ಐಪಿಎಲ್ 2019: ಐವರು ದುಬಾರಿ ವಿದೇಶಿ ಆಟಗಾರರ ಮೇಲೆ ಎಲ್ಲರ ಚಿತ್ತ!

By Web DeskFirst Published Mar 22, 2019, 4:10 PM IST
Highlights

2019ರ ಐಪಿಎಲ್ ಟೂರ್ನಿ ಹಲವು ಕುತೂಹಲಕ್ಕೆ ಕಾರಣವಾಗಿದೆ. ಈ ಬಾರಿ ಟೂರ್ನಿಯಲ್ಲಿ ವಿದೇಶಿ ಆಟಗಾರರು ಮಿಂಚಿನ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ. ಅದರಲ್ಲೂ 5 ವಿದೇಶಿ ಆಟಗಾರರ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಹರಾಜಿನಲ್ಲಿ ಗರಿಷ್ಠ ಮೊತ್ತ ಜೇಬಿಗಿಳಿಸಿ ಅಚ್ಚರಿ ನೀಡಿದ ಐವರು ವಿದೇಶಿ ಆಟಾಗರರು ಇದೀಗ 12ನೇ ಆವೃತ್ತಿಯಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. 

ಬೆಂಗಳೂರು(ಮಾ.19): ಭಾರತದಲ್ಲೀಗ ಐಪಿಎಲ್ ಜ್ವರ. ಚುಟುಕು ಹೋರಾಟಕ್ಕೆ ಕ್ರಿಕೆಟಿಗರು ಭರ್ಜರಿ ಅಭ್ಯಾಸದಲ್ಲಿ ತೊಡಗಿದ್ದರೆ, ಅಭಿಮಾನಿಗಳು ಪಂದ್ಯ ಆರಂಭಕ್ಕೆ ಕಾಯುತ್ತಿದ್ದಾರೆ. ಮಾ.23 ರಿಂದ ಐಪಿಎಲ್ ಕ್ರಿಕೆಟ್ ಆರಂಭಗೊಳ್ಳಲಿದೆ. 2019ರಲ್ಲಿ ಕಣಕ್ಕಿಳಿಯುತ್ತಿರುವ ಐಪಿಎಲ್ ಆಟಗಾರರ ಪೈಕಿ ಐವರು ದುಬಾರಿ ವಿದೇಶಿ ಆಟಗಾರರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. 

ಸ್ಯಾಮ್ ಕುರ್ರನ್ (ಕಿಂಗ್ಸ್ ಇಲೆವೆನ್ ಪಂಜಾಬ್)


2018ರಲ್ಲಿ ಇಂಗ್ಲೆಂಡ್ ತಂಡಕ್ಕೆ ಪಾದಾರ್ಪಣೆ ಮಾಡಿದ ಸ್ಯಾಮ್ ಕುರ್ರನ್, ಒಂದೇ ವರ್ಷದಲ್ಲಿ ಅತ್ಯುತ್ತಮ ಆಲ್ರೌಂಡರ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.  ಟಿ20 ಕ್ರಿಕೆಟ್‌ಗೆ ಹೇಳಿ ಮಾಡಿಸಿದ ಈ ಕ್ರಿಕೆಟಿಗ ಇನ್ನೂ ಇಂಗ್ಲೆಂಡ್ ತಂಡದ ಟಿ20ಗೆ ಪಾದಾರ್ಪಣೆ ಮಾಡಿಲ್ಲ. ಆದರೆ ಐಪಿಎಲ್ ಈ ಪ್ರತಿಭಾನ್ವಿತ ಕ್ರಿಕೆಟಿಗನಿಗೆ ವೇದಿಕೆ ಒದಗಿಸಿದೆ. ಈ ಬಾರಿಯ ಹರಾಜಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಬರೋಬ್ಬರಿ 7.20 ಕೋಟಿ ರೂಪಾಯಿ ನೀಡಿ ಖರೀದಿಸಿತು. ಈ ಮೂಲಕ 2019ರ ಹರಾಜಿನಲ್ಲಿ ಗರಿಷ್ಠ ಬೆಲೆಗೆ ಹರಾಜಾದ ಕ್ರಿಕೆಟಿಗ ಏನಿಸಿಕೊಂಡಿದ್ದಾರೆ. ಸ್ಯಾಮ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

ಕೊಲಿನ್ ಇನ್‌ಗ್ರಾಂ(ಡೆಲ್ಲಿ ಕ್ಯಾಪಿಟಲ್ಸ್)


ಸೌತ್ ಆಫ್ರಿಕಾ ಕ್ರಿಕೆಟಿಗ ಕೊಲಿನ್ ಇನ್‌ಗ್ರಾಂ ಆಸ್ಟ್ರೇಲಿಯಾದ ಬಿಗ್‌ಬ್ಯಾಶ್ ಲೀಗ್ ಟೂರ್ನಿ ಮೂಲಕ ಹೆಚ್ಚು ಜನಪ್ರಿಯರಾಗಿದ್ದಾರೆ. ಆಡಿಲೇಡ್ ಸ್ಟ್ರೈಕರ್ಸ್ ಪರ ಆಡುತ್ತಿರುವ ಇನ್‌ಗ್ರಾಂ ಸ್ಫೋಟಕ ಬ್ಯಾಟ್ಸಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಬಾರಿಯ ಹರಾಜಿನಲ್ಲಿ ಇನ್‌ಗ್ರಾಂಗೆ ಡೆಲ್ಲಿ ಕ್ಯಾಪಿಟಲ್ಸ್ 6.40 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ದುಬಾರಿ ಮೊತ್ತ ಜೇಬಿಗಿಳಿಸಿರುವ ಇನ್‌ಗ್ರಾಂ ಡೆಲ್ಲಿ ತಂಡ ಅದೃಷ್ಠ ಬದಲಾಯಿಸುತ್ತಾರ ಅನ್ನೋದೇ ಸದ್ಯದ ಕುತೂಹಲ.

ಕಾರ್ಲೋಸ್ ಬ್ರಾಥ್ವೈಟ್ (ಕೋಲ್ಕತಾ ನೈಟ್ ರೈಡರ್ಸ್)


ವೆಸ್ಟ್ ಇಂಡೀಸ್ ದೈತ್ಯ ಕಾರ್ಲೋಸ್ ಬ್ರಾಥ್ವೈಟ್ ಏಕಾಏಕಿ ಹೀರೋ ಆಗಿ ಮಿಂಚಿದ್ದು 2016ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ. ವಿಂಡೀಸ್ ಗೆಲುವಿಗೆ ಅಂತಿಮ 6 ಎಸೆತದಲ್ಲಿ 19 ರನ್ ಅವಶ್ಯಕತೆ ಇತ್ತು. ಸತತ 4 ಸಿಕ್ಸರ್ ಸಿಡಿಸಿ ವಿಂಡೀಸ್‌ಗೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. ಬಳಿಕ ನೇರವಾಗಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಕಾರ್ಲೋಸ್, ಡೆಲ್ಲಿ ಡೇರ್‌ಡೆವಿಲ್ಸ್ ಪರ 14 ಪಂದ್ಯ ಆಡಿದ್ದಾರೆ.  ಆದರೆ ಟಿ20 ವಿಶ್ವಕಪ್ ರೀತಿ ಪ್ರದರ್ಶನ ಮೂಡಿ ಬಂದಿಲ್ಲ. ಈ ಬಾರಿ ಹರಾಜಿನಲ್ಲಿ 5 ಕೋಟಿ ರೂಪಾಯಿಗೆ ಕೆಕೆಆರ್ ತಂಡ ಸೇರಿಕೊಂಡಿದ್ದಾರೆ. ದುಬಾರಿ ಮೊತ್ತ ಪಡೆದಿರುವ ಕಾರ್ಲೋಸ್ ತಂಡಕ್ಕೆ ಮತ್ತೊಂದು ಐಪಿಎಲ್ ಟ್ರೋಫಿ ಗೆಲ್ಲಿಸಿಕೊಡುತ್ತಾರ ಅನ್ನೋದೇ ಸದ್ಯಕ್ಕೆ ಕಾಡ್ತಿರುವ ಪ್ರಶ್ನೆ.

ನಿಕೋಲಸ್ ಪೂರನ್(ಸನ್‌ರೈಸರ್ಸ್ ಹೈದರಾಬಾದ್)


ವೆಸ್ಟ್ ಇಂಡೀಸ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಬೆಳಕಿಗೆ ಬಂದಿದ್ದು, ಕೆರಿಬಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ. ಟ್ರಿನಿಡ್ಯಾಡ್ ಅಂಡ್ ಟೊಬ್ಯಾಗೋ  ತಂಡದ ಪರ ಕಣಕ್ಕಿಳಿದ ನಿಕೋಲಸ್ 24 ಎಸೆತದಲ್ಲಿ 54 ರನ್ ಸಿಡಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು. ಎಂ.ಎಸ್.ಧೋನಿ ಅಭಿಮಾನಿಯಾಗಿರುವ ಪೂರನ್ 4.20 ಕೋಟಿ ರೂಪಾಯಿ ನೀಡಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಖರೀದಿಸಿದೆ. ಅತ್ಯುತ್ತಮ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಹುಡುಕಾಟದಲ್ಲಿದ್ದ ರೈಸರ್ಸ್ ಅಷ್ಟೇ ಅತ್ಯುತ್ತಮ ಆಯ್ಕೆ ಮಾಡಿದೆ. ಹೀಗಾಗಿ ಈ ಬಾರಿ ಸನ್‌ರೈಸರ್ಸ್ ತಂಡ ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.

ಶಿಮ್ರೊನ್ ಹೆಟ್ಮೆಯರ್(ರಾಯಲ್ ಚಾಲೆಂಜರ್ಸ್ ಬೆಂಗಳೂರು)


ವೆಸ್ಟ್ ಇಂಡೀಸ್ ತಂಡದ ಯುವ ಹಾಗೂ ಸ್ಫೋಟಕ ಬ್ಯಾಟ್ಸ್‌ಮನ್ ಶಿಮ್ರೊನ್ ಹೆಟ್ಮೆಯರ್‌ಗೆ ಇದು ಚೊಚ್ಚಲ ಐಪಿಎಲ್ ಟೂರ್ನಿ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿಕೊಂಡಿರುವ ಹೆಟ್ಮೆಯರ್‌ಗೆ ಆರ್‌ಸಿಬಿ 4.20 ಕೋಟಿ ರೂಪಾಯಿ ನೀಡಿದೆ. ವಿರಾಟ್ ಕೊಹ್ಲಿ ಸೈನ್ಯದ ಬ್ಯಾಟಿಂಗ್ ಬಲ ಮತ್ತಷ್ಟು ಹೆಚ್ಚಿಸಿರುವ ಶಿಮ್ರೊನ್, RCB ಲಕ್ ಬದಲಿಸುವ ವಿಶ್ವಾಸದಲ್ಲಿದ್ದಾರೆ.

click me!