂದು ಪಂದ್ಯ ಗೆಲ್ಲಬೇಕು. ಆ ಪಂದ್ಯದಲ್ಲಿ ಹೀರೋ ಆಗೋಕೆ 11 ಆಟಗಾರರು ಕಾದು ಕುಳಿತಿದ್ದಾರೆ. ಆದರೆ ಮೂವರು ಮಾತ್ರ ಹೀರೋ ಆಗುವುದರ ಜೊತೆ ಗೋಲ್ಡನ್ ಬ್ಯಾಟ್ ಹಿಡಿಯಲು ಕಾದು ಕುಳಿತಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಗರಿಷ್ಠ ರನ್ ಸರದಾರರಿಗೆ ಗೋಲ್ಡನ್ ಬ್ಯಾಟ್ ಮತ್ತು ಗರಿಷ್ಠ ವಿಕೆಟ್ ಟೇಕರ್ಗೆ ಗೋಲ್ಡನ್ ಬಾಲ್ ಕೊಡಲಾಗುತ್ತದೆ. ಗೋಲ್ಡನ್ ಬಾಲ್ ಪಾಕಿಸ್ತಾನದ ಹಸನ್ ಅಲಿ ಪಾಲಾಗುವುದು ಹೆಚ್ಚುಕಮ್ಮಿ ಖಚಿತ. ಆದರೆ ಗೋಲ್ಡನ್ ಬ್ಯಾಟ್'ಗಾಗಿ ಟೀಂ ಮೂವರ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಆ ಮೂವರು ಭಾರತೀಯ ಆಟಗಾರರೇ ಎನ್ನುವುದೇ ವಿಶೇಷ.
ಹೌದು, ಗೋಲ್ಡನ್ ಬ್ಯಾಟ್ ಹಿಡಿಯಲು ಈ ತ್ರಿಮೂರ್ತಿಗಳ ನಡ್ವೆ ಫೈಟ್ ಬಿದ್ದಿದೆ. ಓಪನರ್'ಗಳಾದ ಶಿಖರ್ ಧವನ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಗೋಲ್ಡನ್ ಬ್ಯಾಟ್ ಹಿಡಿಯುವ ರೇಸ್ನಲ್ಲಿದ್ದಾರೆ. ಫೈನಲ್ ಫೈಟ್ನಲ್ಲಿ ಪಾಕಿಸ್ತಾನ ವಿರುದ್ಧ ಯಾರೋ ಅಬ್ಬರಿಸ್ತಾರೋ ಅವರ ಕೈಗೆ ಗೋಲ್ಡನ್ ಬ್ಯಾಟ್ ಸಿಗಲಿದೆ.
ಅದ್ಭುತ ಫಾರ್ಮ್ನಲ್ಲಿ ತ್ರಿಮೂರ್ತಿಗಳು
ಈ ಮೂವರು ಆಟಗಾರರು ಅದ್ಭುತ ಫಾರ್ಮ್ನಲ್ಲಿದ್ದಾರೆ. ಎಲ್ಲರೂ ಸ್ಫೋಟಕ ಬ್ಯಾಟ್ಸ್ಮನ್ಗಳೇ. ಭಾರತ ಆಡಿರುವ ನಾಲ್ಕು ಪಂದ್ಯಗಳಲ್ಲಿ ತಲಾ ಮೂರಲ್ಲಿ ಇವರು ಕ್ಲಿಕ್ ಆಗಿದ್ದಾರೆ. ಟೀಂ ಇಂಡಿಯಾ ಫೈನಲ್ಗೇರಲು ಈ ತ್ರಿಮೂರ್ತಿಗಳ ಬ್ಯಾಟಿಂಗ್ ಕಾರಣ. ಆ ಮಟ್ಟಕ್ಕೆ ರನ್ ಹೊಳೆ ಹರಿಸಿದ್ದಾರೆ.
ಈ ಸಲದ ಚಾಂಪಿಯನ್ಸ್ ಟ್ರೋಫಿಯಲ್ಲಿ ಈ ಮೂವರು ಸಾಧನೆ ಹೀಗಿದೆ. ಶಿಖರ್ ಧವನ್ 4 ಪಂದ್ಯಗಳಲ್ಲಿ 79.25ರ ಸರಾಸರಿಯಲ್ಲಿ 317 ರನ್ ಹೊಡೆದಿದ್ದಾರೆ. 102.25ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿ ಒಂದು ಶತಕ, 2 ಅರ್ಧಶತಕ ದಾಖಲಿಸಿದ್ದಾರೆ. ಇನ್ನು ರೋಹಿತ್ ಶರ್ಮಾ 101.25ರ ಸರಾಸರಿಯಲ್ಲಿ 304 ರನ್ ಬಾರಿಸಿದ್ದಾರೆ. 87.60ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿ ಒಂದು ಸೆಂಚುರಿ, ಎರಡು ಹಾಫ್ ಸೆಂಚುರಿ ಹೊಡೆದಿದ್ದಾರೆ. ನಾಯಕ ವಿರಾಟ್ ಕೊಹ್ಲಿ 253.00ರ ಸರಾಸರಿಯಲ್ಲಿ 253 ರನ್ ಸಿಡಿಸಿದ್ದಾರೆ. 100.39ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿರುವ ವಿರಾಟ್, ಮೂರು ಅರ್ಧಶತಕ ದಾಖಲಿಸಿದ್ದಾರೆ.
ತ್ರಿವಳಿಗಳಲ್ಲಿ ಯಾರಿಗೆ ಗೋಲ್ಡನ್ ಬ್ಯಾಟ್..?
ಈಗ ಈ ತ್ರಿಮೂರ್ತಿಗಳಲ್ಲಿ ಗೋಲ್ಡನ್ ಬ್ಯಾಟ್ ಯಾರಿಗೆ ಸಿಗುತ್ತೆ ಅನ್ನೋ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಇದೆ. ಮೂವರು ಒಳ್ಳೆ ಫಾರ್ಮ್ನಲ್ಲಿದ್ದಾರೆ. ಪಾಕಿಸ್ತಾನ ವಿರುದ್ಧ ಅದ್ಭುತ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಹೀಗಾಗಿಯೇ ಯಾರಿಗೆ ಗೋಲ್ಡನ್ ಬ್ಯಾಟ್ ಸಿಗುತ್ತೆ ಅನ್ನೋದನ್ನ ಹೇಳೋದು ಕಷ್ಟ. ಪಾಕಿಸ್ತಾನ ವಿರುದ್ಧ ಪಂದ್ಯ ಯಾರು ಗೆಲ್ಲಿಸಿಕೊಡ್ತಾರೋ ಅವರೇ ಹೀರೋ. ಅವರಿಗೆ ಈ ಗೋಲ್ಡನ್ ಬ್ಯಾಟ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.