
ಮುಂಬೈ[ಆ.10]: ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ಇಂದು ಮುಂಬೈನಲ್ಲಿ ಬಿಸಿಸಿಐ ಸಂದರ್ಶನ ನಡೆಸಲಿದೆ. ಭಾರತದ ಮಾಜಿ ಸ್ಪಿನ್ನರ್‌ಗಳಾದ ಸುನಿಲ್ ಜೋಶಿ, ರಮೇಶ್ ಪೊವಾರ್ ಸೇರಿ 20 ಸದಸ್ಯರು ಸಂದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಭಾರತ ತಂಡದ ಮಾಜಿ ವಿಕೆಟ್ ಕೀಪರ್‌ಗಳಾದ ಅಜಯ್ ರಾತ್ರಾ, ವಿಜಯ್ ಯಾದವ್, ಮಹಿಳಾ ತಂಡದ ಮಾಜಿ ನಾಯಕಿ ಮಮತಾ ಮಾಬೆನ್, ತಂಡದ ಮಾಜಿ ಸಹಾಯಕ ಕೋಚ್ ಸುಮನ್ ಶರ್ಮಾ ಕೋಚ್ ಹುದ್ದೆಯ ಆಕಾಂಕ್ಷಿಗಳ ಪಟ್ಟಿಯಲ್ಲಿರುವ ಪ್ರಮುಖರೆನಿಸಿದ್ದಾರೆ. ನ್ಯೂಜಿಲೆಂಡ್ ಪರ 2 ಟೆಸ್ಟ್, 51 ಏಕದಿನ ಪಂದ್ಯ ಗಳನ್ನಾಡಿದ ಮರಿಯಾ ಫಾಹೇ ಸಹ ಅರ್ಜಿ ಸಲ್ಲಿಸಿದ್ದಾರೆ. 34 ವರ್ಷದ ಮರಿಯಾ ಸದ್ಯ ಗುಂಟೂರಿನ ಎಸಿಎ ಅಕಾಡೆಮಿಯಲ್ಲಿ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಜೋಶಿ, ಪೊವಾರ್ ನಡುವೆ ಸ್ಪರ್ಧೆ: ತುಷಾರ್ ಅರೋಠೆ ದಿಢೀರ್ ರಾಜೀನಾಮೆಯಿಂದ ತೆರವುಗೊಂಡಿರುವ ಕೋಚ್ ಹುದ್ದೆಯನ್ನು ತುಂಬಲು ಸುನಿಲ್ ಜೋಶಿ ಹಾಗೂ ರಮೇಶ್ ಪೊವಾರ್ ಸೂಕ್ತ ವ್ಯಕ್ತಿಗಳು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಈ ಇಬ್ಬರ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಭಾರತ ಪರ 2 ಟೆಸ್ಟ್, 31 ಏಕದಿನ ಪಂದ್ಯಗಳನ್ನಾಡಿರುವ ಪೊವಾರ್ ಸದ್ಯ ತಂಡದ ಹಂಗಾಮಿ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ಗೊಂದಲದ ಪರಿಸ್ಥಿತಿಯಲ್ಲಿ ತಂಡದ ಜವಾಬ್ದಾರಿ ಹೊತ್ತ ಪವಾರ್‌ಗೆ ಪ್ರಧಾನ ಕೋಚ್ ಹುದ್ದೆ ನೀಡುವ ಸಾಧ್ಯತೆ ಹೆಚ್ಚಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಮತ್ತೊಂದೆಡೆ ಕೋಚ್ ಆಗಿ ಜೋಶಿ ಅನುಭವವನ್ನು ಕಡೆಗಣಿಸುವಂತಿಲ್ಲ. ಭಾರತ ಪರ 15 ಟೆಸ್ಟ್, 69 ಏಕದಿನ ಪಂದ್ಯಗಳನ್ನಾಡಿದ ಕರ್ನಾಟಕದ ಮಾಜಿ ನಾಯಕ, ಜಮ್ಮು-ಕಾಶ್ಮೀರ, ಅಸ್ಸಾಂ, ಹೈದರಾಬಾದ್ ರಣಜಿ ತಂಡಗಳ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಓಮನ್ ತಂಡದ ಕೋಚ್ ಆಗಿದ್ದ ಜೋಶಿ, ಇತ್ತೀಚೆಗಷ್ಟೇ ಬಾಂಗ್ಲಾದೇಶದ ಸ್ಪಿನ್ ಕೋಚ್ ಆಗಿ ಯಶಸ್ಸು ಸಾಧಿಸಿದ್ದರು. ಮಮತಾ ಕರ್ನಾಟಕ ಕೋಚ್ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಜತೆಗೆ ಭಾರತೀಯ ಆಟಗಾರ್ತಿಯರ ಆಟದ ಶೈಲಿಯ ಬಗ್ಗೆ ಎಲ್ಲರಿಗಿಂತ ಹೆಚ್ಚಿನ ಮಾಹಿತಿ ಹೊಂದಿದ್ದಾರೆ.
ಆಟಗಾರ್ತಿಯರೊಂದಿಗಿನ ಮನಸ್ತಾಪದಿಂದಾಗಿ ತುಷಾರ್ ರಾಜೀನಾಮೆ ನೀಡಿದ್ದರು. ಹೀಗಾಗಿ ಬಿಸಿಸಿಐ, ತಂಡದೊಂದಿಗೆ ಹೊಂದಿಕೊಂಡು ಹೋಗುವವರನ್ನು ಆಯ್ಕೆ ಮಾಡುವ ಒತ್ತಡದಲ್ಲಿದೆ. ಈ ವರ್ಷ ತಂಡ ಟಿ20 ವಿಶ್ವಕಪ್ ಆಡಲಿದೆ. ಮುಂದಿನ ತಿಂಗಳು ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ತಂಡ, ವಿಶ್ವ ಏಕದಿನ ಚಾಂಪಿಯನ್‌ಶಿಪ್‌ನ ಭಾಗವಾದ ಸರಣಿಯಲ್ಲಿ ಆಡಲಿದೆ. ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಲು ಬಿಸಿಸಿಐ ಎದುರು ನೋಡುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.