
ಲಂಡನ್(ಆ. 13): ವಿಶ್ವದ ಅತ್ಯಂತ ವೇಗದ ಮನುಷ್ಯನೆಂದು ಖ್ಯಾತನಾಗಿರುವ ಉಸೇನ್ ಬೋಲ್ಟ್ ತಮ್ಮ ವೃತ್ತಿಜೀವನದ ಕೊನೆಯ ಓಟದಲ್ಲಿ ಗಾಯಗೊಂಡು ನೆಲಕ್ಕೆ ಕುಸಿದುಬಿದ್ದು ನಿರಾಸೆ ಅನುಭವಿಸಿದ್ದಾರೆ. ಸೋಲಿಲ್ಲದ ಸರದಾರನೆನಿಸಿದ್ದ ಬೋಲ್ಟ್ ಅವರ ಕೊನೆಯ ಎರಡು ಓಟಗಳು ಸೋಲಿನಲ್ಲಿ ಅಂತ್ಯಗೊಂಡಂತಾಗಿದೆ. ನಿನ್ನೆ ನಡೆದ ವಿಶ್ವ ಅಥ್ಲೆಟಿಕ್ ಚಾಂಪಿಯನ್'ಶಿಪ್'ನ 4X100 ರಿಲೇ ಓಟದ ಸ್ಪರ್ಧೆಯಲ್ಲಿ ಕೊನೆಯವರಾಗಿ ಓಡಿದ ಜಮೈಕಾದ ಉಸೇನ್ ಬೋಲ್ಟ್ ಮಧ್ಯಮಾರ್ಗದಲ್ಲೇ ಎಡಗಾಲಿಗೆ ಗಾಯಗೊಂಡು ಕುಂಟುತ್ತಾ ಹಾಗೆಯೇ ನೆಲಕ್ಕೆ ಕುಸಿದರು. ಗೆಲುವು ಸಾಧಿಸುವುದಿರಲಿ, ಸ್ಪರ್ಧೆಯನ್ನೂ ಪೂರ್ಣಗೊಳಿಸಲು ಅವರಿಗೆ ಸಾಧ್ಯವಾಗಲಿಲ್ಲ. ಈ ಸ್ಪರ್ಧೆಯಲ್ಲಿ ಆತಿಥೇಯ ಬ್ರಿಟನ್ ದೇಶದ ತಂಡವು ಗೆಲುವಿನ ಸಂಭ್ರಮ ಪಡೆಯಿತು. ಆದರೆ, ಬಹುತೇಕರ ಗಮನ ನೆಟ್ಟಿದ್ದು ಉಸೇನ್ ಬೋಲ್ಟ್ ಅವರತ್ತೆಯೇ.
ಇದಕ್ಕೂ ಮುನ್ನ ಇದೇ ಚಾಂಪಿಯನ್'ಶಿಪ್'ನಲ್ಲಿ ಉಸೇನ್ ಬೋಲ್ಟ್ ವೈಯಕ್ತಿಕ 100 ಮೀಟರ್ ಓಟದ ಸ್ಪರ್ಧೆಯಲ್ಲಿ 3ನೇಯವರಾಗಿ ಗುರಿ ಮುಟ್ಟಿ ನಿರಾಸೆ ಅನುಭವಿಸಿದ್ದರು. ಆಗಲೇ ಅವರಿಗೆ ಕಾಲು ನೋವಿನ ಬಾಧೆ ಶುರುವಾಗಿತ್ತು. ಆದರೂ 100 ಮೀಟರ್ ರಿಲೇಯಲ್ಲಿ ಪಾಲ್ಗೊಳ್ಳಲು ಅವರು ನಿರ್ಧರಿಸಿದ್ದರು. ಇದೀಗ ಅವರು ತಮ್ಮ ವೃತ್ತಿಯ ಕೊನೆಯ ಓಟದಲ್ಲಿ ಸ್ಪರ್ಧೆಯನ್ನೂ ಪೂರ್ಣಗೊಳಿಸಲಾಗದೇ ಹೋದದ್ದು ನಿಜಕ್ಕೂ ವಿಪರ್ಯಾಸವೇ ಸರಿ.
ಯಾಕೆಂದರೆ ಉಸೇನ್ ಬೋಲ್ಟ್ ಓಟವೆಂದರೆ ಅದು ಚಿನ್ನದ ಓಟವೆಂದೇ ಶತಃಸಿದ್ಧ. ಅವರಿಗೆ ಅವರೇ ಸರಿಸಾಟಿ. 100 ಮೀ., 200 ಮೀ. ಹಾಗೂ 4X100 ರಿಲೇ ಓಟದಲ್ಲಿ ಅವರನ್ನು ಮೀರಿಸುವವರಿಲ್ಲ. 100 ಮತ್ತು 200 ಮೀಟರ್ ಓಟದಲ್ಲಿ ಅವರು ಸ್ಥಾಪಿಸಿರುವ ವಿಶ್ವದಾಖಲೆಯನ್ನು ಮುರಿಯಲು ಕಷ್ಟಸಾಧ್ಯವೆಂಬ ಮಾತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.