ಸ್ಪೇನ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಿವಿ ಸಿಂಧು ಪ್ರಶಸ್ತಿಯತ್ತ ದಾಪುಗಾಲು
ಕ್ವಾರ್ಟರ್ ಫೈನಲ್‌ನಲ್ಲಿ ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಟ್ ಎದುರು ಜಯಭೇರಿ
ಕ್ವಾರ್ಟರ್ ಫೈನಲ್‌ನಲ್ಲೇ ಮುಗ್ಗರಿಸಿದ ಕಿದಂಬಿ ಶ್ರೀಕಾಂತ್
ಮ್ಯಾಡ್ರಿಡ್(ಏ.01): 2 ಬಾರಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಇಲ್ಲಿ ನಡೆಯುತ್ತಿರುವ ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು, ವಿಶ್ವ ನಂ.18 ಡೆನ್ಮಾರ್ಕ್ನ ಮಿಯಾ ಬ್ಲಿಚ್‌ಫೆಲ್ಟ್ ವಿರುದ್ಧ 21-14, 21-17 ಗೇಮ್‌ಗಳಲ್ಲಿ ಸುಲಭ ಜಯ ಸಾಧಿಸಿದರು. ಸಿಂಧು ಈ ವರ್ಷ ಮೊದಲ ಬಾರಿಗೆ ಸೆಮೀಸ್‌ಗೇರಿದ್ದು, ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಅಂತಿಮ-4ರ ಸುತ್ತಿನಲ್ಲಿ ಸಿಂಧುಗೆ ಸಿಂಗಾಪುರದ ಯಿಯೊ ಜಿಯಾ ಮಿನ್ ಎದುರಾಗಲಿದ್ದಾರೆ.
ಇದೇ ವೇಳೆ ಕಿದಂಬಿ ಶ್ರೀಕಾಂತ್ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಕೆಂಟಾ ನಿಶಿಮೊಟೊ ವಿರುದ್ಧ 18-21, 15-21 ಗೇಮ್‌ಗಳಲ್ಲಿ ಸೋತು ಹೊರಬಿದ್ದರು.
ಮೈಸೂರು ಓಪನ್ ಟೆನಿಸ್: ಕ್ವಾರ್ಟರ್‌ಗೆ ಪ್ರಜ್ವಲ್ ದೇವ್
ಮೈಸೂರು: ಸ್ಥಳೀಯ ಆಟಗಾರ ಎಸ್.ಡಿ. ಪ್ರಜ್ವಲ್ ದೇವ್ ಮೈಸೂರು ಓಪನ್ ಎಟಿಪಿ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಗುರುವಾರ ನಡೆದ ಪುರುಷರ ಸಿಂಗಲ್ಸ್ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ತಾರಾ ಟೆನಿಸಿಗ ವಿಷ್ಣು ವರ್ಧನ್ ವಿರುದ್ಧ 6-4, 7-6(6) ಸೆಟ್‌ಗಳಲ್ಲಿ ಜಯಗಳಿಸಿದರು.
ಇನ್ನು ಭಾರತದವರೇ ಆದ ಫೈಸಲ್ ಕಮರ್ ವಿರುದ್ಧ ಗೆದ್ದ ಶಶಿಕುಮಾರ್ ಮುಕುಂದ್ ಸಹ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಶಶಿಕುಮಾರ್‌ಗಿದು ದಿನದಲ್ಲಿ 2ನೇ ಪಂದ್ಯವಾಗಿತ್ತು. ಬುಧವಾರ ಸಂಜೆ ಮಳೆಯಿಂದಾಗಿ ಸ್ಥಗಿತಗೊಂಡಿದ್ದ ಅಂತಿಮ 32ರ ಸುತ್ತಿನ ಪಂದ್ಯವನ್ನು ಗೆದ್ದ ಶಶಿ, ಗುರುವಾರ ಪ್ರಿ ಕ್ವಾರ್ಟರ್‌ನಲ್ಲಿ 6-1, 6-2ರ ಸುಲಭ ಜಯ ಸಾಧಿಸಿದರು.
ಗಣಿತದಲ್ಲಿ ನಾನು ವೀಕ್, ಮಗಳು ಪ್ರಶ್ನೆ ಕೇಳಿದರೆ ಖೇಲ್ ಖತಂ ಎಂದ ವಿರಾಟ್ ಕೊಹ್ಲಿ!
ಇನ್ನು ಡಬಲ್ಸ್‌ನಲ್ಲಿ ಅಗ್ರ ಶ್ರೇಯಾಂಕಿತ ಭಾರತೀಯ ಜೋಡಿಯಾದ ರಿತ್ವಿಕ್ ಚೌಧರಿ ಹಾಗೂ ನಿಕಿ ಪೂಣಚ್ಚ, ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ನಿತಿನ್ ಹಾಗೂ ಫ್ರಾನ್ಸ್‌ನ ಪ್ಲೋರೆಂಟ್ ವಿರುದ್ಧ 6-3, 7-6ರಲ್ಲಿ ಜಯಿಸಿ ಸೆಮೀಸ್‌ಗೇರಿತು.
ರಾಷ್ಟ್ರೀಯ ಫುಟ್ಬಾಲ್: ರಾಜ್ಯಕ್ಕೆ 2ನೇ ಜಯ
ಬೆಂಗಳೂರು: 27ನೇ ಆವೃತ್ತಿಯ ರಾಷ್ಟ್ರೀಯ ಮಹಿಳಾ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಸತತ 2ನೇ ಗೆಲುವು ಸಾಧಿಸಿದೆ. ಶುಕ್ರವಾರ ನಡೆದ ಗುಂಪು-6ರ ಅಸ್ಸಾಂ ವಿರುದ್ಧದ ಪಂದ್ಯದಲ್ಲಿ 3-1 ಗೋಲುಗಳ ಗೆಲುವು ಸಾಧಿಸಿತು.
ರಾಜ್ಯದ ಪರ 9ನೇ ನಿಮಿಷದಲ್ಲಿ ಮೈತ್ರೇಯಿ, 13ನೇ ನಿಮಿಷದಲ್ಲಿ ಸೋನಿಯಾ, 48ನೇ ನಿಮಿಷದಲ್ಲಿ ಸಂಜಿತಾ ಗೋಲು ಬಾರಿಸಿದರೆ, ಅಸ್ಸಾಂ ಪರ 87ನೇ ನಿಮಿಷದಲ್ಲಿ ಕಿರಣ್‌ಬಾಲಾ ಚಾನು ಏಕೈಕ ಗೋಲು ಗಳಿಸಿದರು. 2 ಪಂದ್ಯಗಳಿಂದ 6 ಅಂಕ ಗಳಿಸಿರುವ ರಾಜ್ಯ ತಂಡ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ತನ್ನ ಮುಂದಿನ ಪಂದ್ಯವನ್ನು ಕರ್ನಾಟಕ ಏ.4ರಂದು ಬಿಹಾರ ವಿರುದ್ಧ ಆಡಲಿದೆ.
ವಿಂಬಲ್ಡನ್: ರಷ್ಯಾ ಟೆನಿಸಿಗರಿಗೆ ಅವಕಾಶ
ಲಂಡನ್: 2023ರ ವಿಂಬಲ್ಡನ್ ಗ್ರ್ಯಾನ್ ಸ್ಲಾಂನಲ್ಲಿ ರಷ್ಯಾ ಹಾಗೂ ಬೆಲಾರುಸ್‌ನ ಟೆನಿಸಿಗರಿಗೆ ಆಡಲು ಅವಕಾಶ ನೀಡುವುದಾಗಿ ಟೂರ್ನಿಯ ಆಯೋಜಕರಾದ ಆಲ್ ಇಂಗ್ಲೆಂಡ್ ಕ್ಲಬ್ ತಿಳಿಸಿದೆ. ಆದರೆ ಈ ದೇಶಗಳ ಆಟಗಾರರು ತಟಸ್ಥ ಟೆನಿಸಿಗರಾಗಿ ಆಡಬೇಕಿದ್ದು, ತಮ್ಮ ದೇಶಗಳ ಬಾವುಟದಡಿ ಸ್ಪರ್ಧಿಸಲು ಅವಕಾಶವಿರುವುದಿಲ್ಲ ಎಂದು ಕ್ಲಬ್ ಸ್ಪಷ್ಟಪಡಿಸಿದೆ. ಉಕ್ರೇನ್ ಮೇಲೆ ಕಳೆದೊಂದು ವರ್ಷಕ್ಕೂ ಹೆಚ್ಚು ಸಮಯದಿಂದ ಯುದ್ಧ ನಡೆಸುತ್ತಿರುವ ಹಿನ್ನೆಲೆಯಲ್ಲಿ 2022ರ ವಿಂಬಲ್ಡನ್‌ಗೆ ರಷ್ಯಾ ಟೆನಿಸಿಗರನ್ನು ನಿಷೇಧಿಸಲಾಗಿತ್ತು. ರಷ್ಯಾಕ್ಕೆ ಬೆಂಬಲ ನೀಡುತ್ತಿರುವ ಬೆಲಾರುಸ್‌ನ ಆಟಗಾರರಿಗೂ ಅವಕಾಶ ನಿರಾಕರಿಸಲಾಗಿತ್ತು