
ಮುಂಬೈ(ಜ.05): ಐಪಿಎಲ್ 11ನೇ ಆವೃತ್ತಿಯ ಆಟಗಾರರ ಪಟ್ಟಿ ಗುರುವಾರ ಪ್ರಕಟಗೊಂಡಾಗ ಪ್ರತಿಯೊಬ್ಬರಿಗೆ ಅಚ್ಚರಿಯೊಂದು ಕಾದಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಮುಖ ಆಟಗಾರರಾದ ಕ್ರಿಸ್ ಗೇಲ್, ಕೆ.ಎಲ್.ರಾಹುಲ್, ಯಜುವೇಂದ್ರ ಚಹಲ್ ಬದಲಿಗೆ 3ನೇ ಆಟಗಾರನಾಗಿ ಸರ್ಫರಾಜ್ ಖಾನ್'ರನ್ನು ಉಳಿಸಿಕೊಳ್ಳುವುದಾಗಿ ತಿಳಿಸಿತ್ತು. ಸರ್ಫರಾಜ್ ಭಾರತ ತಂಡಕ್ಕೆ ಆಡದೆ ಇರುವ ಕಾರಣ ಅವರನ್ನು ₹1.75 ಕೋಟಿಗೆ ಖರೀದಿಸಬಹುದು ಎನ್ನುವ ಲೆಕ್ಕಾಚಾರ ಒಂದು ಕಡೆಯಾದರೆ, ಫಿಟ್ನೆಸ್'ನತ್ತ ಅವರು ಹರಿಸಿರುವ ಗಮನ ಮತ್ತೊಂದು ಕಾರಣ.
ಜೀವದಾನ ನೀಡಿದ ದ್ರಾವಿಡ್ ಕರೆ: 10 ದಿನಗಳ ಹಿಂದಷ್ಟೇ ಭಾರತ ಅಂಡರ್-19 ತಂಡದ ಕೋಚ್ ರಾಹುಲ್ ದ್ರಾವಿಡ್, ಸರ್ಫರಾಜ್'ಗೆ ಕರೆ ಮಾಡಿ ಬೆಂಗಳೂರಿಗೆ ಆಗಮಿಸುವಂತೆ ಸೂಚಿಸಿದ್ದರು. ಅಂಡರ್-19 ವಿಶ್ವಕಪ್'ಗೆ ತಯಾರಿ ನಡೆಸಿದ್ದ ಆಟಗಾರರೊಂದಿಗೆ ತಮ್ಮ ಅನುಭವ ಹಂಚಿಕೊಳ್ಳುವಂತೆ ದ್ರಾವಿಡ್ ಕೇಳಿಕೊಂಡಿದ್ದರು. ಇದಕ್ಕಾಗಿ ಬೆಂಗಳೂರಿಗೆ ಬಂದಿದ್ದ ಸರ್ಫರಾಜ್, ಅಭ್ಯಾಸ ವೇಳೆ ಬ್ಯಾಟಿಂಗ್ ಸಹ ನಡೆಸಿದ್ದರು. ಈ ವೇಳೆ ತಮ್ಮ ಆಟ, ಫಿಟ್ನೆಸ್ ಅನ್ನು ಆರ್'ಸಿಬಿ ಅಧಿಕಾರಿಗಳು ಗಮನಿಸಿದ್ದರು. ತಾವು ತಂಡದಲ್ಲಿ ಉಳಿದುಕೊಳ್ಳಲು ಇದೇ ಕಾರಣ ಎಂದು ಸರ್ಫ'ರಾಜ್ ಹೇಳಿಕೊಂಡಿದ್ದಾರೆ.
2 ವರ್ಷಗಳ ಹಿಂದಿದ್ದ ಸರ್ಫ'ರಾಜ್'ಗೂ, ಈಗಿನ ಸರ್ಫರಾಜ್'ಗೂ ಬಹಳ ವ್ಯತ್ಯಾಸವಿದೆ. ಗಣನೀಯ ಪ್ರಮಾಣದಲ್ಲಿ ತೂಕ ಇಳಿಸಿ ಕೊಂಡಿರುವ ಅವರು, ಭಾರತ ತಂಡದ ಆಟಗಾರರು ಅನುಸರಿಸುತ್ತಿರುವ ಫಿಟ್ನೆಸ್ ಮಾದರಿಯನ್ನೇ ಪಾಲಿಸುತ್ತಿದ್ದಾರಂತೆ. 2015ರಲ್ಲಿ ಸರ್ಫ'ರಾಜ್ ಆರ್'ಸಿಬಿ ಸೇರಿದಾಗ ಅವರಿಗೆ 17 ವರ್ಷ. ಆರಂಭದ ಕೆಲ ಪಂದ್ಯಗಳಲ್ಲೇ ಉತ್ತಮ ಆಟವಾಡಿ ಎಲ್ಲರ ಗಮನ ಸೆಳೆದಿದ್ದ ಸರ್ಫರಾಜ್ ಫಿಟ್ನೆಸ್ ಸಮಸ್ಯೆ ಎದುರಿಸಿದ್ದರು. ಈ ಕಾರಣ ಅವರನ್ನು ಆಡುವ ಹನ್ನೊಂದರಿಂದ ನಾಯಕ ಕೊಹ್ಲಿ ಕೈಬಿಟ್ಟಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.