2019ರ ಏಕದಿನ ವಿಶ್ವಕಪ್'ಗೆ ನೇರ ಅರ್ಹತೆ ಪಡೆಯಲು ವಿಫಲವಾದ ಶ್ರೀಲಂಕಾ

By Suvarna Web DeskFirst Published Sep 1, 2017, 6:11 PM IST
Highlights

ಐಸಿಸಿ ನಿಯಮಾವಳಿಗಳ ಪ್ರಕಾರ ಸೆಪ್ಟೆಂಬರ್ 30ರ ಒಳಗೆ ಇಂಗ್ಲೆಂಡ್ ಜೊತೆಗೆ ಅಗ್ರ 7 ಶ್ರೇಯಾಂಕ ಹೊಂದಿರುವ ತಂಡಗಳು ವಿಶ್ವಕಪ್'ಗೆ ನೇರ ಅರ್ಹತೆ ಗಿಟ್ಟಿಸಿಕೊಳ್ಳಲಿವೆ.

ಬೆಂಗಳೂರು(ಸೆ.01): 1996ರ ವಿಶ್ವಕಪ್ ಚಾಂಪಿಯನ್ ಶ್ರೀಲಂಕಾ ತಂಡವು 2019ರಲ್ಲಿ ಇಂಗ್ಲೆಂಡ್'ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಗೆ ನೇರ ಪ್ರವೇಶ ಪಡೆಯುವ ಸಾಧ್ಯತೆ ಬಹುತೇಕ ಕ್ಷೀಣಿಸಿದೆ.

ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಲಂಕಾ ಪಡೆ ಕನಿಷ್ಟ ಎರಡು ಪಂದ್ಯಗಳನ್ನು ಗೆದ್ದಿದ್ದರೆ ವಿಶ್ವಕಪ್'ಗೆ ನೇರ ಪ್ರವೇಶ ಪಡೆಯಬಹುದಿತ್ತು, ಆದರೆ ಈಗಾಗಲೇ 4-0 ಅಂತರದಲ್ಲಿ ಸರಣಿ ಕೈಚೆಲ್ಲಿರುವ ಶ್ರೀಲಂಕಾ, ವಿಶ್ವಕಪ್'ಗೆ ನೇರ ಪ್ರವೇಶಿಸುವ ಹಾದಿ ಮತ್ತಷ್ಟು ದುರ್ಗಮವಾಗಿ ಪರಿಣಮಿಸಿದೆ.

ಐಸಿಸಿ ನಿಯಮಾವಳಿಗಳ ಪ್ರಕಾರ ಸೆಪ್ಟೆಂಬರ್ 30ರ ಒಳಗೆ ಇಂಗ್ಲೆಂಡ್ ಜೊತೆಗೆ ಅಗ್ರ 7 ಶ್ರೇಯಾಂಕ ಹೊಂದಿರುವ ತಂಡಗಳು ವಿಶ್ವಕಪ್'ಗೆ ನೇರ ಅರ್ಹತೆ ಗಿಟ್ಟಿಸಿಕೊಳ್ಳಲಿವೆ.

ಪ್ರಸ್ತುತ ಶ್ರೀಲಂಕಾ 87 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ. ಭಾನುವಾರ ನಡೆಯುವ ಸರಣಿಯ ಕೊನೆಯ ಪಂದ್ಯದಲ್ಲಿ ಗೆದ್ದರೆ ಶ್ರೀಲಂಕಾ ಮತ್ತೊಂದು ಅಂಕ ಗಳಿಸಲಿದೆ. ಆದರೆ ಇದಷ್ಟೇ ಲಂಕಾ ಪಡೆ ವಿಶ್ವಕಪ್'ಗೆ ನೇರ ಅರ್ಹತೆ ಗಳಿಸಲು ಸಾಧ್ಯವಾಗುವುದಿಲ್ಲ.

ಇನ್ನೊಂದೆಡೆ ವೆಸ್ಟ್'ಇಂಡಿಸ್ ಕೂಡಾ ವಿಶ್ವಕಪ್'ಗೆ ನೇರ ಅರ್ಹತೆ ಗಿಟ್ಟಿಸಲು ಹೆಣಗಾಡುತ್ತಿದೆ. ಒಂದುವೇಳೆ ಲಂಕಾ 5-0 ಅಂತರದಲ್ಲಿ ಸರಣಿ ಸೋತರೆ, ಸದ್ಯ 9ನೇ ಶ್ರೇಯಾಂಕದಲ್ಲಿರುವ ವೆಸ್ಟ್'ಇಂಡಿಸ್ ಸೆಪ್ಟೆಂಬರ್ 13ರಂದು ಐರ್ಲೆಂಡ್ ವಿರುದ್ಧ ಒಂದು ಹಾಗೂ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಸರಣಿಯನ್ನು ಆಡಲಿದ್ದು, ಕನಿಷ್ಟ ಎರಡು ಪಂದ್ಯಗಳನ್ನು ಗೆದ್ದರೂ ಕೆರಿಬಿಯನ್ ಪಡೆ ವಿಶ್ವಕಪ್'ಗೆ ನೇರ ಅರ್ಹತೆ ಗಿಟ್ಟಿಸಿಕೊಳ್ಳಲಿದೆ.     

click me!