ಮುಷ್ತಾಕ್ ಅಲಿ ಟ್ರೋಫಿ: ಫೈನಲ್ ಹೊಸ್ತಿಲಲ್ಲಿ ಕರ್ನಾಟಕ

By Web DeskFirst Published Mar 12, 2019, 9:14 AM IST
Highlights

ಸತತ 10 ಗೆಲುವು ಕಂಡಿರುವ ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ ಇದೀಗ ಸೂಪರ್ ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಹಾಲಿ ರಣಜಿ ಟ್ರೋಫಿ ಹಾಗೂ ಇರಾನಿ ಟ್ರೋಫಿ ಚಾಂಪಿಯನ್ ವಿದರ್ಭ ಎದುರು ಸೆಣಸಲು ಸಜ್ಜಾಗಿದೆ. ಈ ಪಂದ್ಯ ಜಯಿಸಿದರೆ ಅನಾಯಾಸವಾಗಿ ಫೈನಲ್ ಪ್ರವೇಶಿಸಲಿದೆ. 

ಇಂದೋರ್[ಮಾ.12]: ಸಯ್ಯದ್ ಮುಷ್ತಾಕ್ ಅಲಿ ರಾಷ್ಟ್ರೀಯ ಟಿ20 ಟೂರ್ನಿಯ ಫೈನಲ್‌ಗೆ ಪ್ರವೇಶಿಸುವ ಉತ್ಸಾಹದಲ್ಲಿರುವ ಕರ್ನಾಟಕ ತಂಡ, ಮಂಗಳವಾರ ನಡೆಯುವ ಸೂಪರ್ ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಹಾಲಿ ರಣಜಿ ಟ್ರೋಫಿ ಹಾಗೂ ಇರಾನಿ ಟ್ರೋಫಿ ಚಾಂಪಿಯನ್ ವಿದರ್ಭ ಎದುರು ಸೆಣಸಲು ಸಜ್ಜಾಗಿದೆ. ಈ ಪಂದ್ಯದಲ್ಲಿ ಕರ್ನಾಟಕ ಗೆಲುವು ಪಡೆದರೆ ನೇರವಾಗಿ ಫೈನಲ್ ಪ್ರವೇಶಿಸುವುದು ಖಚಿತವಾಗಲಿದೆ. ಒಂದೊಮ್ಮೆ ಸೋಲು ಕಂಡರೆ, ರನ್ ರೇಟ್ ಆಧಾರದಲ್ಲಿ ಇತರ ತಂಡಗಳ ಸೋಲು-ಗೆಲುವಿನ ಲೆಕ್ಕಚಾರವನ್ನು ಪರಿಗಣಿಸಿ ಕರ್ನಾಟಕದ ಫೈನಲ್ ಹಾದಿಯನ್ನು ನಿರ್ಧರಿಸಲಾಗುತ್ತದೆ.

ಸೂಪರ್ ಲೀಗ್ ಹಂತದ ‘ಬಿ’ ಗುಂಪಿನಲ್ಲಿರುವ ಕರ್ನಾಟಕ ತಂಡ ಆಡಿರುವ 3 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ್ದು 12 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಕರ್ನಾಟಕದ ನೆಟ್ ರನ್‌ರೇಟ್ (+1.602) ಹೊಂದಿದೆ. ಇತ್ತ ವಿದರ್ಭ ತಂಡ ಕೂಡ 3 ಪಂದ್ಯಗಳನ್ನಾಡಿದ್ದು 2 ರಲ್ಲಿ ಗೆದ್ದು 1 ರಲ್ಲಿ ಸೋಲು ಕಂಡಿದೆ. ವಿದರ್ಭ ರನ್ ರೇಟ್(+1.166) ಪಡೆದಿದೆ. ಇದು ಕರ್ನಾಟಕ ತಂಡಕ್ಕಿಂತ ಕಡಿಮೆಯೇ ಇದೆ. ಕರ್ನಾಟಕ ಬಹುತೇಕ ಫೈನಲ್‌ಗೆ ಸಮೀಪದಲ್ಲಿದೆ. ಆದರೂ ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಸುಲಭವಾಗಿ ಫೈನಲ್‌ಗೇರಲಿದೆ. ನೆಟ್ ರನ್ ರೇಟ್‌ನಲ್ಲಿ ಮನೀಶ್ ಪಡೆ ಮುಂದಿದ್ದರೂ, ಕಡಿಮೆ ಅಂತರದ ಸೋಲು ಕಂಡರೂ ಫೈನಲ್‌ಗೇರುವ ಸಾಧ್ಯತೆಯಿದೆ. ಆದರೂ ಟೂರ್ನಿಯಲ್ಲಿ ಸತತ 10 ಗೆಲುವು ಸಾಧಿಸಿ ಅಜೇಯವಾಗಿರುವ ಕರ್ನಾಟಕ ತಂಡ, ಮಂಗಳವಾರದ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ. 

ಇನ್ನೂ ‘ಬಿ’ ಗುಂಪಿನಲ್ಲಿ 2ನೇ ಸ್ಥಾನದಲ್ಲಿರುವ ಮುಂಬೈ ಕೂಡ 3 ಪಂದ್ಯಗಳಲ್ಲಿ 2 ಜಯಿಸಿದ್ದು 1ರಲ್ಲಿ ಸೋಲುಂಡಿದೆ. ಕರ್ನಾಟಕ ತಂಡ ಕಳೆದ ಪಂದ್ಯದಲ್ಲಿ ಆಡಿದ ಆಟಗಾರರನ್ನೆ ಉಳಿಸಿಕೊಳ್ಳಲಿದೆ. ಯಾವುದೇ ಬದಲಾವಣೆ ಮಾಡುವುದಿಲ್ಲ. ರೋಹನ್, ಮಯಾಂಕ್ ಲಯದಲ್ಲಿದ್ದು ತಂಡಕ್ಕೆ ಆಸರೆಯಾಗಲಿದ್ದಾರೆ. ಇದುವರೆಗೂ ಕರ್ನಾಟಕ ತಂಡ, ಅಷ್ಟೇನು ಪ್ರಭಾವಿ ಅಲ್ಲದ ತಂಡಗಳ ವಿರುದ್ಧ ಗೆಲುವಿನ ಯಾತ್ರೆ ನಡೆಸಿದೆ. ವಿದರ್ಭ ಪ್ರಬಲ ತಂಡವಾಗಿದ್ದು, ಕರ್ನಾಟಕಕ್ಕೆ ಅಸಲಿ ಸವಾಲು ಎದುರಾಗಲಿದೆ. ರಾಜ್ಯ ತಂಡದಲ್ಲಿ ಐಪಿಎಲ್ ಆಡಿರುವ ಸಾಕಷ್ಟು ಅನುಭವ ಹೊಂದಿರುವ ಆಟಗಾರರಿದ್ದರೂ, ಟೂರ್ನಿಯಲ್ಲಿ ದೊಡ್ಡ ಮೊತ್ತ ದಾಖಲಿಸಲು ಸಾಧ್ಯವಾಗಿಲ್ಲ. ಬೌಲಿಂಗ್ ವಿಭಾಗದಲ್ಲಿ ಯುವ ಆಟಗಾರರು ಉತ್ತಮ ಪ್ರದರ್ಶನ ತೋರಿದ್ದಾರೆ.

ಅತ್ತ ವಿದರ್ಭ ತಂಡದ ಸ್ಪಿನ್ ಅಸ್ತ್ರ ಪ್ರಬಲವಾಗಿದೆ. ಪ್ರಭಾವಿ ಸ್ಪಿನ್ನರ್‌ಗಳನ್ನು ಹೊಂದಿರುವ ವಿದರ್ಭ, ಕರ್ನಾಟಕದ ಬ್ಯಾಟ್ಸ್’ಮನ್‌ಗಳನ್ನು ಕಟ್ಟಿಹಾಕುವ ಸಾಮರ್ಥ್ಯ ಹೊಂದಿದ್ದಾರೆ. ಇನ್ನೂ ಬ್ಯಾಟಿಂಗ್‌ನಲ್ಲಿ ಕರ್ನಾಟಕ ಮೂಲದ ಗಣೇಶ್ ಸತೀಶ್, ಅಥರ್ವ್ ತೈಡೆ, ರಾಥೋಡ್ ತಂಡಕ್ಕೆ ಬಲ ತುಂಬಿದ್ದಾರೆ. ಉಮೇಶ್ ಯಾದವ್ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. 

ಸಂಭಾವ್ಯ ತಂಡ

ಕರ್ನಾಟಕ
ರೋಹನ್ ಕದಂ, ಶರತ್, ಮನೀಶ್ (ನಾಯಕ), ಕರುಣ್, ಮಯಾಂಕ್, ಮನೋಜ್, ಕಾರಿಯಪ್ಪ, ಕೌಶಿಕ್, ವಿನಯ್ ಕುಮಾರ್, ಪ್ರಸಿದ್ಧ್ ಕೃಷ್ಣ, ಜೆ.ಸುಚಿತ್.

ವಿದರ್ಭ
ಅಥರ್ವ, ಜೆ.ಎಂ. ಶರ್ಮಾ, ಗಣೇಶ್ ಸತೀಶ್ (ನಾಯಕ), ರಾಥೋಡ್, ಜಂಗಿದ್, ವಾಂಖಾಡೆ, ಕರ್ನೆವಾರ್, ಉಮೇಶ್, ವಾಗ್, ಠಾಕೂರ್, ವಾಖರೆ. 

click me!