
ನವದೆಹಲಿ[ಜು.23]: ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಹಾಗೂ ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆರಂಭಿಸಿದ ‘ಖೇಲೋ ಇಂಡಿಯಾ’ ಯೋಜನೆ ಇದೀಗ ಮತ್ತಷ್ಟು ಬಲಗೊಂಡಿದೆ. ‘ಖೇಲೋ ಇಂಡಿಯಾ ಟ್ಯಾಲೆಂಟ್ ಐಡೆಂಟಿಫಿಕೇಷನ್ ಡೆವಲಪ್‌ಮೆಂಟ್ (ಟಿಐಸಿ)’ ಯೋಜನೆಯಡಿ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್)ದಿಂದ 734 ಯುವ ಕ್ರೀಡಾಪಟುಗಳಿಗೆ ಸ್ಕಾಲರ್‌ಶಿಪ್ ನೀಡಲು ತೀರ್ಮಾನಿಸಿದೆ. ಜತೆಗೆ ಖೇಲೋ ಇಂಡಿಯಾದ ಮಾನ್ಯತೆ ಪಡೆದ ಹಾಗೂ ಇತರೆ 21 ಅಕಾಡೆಮಿಗಳಲ್ಲಿ ಉಚಿತ ತರಬೇತಿ ಪಡೆಯಲಿದ್ದಾರೆ ಎಂದು ಸಾಯ್ ಭಾನುವಾರ ಪ್ರಕಟಿಸಿದೆ.
ಯೋಜನೆಯಡಿ 385 ಬಾಲಕರು ಹಾಗೂ 349 ಬಾಲಕಿಯರು ಸೇರಿದಂತೆ 734 ಕ್ರೀಡಾಪಟುಗಳ ಪಟ್ಟಿಯನ್ನು ಸಾಯ್ ಅಂತಿಮ ಪಡಿಸಿದ್ದು, ಪ್ರತಿವರ್ಷ ₹1.2 ಲಕ್ಷ ಸ್ಕಾಲರ್‌ಶಿಪ್ ದೊರೆಯಲಿದೆ. ಇದರಲ್ಲಿ ಕರ್ನಾಟಕದ ಕ್ರೀಡಾಪಟುಗಳು ಸ್ಥಾನ ಪಡೆದಿದ್ದು, ನಿಖರವಾಗಿ ಎಷ್ಟು ರಾಜ್ಯದ ಸ್ಪರ್ಧಿಗಳಿದ್ದಾರೆ ಎಂಬುದು ತಿಳಿದುಬಂದಿಲ್ಲ. ಈ ಯೋಜನೆಗೆ ಒಳಪಡುವ ಯುವ ಕ್ರೀಡಾಪಟುಗಳು ಪ್ರತಿ 3 ತಿಂಗಳಿಗೊಮ್ಮೆ ₹30 ಸಾವಿರ ಪಡೆಯಲಿದ್ದಾರೆ. ಆಟಗಾರರ ಖರ್ಚು, ಚಿಕ್ಕ-ಪುಟ್ಟ ಚಿಕಿತ್ಸಾ ವೆಚ್ಚ ಭರಿಸಲು, ಕುಟುಂಬ ಸದಸ್ಯರ ಭೇಟಿ, ಖಾಸಗಿ ಪ್ರಯಾಣ ಸೇರಿದಂತೆ ಕ್ರೀಡಾಪಟುಗಳ ಇತರೆ ವೆಚ್ಚಗಳಿಗೆ ಇದರಿಂದ ನೆರವಾಗಲಿದೆ ಎಂಬುದು ಸರ್ಕಾರದ ಲೆಕ್ಕಾಚಾರ. ಇದರ ಜತೆಗೆ ಮಾನ್ಯತೆ ಪಡೆದ ಅಕಾಡೆಮಿಗಳಲ್ಲಿ ಅಥ್ಲೀಟ್’ಗಳ ತರಬೇತಿ, ವಾಸ್ತವ್ಯ ಹಾಗೂ ಪಂದ್ಯಾವಳಿಗಳ ಖರ್ಚುಗಳನ್ನು ನೋಡಿಕೊಳ್ಳಲಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಕ್ರೀಡಾ ಸಚಿವಾಲಯ, ‘ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ, ಇದೇ ಮೊದಲ ಬಾರಿಗೆ ಹಲವಾರು ಖಾಸಗಿ, ರಾಜ್ಯ ಹಾಗೂ ಸಾಯ್ ಅಕಾಡೆಮಿಗಳಿಗೆ ಮಾನ್ಯತೆ ನೀಡಲಾಗಿದೆ. ಹೈಪವರ್ ಕಮಿಟಿ 21 ಸಾಯ್‌ಯೇತರ ಅಕಾಡೆಮಿಗಳಿಗೆ ಮಾನ್ಯತೆ ನೀಡಿದೆ. ಯುವ ಕ್ರೀಡಾಪಟುಗಳು ಹೆಚ್ಚು ಪ್ರಯಾಣ ಮಾಡುವುದನ್ನು ತಪ್ಪಿಸುವ ಹಾಗೂ ಸಮೀಪದಲ್ಲೇ ಅವರಿಗೆ ಅತ್ಯುತ್ತಮ ತರಬೇತಿ ಲಭ್ಯವಾಗಲಿ ಎಂಬ ಉದ್ದೇಶದಿಂದ ಈ ರೀತಿ ಅಕಾಡೆಮಿಗಳಿಗೆ ಮಾನ್ಯತೆ ನೀಡಲಾಗುತ್ತಿದೆ’ ಎಂದಿದೆ.
‘ಅರ್ಜುನ ಹಾಗೂ ದ್ರೋಣಾಚಾರ್ಯ ಪ್ರಶಸ್ತಿ ವಿಜೇತರನ್ನು ಈ ಟ್ಯಾಲೆಂಟ್ ಐಡೆಂಟಿಫಿಕೇಶನ್ ಕಮಿಟಿ ಒಳಗೊಂಡಿದೆ. ಈ ಮೂಲಕ ಕ್ರೀಡಾಪಟುಗಳ ಆಯ್ಕೆ ವಿಚಾರದಲ್ಲಿ ಹೈ ಪವರ್ಡ್ ಕಮಿಟಿಗೆ ಇದು ನೆರವಾಗಲಿದೆ. ಕ್ರೀಡಾಪಟುಗಳ ಪ್ರತಿಭೆ, ಅವರ ವಯಸ್ಸು ಪ್ರತಿಯೊಂದನ್ನು ವೈಜ್ಞಾನಿಕವಾಗಿ ಮಾಡಲಾಗಿದೆ’ ಎಂದು ಹೇಳಿದೆ. ‘ನಿಗದಿತ ಕಾಲ ಮಿತಿಯ ಅಂತರದೊಳಗೆ ಆಟಗಾರರ ಪ್ರದರ್ಶನ ವಿಮರ್ಶೆಗೊಳಲ್ಪಡಲಿದ್ದು, ಮಾನದಂಡಗಳನ್ನು ಪೂರೈಸುವಲ್ಲಿ ಆಟಗಾರರು ವಿಫಲಗೊಂಡರೆ ಅವರನ್ನು ಪಟ್ಟಿಯಿಂದ ಕೈ ಬಿಡಲು ಹೈ ಪವರ್ಡ್ ಕಮಿಸಿ ತೀರ್ಮಾನಿದೆ’ ಎಂದಿದೆ.
‘ಆಟಗಾರರಂತೆ ಕ್ರೀಡಾ ಅಕಾಡೆಮಿಗಳನ್ನು ಆಗ್ಗಾಗ್ಗೆ ಪರೀಕ್ಷೆ ಒಳಪಡಿಸಲು ತೀರ್ಮಾನಿಸಲಾಗಿದ್ದು, ಒಂದೊಮ್ಮೆ ಅಕಾಡೆಮಿಗಳು ಕಳಪೆ ಪ್ರದರ್ಶನ ನೀಡಿದರೆ ಪಟ್ಟಿಯಿಂದ ತೆಗೆದು ಹಾಕಲಾಗುವುದು’ ಎಂದು ಹೇಳಿದೆ. ಇದೇ ವೇಳೆ ಗಾಯದ ಸಮಸ್ಯೆಗೆ ಒಳಗಾಗುವ ಕ್ರೀಡಾಪಟುಗಳು ಶೀಘ್ರ ಚೇತರಿಕೆಗೆ ಅಗತ್ಯವಾದ ಕ್ರಮ ರೂಪಿಸಲಾಗುವುದು. ಅಲ್ಲದೇ ಯೋಜನೆಯಲ್ಲಿ ತೊಡಿಗಿಸಿಕೊಂಡವರ ಸಾಮರ್ಥ್ಯ ದ್ವಿಗುಣಗೊಳಿಸಲು ಮೇಲ್ವಿಚಾರಣಾ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.