
ನವದೆಹಲಿ(ಫೆ.21): ಮಯಾಂಕ್ ಅಗರ್'ವಾಲ್(140) ಹಾಗೂ ರವಿಕುಮಾರ್ ಸಮರ್ಥ್(125) ಆಕರ್ಷಕ ಶತಕದ ನೆರವಿನಿಂದ ಕರ್ನಾಟಕ ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್'ಫೈನಲ್ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ 347 ರನ್'ಗಳ ಬೃಹತ್ ಮೊತ್ತ ಕಲೆಹಾಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಆರಂಭದಲ್ಲಿ ನಾಯಕ ಕರುಣ್ ನಾಯರ್(10) ವಿಕೆಟ್ ಕಳೆದುಕೊಂಡಿತಾದರೂ ಆ ಬಳಿಕ ಅಗರ್'ವಾಲ್ ಹಾಗೂ ಸಮರ್ಥ್ ಜೋಡಿ ಹೈದರಬಾದ್ ಬೌಲರ್'ಗಳನ್ನು ಮನಬಂದಂತೆ ದಂಡಿಸಿದರು. ಎರಡನೇ ವಿಕೆಟ್'ಗೆ ಈ ಜೋಡಿ 241 ರನ್'ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಸ್ಫೋಟಕ ಬ್ಯಾಟಿಂಗ್ ಮಾಡಿದ ಅಗರ್'ವಾಲ ಕೇವಲ 111 ಎಸೆತಗಳಲ್ಲಿ 12 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ 140 ರನ್ ಬಾರಿಸಿದರು. ಮತ್ತೊಂದೆಡೆ ಸಮರ್ಥ್ ಕೂಡಾ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಉತ್ತಮ ಫಾರ್ಮ್'ನಲ್ಲಿರುವ ಸಮರ್ಥ್ 124 ಎಸೆತಗಳಲ್ಲಿ 13 ಬೌಂಡಡಿಗಳ ನೆರವಿನಿಂದ 125 ರನ್ ಬಾರಿಸಿ ರವಿ ಕಿರಣ್'ಗೆ ವಿಕೆಟ್ ಒಪ್ಪಿಸಿದರು.
ಒಂದು ಹಂತದಲ್ಲಿ ಕರ್ನಾಟಕ 400ರ ಗಡಿ ದಾಟಬಹುದು ಎಂದು ಊಹಿಸಲಾಗಿತ್ತು. ಆದರೆ ಸಮರ್ಥ್-ಅಗರ್'ವಾಲ್ ಜೋಡಿ ಔಟ್ ಆಗುತ್ತಿದ್ದಂತೆ ಮೊಹಮ್ಮದ್ ಸಿರಾಜ್ ದಾಳಿಗೆ ತತ್ತರಿಸಿದ ಕರ್ನಾಟಕ 347 ರನ್ ಬಾರಿಸಲಷ್ಟೇ ಶಕ್ತವಾಯಿತು.
ಮೊಹಮ್ಮದ್ ಸಿರಾಜ್ 5 ವಿಕೆಟ್ ಪಡೆದರೆ, ರವಿ ಕಿರಣ್ 2 ಹಾಗೂ ರವಿ ತೇಜ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
ಕರ್ನಾಟಕ: 347/8
ಅಗರ್'ವಾಲ್: 140
ಸಮರ್ಥ್: 125
ಸಿರಾಜ್: 59/5
(* ವಿವರ ಅಪೂರ್ಣ)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.