
ಬೆಂಗಳೂರು(ಸೆ.04): ಭಾರತ ತಂಡದ ಸ್ಟಾರ್ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ತನ್ನ ಮಾಜಿ ಕೋಚ್ ಫುಲ್ಲೇಲಾ ಗೋಪಿಚಂದ್ ಅವರ ಗರಡಿಯಲ್ಲಿ ತರಬೇತಿ ಪಡೆಯಲು ನಿರ್ಧರಿಸಿದ್ದಾರೆ.
ಹೌದು ಈ ವಿಷಯವನ್ನು ಸ್ವತಃ ಸೈನಾ ನೆಹ್ವಾಲ್ ಅವರೇ ಸಾಮಾಜಿಕ ಜಾಲತಾಣ ಟ್ವಿಟರ್'ನಲ್ಲಿ ಬಹಿರಂಗ ಪಡಿಸಿದ್ದು, ಹೈದರಾಬಾದ್'ನಲ್ಲಿರುವ ಫುಲ್ಲೇಲಾ ಗೋಪಿಚಂದ್ ಅಕಾಡಮಿಗೆ ಪುನಃ ವಾಪಾಸ್ಸಾಗಲು ತೀರ್ಮಾನಿಸಿರುವುದಾಗಿ ತಿಳಿಸಿದ್ದಾರೆ.
ನಾನು ಈಗಾಗಲೇ ಗೋಪಿ ಸರ್ ಅವರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ್ದೇನೆ. ನನಗೆ ಮಾರ್ಗದರ್ಶನ ಮಾಡಲು ಒಪ್ಪಿಕೊಂಡಿರುವುದಕ್ಕೆ ನಾನು ಅವರಿಗೆ ಆಭಾರಿಯಾಗಿದ್ದೇನೆ. ಈ ಸಂದರ್ಭದಲ್ಲಿ ವೃತ್ತಿಜೀವನದಲ್ಲಿ ನನ್ನ ಗುರಿ ಸಾಧಿಸಲು ಅವರ ಮಾರ್ಗದರ್ಶನ ನನಗೆ ನೆರವಾಗಲಿದೆ ಎಂದಿದ್ದಾರೆ.
ಇದೇ ವೇಳೆ ಸೈನಾ ಸರಣಿ ಟ್ವೀಟ್ ಮಾಡಿ, 2014ರಿಂದ ಇಲ್ಲಿಯವರೆಗೆ ಸೈನಾಗೆ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ವಿಮಲ್ ಕುಮಾರ್ ಅವರಿಗೂ ಸೈನಾ ಧನ್ಯವಾದ ಅರ್ಪಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ನಾನು ನಂ.1 ಸ್ಥಾನಕ್ಕೇರಲು ನೆರವಾದ, ಹಾಗೆಯೇ ಎರಡು ವಿಶ್ವ ಚಾಂಪಿಯನ್ಸ್ ಟೂರ್ನಿಯಲ್ಲಿ ಬೆಳ್ಳಿ ಹಾಗೂ ಕಂಚು ಪದಕ ಸೇರಿದಂತೆ ಹಲವು ಸೂಪರ್ ಸೀರಿಸ್'ನಲ್ಲಿ ಪದಕ ಜಯಿಸುವಲ್ಲಿ ವಿಮಲ್ ಸರ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸೈನಾ ತಿಳಿಸಿದ್ದಾರೆ. ನಾನು ಮತ್ತೆ ತವರಿಗೆ ಮರಳುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಸೈನಾ ತಿಳಿಸಿದ್ದಾರೆ.
ಗೋಪಿಚಂದ್ ಮಾರ್ಗದರ್ಶನದಲ್ಲಿ 2012ರ ಲಂಡನ್ ಒಲಿಂಪಿಕ್ಸ್'ನಲ್ಲಿ ಸೈನಾ ಕಂಚಿನ ಪದಕ ಜಯಿಸಿದ್ದರು. ಇದಾದ ಬಳಿಕ ಸೈನಾ, ಗೋಪಿಚಂದ್ ಅವರಿಂದ ಅಂತರ ಕಾಯ್ದುಕೊಂಡಿದ್ದರು. ಆ ಬಳಿಕ ಗೋಪಿಚಂದ್ ಅವರನ್ನು ತೊರೆದು 2014ರ ಸೆಪ್ಟೆಂಬರ್'ನಿಂದ ಬೆಂಗಳೂರಿನಲ್ಲಿ ವಿಮಲ್ ಕುಮಾರ್ ಮಾರ್ಗದರ್ಶನದಲ್ಲಿ ಸೈನಾ ಬ್ಯಾಡ್ಮಿಂಟನ್ ತರಬೇತಿ ಪಡೆಯುತ್ತಿದ್ದರು.
ಈಗಾಗಲೇ ಗೋಪಿಚಂದ್ ಗರಡಿಯಲ್ಲಿ ಪಿ.ವಿ. ಸಿಂಧು, ಕೆ. ಶ್ರೀಕಾಂತ್, ಸಾಯಿ ಪ್ರಣೀತ್, ಹೆಚ್.ಎಸ್ ಪ್ರಣಯ್, ಪಿ. ಕಶ್ಯಪ್ ತರಬೇತಿ ಪಡೆಯುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.