
ನವದೆಹಲಿ[ಮೇ.10]: ಕ್ರೊವೇಷಿಯಾದ ಮಾಜಿ ಫುಟ್ಬಾಲಿಗ, ಮಾಜಿ ಕೋಚ್ ಇಗೊರ್ ಸ್ಟಿಮಾಕ್ ಭಾರತ ಪುರುಷರ ಫುಟ್ಬಾಲ್ ತಂಡದ ನೂತನ ಕೋಚ್ ಆಗಿ ನೇಮಕಗೊಳ್ಳಲಿದ್ದಾರೆ. ಗುರುವಾರ ಇಲ್ಲಿ ನಡೆದ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಐಎಫ್‌ಎಫ್) ತಾಂತ್ರಿಕ ಸಮಿತಿ ಅವರ ಹೆಸರನ್ನು ಕಾರ್ಯಕಾರಿ ಸಮಿತಿಗೆ ಶಿಫರಾಸು ಮಾಡಿದೆ.
ಅಂತಿಮ ಸುತ್ತಿಗೆ ನಾಮನಿರ್ದೇಶನಗೊಂಡಿದ್ದ ನಾಲ್ವರು ಅಭ್ಯರ್ಥಿಗಳ ಸಂದರ್ಶನವನ್ನು ತಾಂತ್ರಿಕ ಸಮಿತಿ ಗುರುವಾರ ನಡೆಸಿತು. ಎಐಎಫ್‌ಎಫ್ ಶುಕ್ರವಾರ ಅಧಿಕೃತವಾಗಿ ಸ್ಟಿಮಾಕ್ ಹೆಸರನ್ನು ಪ್ರಕಟಿಸುವ ನಿರೀಕ್ಷೆ ಇದ್ದು, ಆರಂಭದಲ್ಲಿ ಅವರ ಕಾರ್ಯಾವಧಿ 3 ವರ್ಷಗಳಾಗಿರಲಿದೆ. ಥಾಯ್ಲೆಂಡ್‌ನಲ್ಲಿ ನಡೆಯಲಿರುವ ಕಿಂಗ್ಸ್ ಕಪ್ ಅವರಿಗೆ ಮೊದಲ ಪರೀಕ್ಷೆಯಾಗಲಿದೆ.
ಎಎಫ್‌ಸಿ ಏಷ್ಯನ್ ಕಪ್‌ನಲ್ಲಿ ಭಾರತ ನಾಕೌಟ್ ಹಂತ ಪ್ರವೇಶಿಸದ ಕಾರಣ ಸ್ಟೀಫನ್ ಕಾನ್ಸ್‌ಟೆಂಟೈನ್ ಪ್ರಧಾನ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆ ಬಳಿಕ ಕೋಚ್ ಸ್ಥಾನ ಖಾಲಿ ಇತ್ತು. ಕೋಚ್ ಹುದ್ದೆಗೆ 250ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಸ್ಟಿಮಾಕ್, ದ.ಕೊರಿಯಾದ ಲೀ ಮಿಂಗ್, ಸ್ಪೇನ್‌ನಮ ಆಲರ್ಬ್ ರೋಕಾ ಹಾಗೂ ಸ್ವೀಡನ್‌ನ ಹಾಕನ್ ಎರಿಕ್ಸನ್‌ರನ್ನು ಅಂತಿಮ ಸುತ್ತಿನ ಸಂದರ್ಶನಕ್ಕೆ ಕರೆಯಲಾಗಿತ್ತು. ಸ್ಟಿಮಾಕ್ ಮಾತ್ರ ನವದೆಹಲಿಗೆ ಆಗಮಿಸಿ ಸಂದರ್ಶನದಲ್ಲಿ ಪಾಲ್ಗೊಂಡರು. ಇನ್ನುಳಿದ ಮೂವರು ಸ್ಕೈಪ್ ಮೂಲಕ ಸಂದರ್ಶನ ನೀಡಿದರು.
51 ವರ್ಷದ ಸ್ಟಿಮಾಕ್, 1998ರ ಫಿಫಾ ವಿಶ್ವಕಪ್‌ನಲ್ಲಿ 3ನೇ ಸ್ಥಾನ ಪಡೆದಿದ್ದ ಕ್ರೊವೇಷಿಯಾ ತಂಡದ ಸದಸ್ಯರಾಗಿದ್ದರು. ಬಳಿಕ 2012ರಿಂದ 2013ರ ವರೆಗೂ ಕ್ರೊವೇಷಿಯಾ ತಂಡದ ಕೋಚ್ ಆಗಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.