
ಬೆಂಗಳೂರು(ಜೂನ್ 13): ಹಲವು ವರ್ಷಗಳ ಬಳಿಕ ಎಎಫ್'ಸಿ ಏಷ್ಯನ್ ಕಪ್ ಫುಟ್ಬಾಲ್ ಟೂರ್ನಿಗೆ ಅರ್ಹತೆ ಗಿಟ್ಟಿಸಲು ಭಾರತ ತಂಡ ಇನ್ನಷ್ಟು ಸನಿಹಕ್ಕೆ ಹೋಗಿದೆ. ಅರ್ಹತಾ ಹಂತದ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಭಾರತ ತಂಡ 1-0 ಗೋಲಿನಿಂದ ಕಿರ್ಗಿಸ್ತಾನ್ ಗಣರಾಜ್ಯ ದೇಶವನ್ನು ಸೋಲಿಸಿತು. ನಾಯಕ ಸುನೀಲ್ ಛೇಟ್ರಿ ಮತ್ತೊಮ್ಮೆ ಭಾರತದ ಗೆಲುವಿನ ರೂವಾರಿಯಾದರು. 69ನೇ ನಿಮಿಷ ಛೆಟ್ರಿ ಗೋಲು ಗಳಿಸಿ ಭಾರತಕ್ಕೆ ಅಪೂರ್ವ ಗೆಲುವು ತಂದುಕೊಟ್ಟರು. ಕಂಠೀರವ ಸ್ಟೇಡಿಯಂನಲ್ಲಿ ಕಿಕ್ಕಿರಿದು ಸೇರಿದ್ದ ಬೆಂಗಳೂರಿಗರು ಸುನೀಲ್ ಛೆಟ್ರಿ ಆಟ ಕಂಡು ಫುಲ್ ಖುಷ್ ಆದರು.
ತುರುಸಿ ಪೈಪೋಟಿ ಕಂಡ ಈ ಪಂದ್ಯದಲ್ಲಿ ಮೊದಲಾರ್ಧದಲ್ಲಿ ಎರಡೂ ತಂಡಗಳು ಗೋಲು ಗಳಿಸುವ ಸಮಾನ ಅವಕಾಶ ಪಡೆದವು. ದ್ವಿತೀಯಾರ್ಧದಲ್ಲಿ ಕಿರ್ಗಿಜ್ ರಿಪಬ್ಲಿಕ್ ಕೆಲ ಒಳ್ಳೆಯ ಅವಕಾಶಗಳನ್ನ ಕೈಚೆಲ್ಲಿತು. ಆದರೆ, ಬೆಂಗಳೂರು ಎಫ್'ಸಿ ಸ್ಟ್ರೈಕರ್ ಸುನೀಲ್ ಛೆಟ್ರಿ 69ನೇ ನಿಮಿಷದಲ್ಲಿ ಗೋಲು ಗಳಿಸಿ ಕಿರ್ಗಿಜ್ ಹೋರಾಟವನ್ನು ಅಂತ್ಯಗೊಳಿಸಿದರು.
ಎ ಗುಂಪಿನ ಮೊದಲ ಪಂದ್ಯದಲ್ಲಿ ಮಯನ್ಮಾರ್ ವಿರುದ್ಧ ಒಂದು ಗೋಲಿನ ಅಂತರದಿಂದಲೇ ಜಯಸಾಧಿಸಿದ್ದ ಭಾರತಕ್ಕೆ ಈ ಟೂರ್ನಿಯಲ್ಲಿ ಸತತ 2ನೇ ಗೆಲುವಾಗಿದೆ. ಈ ಗುಂಪಿನ ಮೂರನೇ ಪಂದ್ಯದಲ್ಲಿ ದುರ್ಬಲ ಮಕಾವು ತಂಡದ ಸವಾಲನ್ನು ಭಾರತ ಎದುರಿಸಲಿದೆ. ಆ ಪಂದ್ಯದಲ್ಲಿ ಭಾರತ ಡ್ರಾ ಮಾಡಿಕೊಂಡರೂ ಏಷ್ಯನ್ ಕಪ್ ಟೂರ್ನಿಯ ಪ್ರಧಾನ ಹಂತಕ್ಕೆ ಅರ್ಹತೆ ಗಿಟ್ಟಿಸುವುದು ನಿಶ್ಚಿತ.
ಭಾರತ ಫುಟ್ಬಾಲ್ ತಂಡಕ್ಕೆ ಇದು ಸತತ 7ನೇ ಗೆಲುವಾಗಿದೆ. ಫೀಫಾ ರ್ಯಾಂಕಿಂಗ್'ನಲ್ಲಿ ಜಂಟಿ 100ನೇ ಸ್ಥಾನ ಹೊಂದಿರುವ ಭಾರತ ಈ ಗೆಲುವಿನಿಂದ 95-96ನೇ ಸ್ಥಾನಕ್ಕೇರುವ ನಿರೀಕ್ಷೆ ಇದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.