ಜಹೀರ್ ಬೇಡ, ಅರುಣ್ ಬೇಕು: ಕೋಚ್ ಆಗುತ್ತಿದ್ದಂತೆ ಲಾಬಿ ಆರಂಭಿಸಿದ ರವಿಶಾಸ್ತ್ರಿ, ಕಾರಣವೇನು ಗೊತ್ತಾ?

By Suvarna Web DeskFirst Published Jul 14, 2017, 10:22 AM IST
Highlights

ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಆಯ್ಕೆಯಾಗುತ್ತಿದ್ದಂತೆ ರವಿಶಾಸ್ತ್ರಿ ತಮ್ಮ ಬೇಡಿಕೆಗಳನ್ನು ಮುಂದಿಡಲು ಆರಂಭಿಸಿದ್ದಾರೆ. ಸದ್ಯ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿರುವ ಮಾಜಿ ವೇಗಿ ಜಹೀರ್ ಖಾನ್ ಅವರ ಬದಲಿಗೆ ಆ ಹುದ್ದೆಯನ್ನು ತಮ್ಮ ಆಪ್ತ ಭರತ್ ಅರುಣ್‌ಗೆ ನೀಡಬೇಕು ಎಂದು ಶಾಸ್ತ್ರಿ ಪಟ್ಟು ಹಿಡಿದಿದ್ದಾರೆ ಎಂದು ಬಿಸಿಸಿಐ  ಮೂಲಗಳು ತಿಳಿಸಿವೆ.

ಮುಂಬೈ(ಜು.14): ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಆಯ್ಕೆಯಾಗುತ್ತಿದ್ದಂತೆ ರವಿಶಾಸ್ತ್ರಿ ತಮ್ಮ ಬೇಡಿಕೆಗಳನ್ನು ಮುಂದಿಡಲು ಆರಂಭಿಸಿದ್ದಾರೆ. ಸದ್ಯ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿರುವ ಮಾಜಿ ವೇಗಿ ಜಹೀರ್ ಖಾನ್ ಅವರ ಬದಲಿಗೆ ಆ ಹುದ್ದೆಯನ್ನು ತಮ್ಮ ಆಪ್ತ ಭರತ್ ಅರುಣ್‌ಗೆ ನೀಡಬೇಕು ಎಂದು ಶಾಸ್ತ್ರಿ ಪಟ್ಟು ಹಿಡಿದಿದ್ದಾರೆ ಎಂದು ಬಿಸಿಸಿಐ  ಮೂಲಗಳು ತಿಳಿಸಿವೆ.

ಮೊದಲಿನಿಂದಲೂ ಭರತ್ ಅರುಣ್ ಪರವೇ ಒಲವು ತೋರುತ್ತಿದ್ದ ಶಾಸ್ತ್ರಿಗೆ ತಿಳಿಸದೇ ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿ ಜಹೀರ್ ಖಾನ್ ಅವರ ಹೆಸರನ್ನು ಬೌಲಿಂಗ್ ಕೋಚ್ ಹುದ್ದೆಗೆ ಶಿಫಾರಸು ಮಾಡಿದೆ ಎನ್ನಲಾಗಿದೆ. ಆದರೆ ಜಹೀರ್ ಖಾನ್ ಪೂರ್ಣಾವಧಿ ಕೋಚ್'ಗಳಂತೆ ವರ್ಷದಲ್ಲಿ 250 ದಿನ ತಂಡದೊಂದಿಗಿರಲು ಸಾಧ್ಯವಿಲ್ಲ. ಹೆಚ್ಚು ಎಂದರೆ 100 ದಿನ ಮಾತ್ರ ಆಟಗಾರರಿಗೆ ಮಾಗದರ್ಶನ ಮಾಡಬಹುದಷ್ಟೇ ಎಂದು ಹೇಳಲಾಗುತ್ತಿದೆ. ಅಲ್ಲದೇ ಜಹೀರ್ ಅವರ ಸಂಭಾವನೆ ಕುರಿತು ಇನ್ನೂ ಮಾತುಕಥೆ ನಡೆಯುತ್ತಿದ್ದು, ಅಂತಿಮಗೊಂಡಿಲ್ಲ ಎನ್ನಲಾಗಿದೆ.

‘ಈ ಹಿಂದೆ ಬೌಲಿಂಗ್ ಕೋಚ್ ಆಗಿ ಯಾರನ್ನು ನೇಮಿಸಬೇಕು ಎನ್ನುವ ಪ್ರಶ್ನೆಗೆ ಶಾಸ್ತ್ರಿ, ಅರುಣ್ ಅವರ ಹೆಸರನ್ನೇ ಸೂಚಿಸಿದ್ದರು. ಆದರೆ ಸಲಹಾ ಸಮಿತಿಯ ಒಬ್ಬ ಸದಸ್ಯರಿಗೆ ಅರುಣ್ ಆಗುವುದು ಇಷ್ಟವಿರಲಿಲ್ಲ. ಆನಂತರ ಶಾಸ್ತ್ರಿ ಸರಿ ಹಾಗಿದ್ದರೆ, ಜೇಸನ್ ಗಿಲೆಸ್ಪಿಯನ್ನು ಮಾಡಿ ಎಂದು ಕೇಳಿದ್ದರು’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಬೌಲಿಂಗ್ ಕೋಚ್‌ಗಳಲ್ಲಿ ಒಬ್ಬರಾದ ಗಿಲೆಸ್ಪಿ, ಪಪುವಾ ನ್ಯೂ ಗಿನಿ ತಂಡದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರಿಂದ ಅವರನ್ನು ನೇಮಿಸುವುದಿಲ್ಲ ಎಂದು ಶಾಸ್ತ್ರಿಗೆ ಗೊತ್ತಿತ್ತು. ಆಯ್ಕೆ ಇಲ್ಲದೆ ಅರುಣ್‌ಗೇ ಆ ಹುದ್ದೆ ಸಿಗಲಿದೆ ಎಂದು ಅವರು ವಿಶ್ವಾಸದಿಂದಿದ್ದರು’ ಎಂದು ಬಿಸಿಸಿಐ ಅಧಿಕಾರಿ ಮಾಹಿತಿ ಬಹಿರಂಗಗೊಳಿಸಿದ್ದಾರೆ. ಬಿಸಿಸಿಐ, ಮಾಜಿ ಬೌಲಿಂಗ್ ಕೋಚ್ ವೆಂಕಟೇಶ್ ಪ್ರಸಾದ್ ಅವರ ಹೆಸರನ್ನು ಪ್ರಸ್ತಾಪಿಸಲು ಸಿದ್ಧವಿತ್ತು. ಆದರೆ ಶಾಸ್ತ್ರಿ, ಅರುಣ್ ಬಿಟ್ಟು ಇನ್ಯಾರಿಗೂ ಆ ಸ್ಥಾನ ಸಿಗಬಾರದು ಎಂದು ಪಣತೊಟ್ಟಿದ್ದಾರೆ. ತಾವು ಬೌಲಿಂಗ್ ಕೋಚ್ ಆಗಿದ್ದಾಗ ವೇಗದ ಬೌಲರ್‌ಗಳನ್ನು ಲೈನ್ ಅಂಡ್ ಲೆಂಗ್ತ್ ಬಗ್ಗೆ ಹೆಚ್ಚು ಗಮನ ನೀಡುವಂತೆ ಮಾಡಿ ಅವರನ್ನೆಲ್ಲಾ ಮಧ್ಯಮ ವೇಗಿಗಳನ್ನಾಗಿ ಪರಿವರ್ತಿಸಿದ್ದರು ಎನ್ನುವ ಆರೋಪ ಪ್ರಸಾದ್ ಮೇಲಿದೆ. ಬಿಸಿಸಿಐ ಮೂಲಗಳ ಪ್ರಕಾರ, ಈ ವಾರಾಂತ್ಯದಲ್ಲಿ ರವಿಶಾಸ್ತ್ರಿ ಬಿಸಿಸಿಐನ ಹಿರಿಯ ಅಧಿಕಾರಿಗಳು ಹಾಗೂ ಕ್ರಿಕೆಟ್ ಆಡಳಿತ ಸಮಿತಿಯನ್ನು ಭೇಟಿ ಮಾಡಲಿದ್ದಾರೆ.

ಸದ್ಯ ಶಾಸ್ತ್ರಿ ಲಂಡನ್‌ನಲ್ಲಿದ್ದಾರೆ. ‘ಜಹೀರ್ ಖಾನ್ ಬಗ್ಗೆ ಶಾಸ್ತ್ರಿಗೆ ಅಪಾರ ಗೌರವವಿದೆ. ಆದರೆ ತಂಡಕ್ಕೆ ಪೂರ್ಣಾವಧಿ ಬೌಲಿಂಗ್ ಕೋಚ್‌ನ ಅಗತ್ಯವಿದೆ ಎನ್ನುವುದು ಅವರ ನಂಬಿಕೆ. ಜಹೀರ್ ಮಾರ್ಗಸೂಚಿಯನ್ನು ಹಾಕಿಕೊಡಲಿ, ಅದನ್ನು ಭರತ್ ಅರುಣ್ ಅನುಸರಿಸಿಕೊಂಡು ಹೋಗುತ್ತಾರೆ. ಶನಿವಾರ ಅವರು ಆಡಳಿತ ಸಮಿತಿಯನ್ನು ಭೇಟಿ ಮಾಡಿ, ಶ್ರೀಲಂಕಾ ಪ್ರವಾಸದಿಂದಲೇ ಅರುಣ್ ತಂಡಕ್ಕೆ ಅಗತ್ಯವಿದೆ ಎಂದು ತಿಳಿಸಲಿದ್ದಾರೆ’ ಎಂದು ಹೆಸರು ಬಹಿರಂಗಗೊಳಿಸಬಾರದು ಎಂಬ ಷರತ್ತಿನ ಮೇಲೆ ಬಿಸಿಸಿಐ ಹಿರಿಯ ಆಡಳಿತಗಾರರೊಬ್ಬರು ಹೇಳಿದ್ದಾರೆ.

ಒಂದೊಮ್ಮೆ ಭರತ್ ಅರುಣ್ ಬೌಲಿಂಗ್ ಕೋಚ್ ಆಗಿ ನೇಮಕಗೊಂಡರೆ, ಸೌರವ್ ಗಂಗೂಲಿ ವಿರುದ್ಧ ಶಾಸ್ತ್ರಿ ಮೇಲುಗೈ ಸಾಧಿಸಿದಂತಾಗುತ್ತದೆ. ಅರುಣ್ ಬದಲಿಗೆ ಜಹೀರ್ ಅವರನ್ನು ಬೌಲಿಂಗ್ ಕೋಚ್ ಮಾಡಬೇಕು ಎಂದು ಗಂಗೂಲಿ ಪಟ್ಟು ಹಿಡಿದ್ದಿದ್ದರು. 2014ರಲ್ಲಿ ಜೋ ಡೇವ್ಸ್ ಬದಲಿಗೆ ಭಾರತದ ಬೌಲಿಂಗ್ ಆಗಿ ನೇಮಕಗೊಂಡಿದ್ದ ಅರುಣ್, 2016ರವರೆಗೂ ತಂಡದೊಂದಿಗಿದ್ದರು. ನಿರ್ದೇಶಕ ಸ್ಥಾನದಿಂದ ಶಾಸ್ತ್ರಿಯನ್ನು ಕೈಬಿಟ್ಟಾಗ ಅರುಣ್ ಸಹ ತಮ್ಮ ಹುದ್ದೆ ಕಳೆದುಕೊಂಡಿದ್ದರು. ಶಾಸ್ತ್ರಿ ಹಾಗೂ ಅರುಣ್ 80ರ ದಶಕದಲ್ಲಿ ಅಂಡರ್ 19 ಕ್ರಿಕೆಟ್ ಆಡುವಾಗಿನಿಂದಲೂ ಸ್ನೇಹಿತರಾಗಿದ್ದಾರೆ. ಅಲ್ಲದೇ ಎನ್.ಶ್ರೀನಿವಾಸನ್ ಬಿಸಿಸಿಐ ಅಧ್ಯಕ್ಷರಾಗಿದ್ದಾಗ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿ ಬೌಲಿಂಗ್ ಸಲಹೆಗಾರರಾಗಿದ್ದ ಅರುಣ್ ಅವರ ಹೆಸರನ್ನು ಬೌಲಿಂಗ್ ಕೋಚ್ ಸ್ಥಾನಕ್ಕೆ ಶಾಸ್ತ್ರಿಯೇ ಶಿಫಾರಸು ಮಾಡಿದ್ದರು.

 

 

click me!