ಪುಣೆ ಮಣಿಸಿ ಅಗ್ರಸ್ಥಾನಕ್ಕೇರಿದ ನೈಟ್'ರೈಡರ್ಸ್

By Suvarna Web DeskFirst Published Apr 26, 2017, 6:37 PM IST
Highlights

ಬೃಹತ್ ಮೊತ್ತ ಬೆನ್ನತ್ತಿದ ನೈಟ್'ರೈಡರ್ಸ್ ಪಡೆ ಇನ್ನೂ 11 ಎಸೆತಗಳು ಬಾಕಿಯಿರುವಂತೆಯೇ ಕೇವಲ ಮೂರು ವಿಕೆಟ್ ನಷ್ಟಕ್ಕೆ ಗೆಲುವಿನ ನಗೆ ಬೀರಿತು.

ಪುಣೆ(ಏ.26): ರಾಬಿನ್ ಉತ್ತಪ್ಪ(87) ಮತ್ತು ನಾಯಕ ಗೌತಮ್ ಗಂಭೀರ್(62) ಶತಕದ ಜತೆಯಾಟದಿಂದ ರೈಸಿಂಗ್ ಪುಣೆ ಸೂಪರ್'ಜೈಂಟ್ಸ್ ವಿರುದ್ಧ ಏಳು ವಿಕೆಟ್'ಗಳ ಭರ್ಜರಿ ಜಯಭೇರಿ ಬಾರಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದೆ.

ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಟಾಸ್ ಗೆದ್ದ ಕೋಲ್ಕತ ನೈಟ್'ರೈಡರ್ಸ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಲಿಳಿದ ರೈಸಿಂಗ್ ಪುಣೆ ಸೂಪರ್'ಜೈಂಟ್ಸ್ ನಿಗದಿತ 20 ಓವರ್'ಗಳಲ್ಲಿ ನಾಯಕ ಸ್ಟೀವ್ ಸ್ಮಿತ್ ಅಜೇಯ (51) ಅರ್ಧಶತಕದ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 182ರನ್'ಗಳ ಸವಾಲಿನ ಮೊತ್ತ ಪೇರಿಸಿತು. ಬೃಹತ್ ಮೊತ್ತ ಬೆನ್ನತ್ತಿದ ನೈಟ್'ರೈಡರ್ಸ್ ಪಡೆ ಇನ್ನೂ 11 ಎಸೆತಗಳು ಬಾಕಿಯಿರುವಂತೆಯೇ ಕೇವಲ ಮೂರು ವಿಕೆಟ್ ನಷ್ಟಕ್ಕೆ ಗೆಲುವಿನ ನಗೆ ಬೀರಿತು.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಲಿಳಿದ ಪುಣೆ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್'ಗೆ ರಾಹುಲ್ ತಿರುಪತಿ ಹಾಗೂ ಅಜಿಂಕ್ಯ ರಹಾನೆ ಜೋಡಿ 65ರನ್ ಕಲೆಹಾಕಿ ಪುಣೆಗೆ ಉತ್ತಮ ಅಡಿಪಾಯವನ್ನೇ ಹಾಕಿಕೊಟ್ಟಿತು. ಆನಂತರ ರಹಾನೆ ಕೂಡಿಕೊಂಡ ನಾಯಕ ಸ್ಟೀವ್ ಸ್ಮಿತ್ ವೇಗವಾಗಿ ರನ್ ಕಲೆಹಾಕಲು ಒತ್ತು ನೀಡಿದರು. ರಹಾನೆ 46ರನ್ ಬಾರಿಸಿ ಸ್ಟಂಪ್ ಔಟ್ ಆದರು. ಇನ್ನು ಕೆಳಕ್ರಮಾಂದಲ್ಲಿ ಆರ್ಭಟಿಸಿದ ಧೋನಿ ಕೇವಲ 11 ಎಸೆತಗಳಲ್ಲಿ 23ರನ್ ಸಿಡಿಸಿದರೆ, ಡೇನಿಯಲ್ ಕ್ರಿಸ್ಟಿಯನ್ ಕೇವಲ ಆರು ಎಸೆತಗಳಲ್ಲಿ 16ರನ್ ಬಾರಿಸಿ ತಂಡದ ಮೊತ್ತ ಹೆಚ್ಚಿಸಿದರು.

ಸವಾಲಿನ ಮೊತ್ತವನ್ನು ಬೆನ್ನತ್ತಿದ ನೈಟ್'ರೈಡರ್ಸ್ ಪಡೆಗೆ ಸುನಿಲ್ ನರೈನ್ ಮತ್ತೊಮ್ಮೆ ಉತ್ತಮ ಆರಂಭವನ್ನೇ ಒದಗಿಸಿಕೊಟ್ಟರು. ಕೇವಲ 11 ಎಸೆತ ಎದುರಿಸಿದ ನರೈನ್ ಮೂರು ಬೌಂಡರಿಗಳ ನೆರವಿನಿಂದ 16ರನ್ ಸಿಡಿಸಿದರು. ನಂತರ ಜೊತೆಯಾದ ಕನ್ನಡಿಗ ರಾಬಿನ್ ಉತ್ತಪ್ಪ(87ರನ್, 47 ಎಸೆತ, 7 ಬೌಂಡರಿ, 6 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಮತ್ತು ನಾಯಕ ಗೌತಮ್ ಗಂಭೀರ್(62ರನ್, 46 ಎಸೆತ, 6 ಬೌಂಡರಿ, ಒಂದು ಸಿಕ್ಸ್) ತಾಳ್ಮೆಯ ಆಟದ ನೆರವಿನಿಂದ ತಂಡವನ್ನು ಗೆಲುವಿನತ್ತ ತಂದರು. ತಂಡಕ್ಕೆ ಕೇವಲ 6ರನ್'ಗಳ ಅವಶ್ಯಕತೆಯಿದ್ದಾಗ ಈ ಇಬ್ಬರು ಪೆವಿಲಿಯನ್ ಸೇರಿದರು. ಕೊನೆಯ ಆರು ರನ್'ಗಳನ್ನು ಡೇರೆನ್ ಬ್ರಾವೋ ಬಾರಿಸುವ ಮೂಲಕ ತಂಡವನ್ನು ಜಯದ ದಡ ಸೇರಿಸಿದರು.

ಸಂಕ್ಷಿಪ್ತ ಸ್ಕೋರ್:

ರೈಸಿಂಗ್ ಪುಣೆ ಸೂಪರ್'ಜೈಂಟ್ಸ್: 182/5

ಸ್ಟೀವ್ ಸ್ಮಿತ್: 51*

ಅಜಿಂಕ್ಯ ರಹಾನೆ: 46

ಕುಲ್ದೀಪ್ ಯಾದವ್: 31/2

ಕೋಲ್ಕತಾ ನೈಟ್'ರೈಡರ್ಸ್: 184/3

ರಾಬಿನ್ ಉತ್ತಪ್ಪ: 87

ಗೌತಮ್ ಗಂಭೀರ್ : 62

ಜಯದೇವ್ ಉನಾದ್ಕಟ್: 26/1

ಪಂದ್ಯಪುರುಷೋತ್ತಮ: ರಾಬಿನ್ ಉತ್ತಪ್ಪ

click me!