
ನವದೆಹಲಿ(ಆ.24): ನ್ಯಾ.ಲೋಧಾ ಸಮಿತಿ ಶಿಫಾರಸು ಅನುಷ್ಠಾನಗೊಳಿಸಲು ಬಿಸಿಸಿಐ ಮತ್ತೇಕೆ ವಿಳಂಬ ಮಾಡುತ್ತಿದೆ ಎಂಬುದರ ಕುರಿತು ವಿವರಣೆ ನೀಡುವಂತೆ ಬಿಸಿಸಿಐನ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿಗೆ ಸುಪ್ರೀಂ ಕೋರ್ಟ್ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಅಲ್ಲದೇ ಆಡಳಿತ ಸಮಿತಿಗೆ ಬಿಸಿಸಿಐನ ಕರಡು ಸಂವಿಧಾನ ಸಿದ್ಧಗೊಳಿಸುವಂತೆಯೂ ಸುಪ್ರೀಂಕೋರ್ಟ್ ಆದೇಶಿಸಿದೆ.
ಲೋಧಾ ಸಮಿತಿ ಶಿಫಾರಸುಗಳನ್ನು ಹಾಗೂ ಘನ ನ್ಯಾಯಾಲಯದ ನಿರ್ದೇಶನಗಳನ್ನು ಬಿಸಿಸಿಐ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ನೇಮಿತ ಬಿಸಿಸಿಐ ಆಡಳಿತ ಸಮಿತಿ (ಸಿಒಎ), ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠಕ್ಕೆ ತಿಳಿಸಿತ್ತು.
ಇದರ ವಿಚಾರಣೆ ನಡೆಸಿದ ತ್ರಿಸದಸ್ಯ ಪೀಠ, ಸೆ.19ರೊಳಗೆ ಖುದ್ದಾಗಿ ನ್ಯಾಯಾಲಯದ ಮುಂದೆ ಹಾಜರಾಗಿ, ವಿವರಣೆ ನೀಡುವಂತೆ ಅಮಿತಾಭ್ ಚೌಧರಿಗೆ ಸೂಚಿಸಿದೆ. ಪ್ರಕರಣ ಕುರಿತು ತ್ರಿಸದಸ್ಯ ಪೀಠಕ್ಕೆ ಮಾಹಿತಿ ನೀಡಿದ ಹಿರಿಯ ವಕೀಲ ಗೋಪಾಲ್ ಸುಬ್ರಹ್ಮಣ್ಯಂ, ‘ಲೋಧಾ ಸಮಿತಿ ಶಿಫಾರಸುಗಳು ಹಾಗೂ ನ್ಯಾಯಾಲಯದ ನಿರ್ದೇಶನಗಳನ್ನು ಅನುಷ್ಠಾನಕ್ಕೆ ತರುವುದು ಬಿಸಿಸಿಐನ ಆಡಳಿತ ಮಂಡಳಿ ಸದಸ್ಯರಾದ ಸಿ.ಕೆ.ಖನ್ನಾ, ಅಮಿತಾಭ್ ಚೌಧರಿ, ಅನಿರುದ್ಧ್ ಚೌಧರಿ ಅವರ ಜವಾಬ್ದಾರಿಯಾಗಿದೆ. ಆದರೆ, ಇಲ್ಲಿಯ ತನಕ ಇವರು ಇದನ್ನು ಅನುಷ್ಠಾನಗೊಳಿಸಿಲ್ಲ’ ಎಂದಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.