
ಬೆಂಗಳೂರು(ಏ.10): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 10ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ವಿರುದ್ಧ ಗೆಲುವಿನ ಸವಿಯುಂಡಿದೆ.
ಹಾಲಿ ಚಾಂಪಿಯನ್ ಹೈದರಾಬಾದ್ ವಿರುದ್ಧ ಉದ್ಘಾಟನಾ ಪಂದ್ಯದಲ್ಲಿ ಶೇನ್ ವ್ಯಾಟ್ಸನ್ ನೇತೃತ್ವದ ಆರ್'ಸಿಬಿ ಪಡೆ ಆಘಾತ ಅನುಭವಿಸಿದರೂ, ತವರಿನಲ್ಲಿ ನಡೆದ ಡೇರ್'ಡೆವಿಲ್ಸ್ ಎದುರಿನ ಎರಡನೇ ಪಂದ್ಯದಲ್ಲಿ ರೋಚಕ ಜಯದ ಮೂಲಕ ಗೆಲುವಿನ ಹಳಿಗೆ ಮರಳಿದೆ.
ಇಂದು ನಡೆಯುವ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಸ್ಟಾರ್ ಬ್ಯಾಟ್ಸ್'ಮನ್ ಎಬಿ ಡಿವಿಲಿಯರ್ಸ್ ತಂಡ ಕೂಡಿಕೊಳ್ಳುವ ಸಾಧ್ಯತೆಯಿದ್ದು, ಅವರ ಲಭ್ಯತೆ ಅಧಿಕೃತವಾಗಿ ಖಚಿತಗೊಂಡಿಲ್ಲ.
ಕಿಂಗ್ಸ್ ವಿರುದ್ಧದ ಆರ್'ಸಿಬಿ ತಂಡ ಹೀಗಿರಬಹುದು:
ಆರಂಭಿಕರಾಗಿ:
ಕ್ರಿಸ್ ಗೇಲ್, ಶೇನ್ ವ್ಯಾಟ್ಸನ್
ಆರ್'ಸಿಬಿ ನಾಯಕ ಶೇನ್ ವ್ಯಾಟ್ಸನ್ ಹಾಗೂ ವಿಂಡೀಸ್ ದೈತ್ಯ ಕ್ರಿಸ್ ಗೇಲ್ ಕಣಕ್ಕಿಳಿಯುವ ಸಾಧ್ಯತೆಯಿದೆ. ಪಂಜಾಬ್ ವಿರುದ್ಧ ವೈಯುಕ್ತಿಕ ಗರಿಷ್ಟ ರನ್ ಕಲೆಹಾಕಿರುವ ಕ್ರಿಸ್ ಗೇಲ್ ಇಂದು ಸಿಡಿಯಬಹುದು. ಕಳೆದೆರಡು ಪಂದ್ಯಗಳಲ್ಲಿ ಅಭಿಮಾನಿಗಳನ್ನು ನಿರಾಸೆಗೊಳಿಸಿರುವ ಗೇಲ್ ಮೇಲೆ ಇಂದು ಸಾಕಷ್ಟು ನಿರೀಕ್ಷೆಯಿದೆ. ಇನ್ನು ಶೇನ್ ವ್ಯಾಟ್ಸನ್ ಕೂಡ ಆಲ್ರೌಂಡ್ ಪ್ರದರ್ಶನ ತೋರುವ ನಿರೀಕ್ಷೆಯಿದೆ.
ಮಧ್ಯಮ ಕ್ರಮಾಂಕ:
ಎಬಿ ಡಿವಿಲಿಯರ್ಸ್, ಮನ್ದೀಪ್ ಸಿಂಗ್, ಕೇದಾರ್ ಜಾಧವ್, ವಿಷ್ಣು ವಿನೋದ್:
ಗಾಯದ ಬಳಿಕ ಇಂದಿನ ಪಂದ್ಯಕ್ಕೆ ಎಬಿಡಿ ಲಭ್ಯವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ನಾನು ಆಡಲು 100% ಫಿಟ್ ಆಗಿದ್ದೇನೆ ಎಂದು ಸ್ವತಃ ಹೇಳಿದ್ದಾರೆ.
ಇನ್ನು ಉತ್ತಮ ಆರಂಭ ಪಡೆಯುತ್ತಿದ್ದರೂ ಅದನ್ನು ದೊಡ್ಡ ಮೊತ್ತಕ್ಕೆ ಪರಿವರ್ತಿಸುವಲ್ಲಿ ಮನ್ದೀಪ್ ಸಿಂಗ್ ಮೇಲೆ ಸಾಕಷ್ಟು ಜವಾಬ್ದಾರಿಯಿದೆ. ಕಳೆದ ಪಂದ್ಯದ ಹೀರೋ ಕೇದಾರ್ ಜಾಧವ್ ಮತ್ತೆ ಭರ್ಜರಿ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದ್ದಾರೆ. ಇನ್ನು ಡೆಲ್ಲಿ ವಿರುದ್ಧ ಐಪಿಎಲ್'ಗೆ ಪಾದಾರ್ಪಣೆ ಮಾಡಿರುವ ವಿಷ್ಣು ವಿನೋದ್ ಇಂದಿನ ಪಂದ್ಯದಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಆಲ್ರೌಂಡರ್:
ಸ್ಟುವರ್ಟ್ ಬಿನ್ನಿ, ಪವನ್ ನೇಗಿ:
ಡೇರ್ ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಕೇದಾರ್ ಜಾಧವ್ ಜತೆ ಅರ್ಧಶಕತದ ಜತೆಯಾಟವಾಡುವ ಮೂಲಕ ಗೆಲುವಿನಲ್ಲಿ ಪ್ರಮುಖಪಾತ್ರ ವಹಿಸಿದ ಸ್ಟುವರ್ಟ್ ಬಿನ್ನಿ ಇಂದಿನ ಪಂದ್ಯದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದರ ಜೊತೆ ಮತ್ತೊಬ್ಬ ಆಲ್ರೌಂಡರ್ ಪವನ್ ನೇಗಿ ಕೂಡ ಆಡುವ 11ರ ಬಳಗದಲ್ಲಿರುವ ಸಾಧ್ಯತೆಯೇ ಹೆಚ್ಚು.
ಬೌಲಿಂಗ್:
ಎಸ್ ಅರವಿಂದ್, ತೈಮಲ್ ಮಿಲ್ಸ್, ಯಜುವೇಂದ್ರ ಚಾಹಲ್
ಒಂದು ವೇಳೆ ಎಬಿಡಿ ಇಂದಿನ ಪಂದ್ಯದಲ್ಲಿ ಕಾಣಿಸಿಕೊಂಡರೆ ವೇಗಿ ಬಿಲ್ಲಿ ಸ್ಟ್ಯಾನ್'ಲೇಕ್ ಬೆಂಚ್ ಕಾಯಬೇಕಾದ ಪರಿಸ್ಥಿತಿ ಎದುರಿಸಬೇಕಾಗಗುತ್ತದೆ. ಇನ್ನು ಈ ಬಾರಿಯ ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ಖರೀದಿಯಾಗಿರುವ ತೈಮಲ್ ಮಿಲ್ಸ್, ಯುವ ಸ್ಪಿನ್ನರ್ ಯಜುವೇಂದ್ರ ಚಾಹಲ್ ಕೂಡ ಇಂದಿನ ಪಂದ್ಯದ 11ರ ಬಳಗದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಪಕ್ಕಾ ಎನಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.