ಅಂಪೈರ್ ಕೃಪಾಕಟಾಕ್ಷ: ಫೈನಲ್’ನತ್ತ ಸೌರಾಷ್ಟ್ರ; ಚೀಟಿಂಗ್ ಪೂಜಾರ..!

By Web DeskFirst Published Jan 28, 2019, 9:01 AM IST
Highlights

ಪಂದ್ಯದ 4ನೇ ದಿನವಾದ ಭಾನುವಾರ, ಕರ್ನಾಟಕ ತನ್ನ 2ನೇ ಇನ್ನಿಂಗ್ಸ್‌ನಲ್ಲಿ 239 ರನ್‌ಗಳಿಗೆ ಆಲೌಟ್‌ ಆಯಿತು. 3ನೇ ದಿನದಂತ್ಯಕ್ಕೆ 8 ವಿಕೆಟ್‌ ನಷ್ಟಕ್ಕೆ 237 ರನ್‌ ಗಳಿಸಿದ್ದ ರಾಜ್ಯ ತಂಡ, ಆ ಮೊತ್ತಕ್ಕೆ ಕೇವಲ 2 ರನ್‌ ಸೇರಿಸಲಷ್ಟೇ ಶಕ್ತವಾಯಿತು.

ಬೆಂಗಳೂರು[ಜ.28]: ಕಳಪೆ ಅಂಪೈರಿಂಗ್‌ನ ಪರಿಣಾಮವಾಗಿ ಕರ್ನಾಟಕ ತಂಡ ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಸೋತು 2018-19ರ ಋುತುವಿನಿಂದ ಹೊರಬೀಳುವ ಭೀತಿಗೆ ಸಿಲುಕಿದೆ. 2ನೇ ಇನ್ನಿಂಗ್ಸ್‌ನಲ್ಲೂ ಜೀವದಾನ ಪಡೆದ ಚೇತೇಶ್ವರ್‌ ಪೂಜಾರ ಅಜೇಯ ಶತಕ ಬಾರಿಸಿದ್ದು, ಸೌರಾಷ್ಟ್ರವನ್ನು ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿದ್ದಾರೆ. ಗೆಲುವಿಗೆ 279 ರನ್‌ ಗುರಿ ಬೆನ್ನತ್ತಿರುವ ಸೌರಾಷ್ಟ್ರ, 4ನೇ ದಿನದಂತ್ಯಕ್ಕೆ 3 ವಿಕೆಟ್‌ ನಷ್ಟಕ್ಕೆ 224 ರನ್‌ ಗಳಿಸಿದ್ದು, ಇನ್ನು ಕೇವಲ 55 ರನ್‌ ಮಾತ್ರ ಬೇಕಿದೆ.

ಪಂದ್ಯದ 4ನೇ ದಿನವಾದ ಭಾನುವಾರ, ಕರ್ನಾಟಕ ತನ್ನ 2ನೇ ಇನ್ನಿಂಗ್ಸ್‌ನಲ್ಲಿ 239 ರನ್‌ಗಳಿಗೆ ಆಲೌಟ್‌ ಆಯಿತು. 3ನೇ ದಿನದಂತ್ಯಕ್ಕೆ 8 ವಿಕೆಟ್‌ ನಷ್ಟಕ್ಕೆ 237 ರನ್‌ ಗಳಿಸಿದ್ದ ರಾಜ್ಯ ತಂಡ, ಆ ಮೊತ್ತಕ್ಕೆ ಕೇವಲ 2 ರನ್‌ ಸೇರಿಸಲಷ್ಟೇ ಶಕ್ತವಾಯಿತು. ಶ್ರೇಯಸ್‌ ಗೋಪಾಲ್‌ 61 ರನ್‌ಗಳಿಗೆ ಔಟಾದರೆ, ರೋನಿತ್‌ ಮೋರೆ ಖಾತೆ ತೆರೆಯಲಿಲ್ಲ. ಅಭಿಮನ್ಯು ಮಿಥುನ್‌ 37 ರನ್‌ ಗಳಿಸಿ ಅಜೇಯರಾಗಿ ಉಳಿದರು. ಸೌರಾಷ್ಟ್ರ ಪರ ಸ್ಪಿನ್ನರ್‌ ಧರ್ಮೇಂದ್ರ ಜಡೇಜಾ 5 ವಿಕೆಟ್‌ ಕಿತ್ತರು.

ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಸೌರಾಷ್ಟ್ರಕ್ಕೆ ವಿನಯ್‌ ಕುಮಾರ್‌ ಹಾಗೂ ಅಭಿಮನ್ಯು ಮಿಥುನ್‌ ಆರಂಭಿಕ ಆಘಾತ ನೀಡಿದರು. ಸ್ನೆಲ್‌ ಪಟೇಲ್‌ (0), ವಿಶ್ವರಾಜ್‌ ಜಡೇಜಾ (0) ವಿನಯ್‌ಗೆ ಬಲಿಯಾದರೆ, ಸ್ಲಿಪ್‌ನಲ್ಲಿ ಸಿದ್ಧಾರ್ಥ್ ಹಿಡಿತ ಅದ್ಭುತ ಕ್ಯಾಚ್‌ನಿಂದಾಗಿ ಹಾರ್ವಿಕ್‌ ದೇಸಾಯಿ (9) ಪೆವಿಲಿಯನ್‌ ಸೇರಿದರು. ಸೌರಾಷ್ಟ್ರ 23 ರನ್‌ಗೆ 3 ವಿಕೆಟ್‌ ಕಳೆದುಕೊಂಡಿತು.

4ನೇ ವಿಕೆಟ್‌ಗೆ ಜತೆಯಾದ ಪೂಜಾರ ಹಾಗೂ ಶೆಲ್ಡನ್‌ ಜಾಕ್ಸನ್‌, ಅಜೇಯ 201 ರನ್‌ ಜತೆಯಾಟವಾಡಿ ತಂಡಕ್ಕೆ ಆಸರೆಯಾದರು. ಪೂಜಾರ 14 ಬೌಂಡರಿಗಳೊಂದಿಗೆ 108 ರನ್‌ ಗಳಿಸಿ, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 49ನೇ ಶತಕ ಪೂರೈಸಿದರು. ಶೆಲ್ಡನ್‌ 16ನೇ ಪ್ರಥಮ ದರ್ಜೆ ಶತಕದಿಂದ ಕೇವಲ 10 ರನ್‌ ದೂರವಿದ್ದಾರೆ.

ಸ್ಕೋರ್‌: ಕರ್ನಾಟಕ 275 ಹಾಗೂ 239, ಸೌರಾಷ್ಟ್ರ 236 ಹಾಗೂ 224/3

ಕಳಪೆ ಅಂಪೈರಿಂಗ್‌: ಪೂಜಾರಗೆ ಜೀವದಾನ!

ರಣಜಿ ಋುತುವಿನುದ್ದಕ್ಕೂ ಭಾರೀ ಚರ್ಚೆಗೆ ಗ್ರಾಸವಾಗಿರುವ ಕಳಪೆ ಅಂಪೈರಿಂಗ್‌, ಸೆಮೀಸ್‌ನಲ್ಲೂ ಮುಂದುವರಿದಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಔಟಾಗಿದ್ದರೂ ಅಂಪೈರ್‌ ಕೃಪಾಕಟಾಕ್ಷದಿಂದ ಕ್ರೀಸ್‌ನಲ್ಲಿ ಉಳಿದುಕೊಂಡಿದ್ದ ಪೂಜಾರ, 2ನೇ ಇನ್ನಿಂಗ್ಸ್‌ನಲ್ಲೂ ಜೀವದಾನ ಪಡೆದರು. 
ವಿನಯ್‌ ಕುಮಾರ್‌ ಬೌಲಿಂಗ್‌ನಲ್ಲಿ ಇನ್ನಿಂಗ್ಸ್‌ನ 25ನೇ ಓವರ್‌ನಲ್ಲಿ ಚೆಂಡು ಪೂಜಾರ ಬ್ಯಾಟ್‌ಗೆ ಸವರಿಕೊಂಡು ಕೀಪರ್‌ ಕೈಸೇರಿತು. ಕರ್ನಾಟಕ ಆಟಗಾರರು ಸಂಭ್ರಮಿಸಲು ಆರಂಭಿಸಿದರು. ಆದರೆ ಬರೋಡಾ ಮೂಲದ ಅಂಪೈರ್‌ ಸೈಯದ್‌ ಖಲೀದ್‌ ಮಾತ್ರ ಔಟ್‌ ನೀಡಲಿಲ್ಲ. ಪೂಜಾರ ಸಹ ಕ್ರೀಡಾಸ್ಫೂರ್ತಿ ಮರೆತು ಕ್ರೀಸ್‌ನಲ್ಲೇ ನಿಂತರು. 34 ರನ್‌ ಗಳಿಸಿದ್ದ ಪೂಜಾರ ಹೊರನಡೆದಿದ್ದರೆ ಸೌರಾಷ್ಟ್ರ ಸಂಕಷ್ಟ ಹೆಚ್ಚುತ್ತಿತ್ತು. ತಂಡದ ಮೊತ್ತ ಆಗ ಇನ್ನೂ 68 ರನ್‌ ಮಾತ್ರ ಆಗಿತ್ತು.

ಪೂಜಾರ ‘ಮೋಸಗಾರ’ ಎಂದ ಅಭಿಮಾನಿಗಳು!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆರೆದಿದ್ದ ನೂರಾರು ಅಭಿಮಾನಿಗಳು ಪೂಜಾರ ಕ್ರೀಡಾಸ್ಫೂರ್ತಿ ಮರೆತು ಹೊರನಡೆಯಲು ನಿರಾಕರಿಸಿದ್ದರಿಂದ ಅವರನ್ನು ಮೋಸಗಾರ ಎಂದು ನಿಂದಿಸಿದರು. ದಿನದಾಟ ಮುಗಿದ ಬಳಿಕ ಮೈದಾನ ತೊರೆಯುವಾಗಲೂ ‘ಮೋಸಗಾರ... ಪೂಜಾರ ಮೋಸಗಾರ’ ಎನ್ನುವ ಕೂಗು ಜೋರಾಗಿತ್ತು. ಸಾಮಾಜಿಕ ತಾಣಗಳಲ್ಲೂ ಅಂಪೈರ್‌ ಹಾಗೂ ಪೂಜಾರ ವಿರುದ್ಧ ಭಾರೀ ಅಸಮಾಧಾನ ವ್ಯಕ್ತವಾಗಿದೆ.

click me!