ಇಂದಿನಿಂದ ರಣಜಿ ಟ್ರೋಫಿ ಫೈನಲ್ ಪಂದ್ಯ ನಡೆಯಲಿದೆ. ನಾಗ್ಪುರದಲ್ಲಿ ನಡೆಯಲಿರುವ ಮಹತ್ವದ ಪಂದ್ಯದಲ್ಲಿ ಸೌರಾಷ್ಟ್ರ ಹಾಗೂ ವಿದರ್ಭ ಪ್ರಶಸ್ತಿಗಾಗಿ ಹೋರಾಟಲ ನಡೆಸಲಿದೆ. ವಿದರ್ಭ ಪ್ರಶಸ್ತಿ ಉಳಿಸಿಕೊಳ್ಳೋ ವಿಶ್ವಾಸದಲ್ಲಿದ್ದರೆ, ಸೌರಾಷ್ಟ್ರ ಚೊಚ್ಚಲ ಪ್ರಶಸ್ತಿ ಗೆಲ್ಲೋ ಗುರಿ ಇಟ್ಟುಕೊಂಡಿದೆ.
ನಾಗ್ಪುರ(ಫೆ.03): 2018-19ರ ರಣಜಿ ಟ್ರೋಫಿ ಫೈನಲ್ ಪಂದ್ಯ ಭಾನುವಾರದಿಂದ ಇಲ್ಲಿನ ವಿದರ್ಭ ಕ್ರಿಕೆಟ್ ಮೈದಾನದಲ್ಲಿ ಆರಂಭಗೊಳ್ಳಲಿದ್ದು, ಹಾಲಿ ಚಾಂಪಿಯನ್ ವಿದರ್ಭ ಬಲಿಷ್ಠ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ. ಭಾರತ ಟೆಸ್ಟ್ ತಂಡದ ತಾರಾ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ ಹಾಗೂ ತಾರಾ ವೇಗಿ ಉಮೇಶ್ ಯಾದವ್ ನಡುವಿನ ಸೆಣಸಾಟ ಭಾರೀ ರೋಚಕತೆ ಹುಟ್ಟುಹಾಕಿದೆ. ಹಾಲಿ ಚಾಂಪಿಯನ್ ವಿದರ್ಭ ಪ್ರಶಸ್ತಿ ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದರೆ, 2 ಬಾರಿ ರನ್ನರ್-ಅಪ್ ಆಗಿದ್ದ ಸೌರಾಷ್ಟ್ರ ಚೊಚ್ಚಲ ಬಾರಿಗೆ ಪ್ರಶಸ್ತಿ ಎತ್ತಿಹಿಡಿಯುವ ಗುರಿ ಹೊಂದಿದೆ.
ಇದನ್ನೂ ಓದಿ: 5ನೇ ಏಕದಿನ: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ-ತಂಡದಲ್ಲಿ 3 ಬದಲಾವಣೆ!
ಪೂಜಾರ ಹಾಗೂ ಉಮೇಶ್ ಈ ಮುಖಾಮುಖಿಯ ಪ್ರಮುಖ ಆಕರ್ಷಣೆಯಾಗಿದ್ದರೂ, ಸೌರಾಷ್ಟ್ರ ಹಾಗೂ ವಿದರ್ಭ ನಡುವಿನ ಪಂದ್ಯವನ್ನು ಸಮಬಲರ ನಡುವಿನ ಕಾದಾಟ ಎಂದೇ ಬಣ್ಣಿಸಲಾಗಿದೆ. ದೇಸಿ ರನ್ ಮಷಿನ್ ವಾಸೀಂ ಜಾಫರ್, ಫೈಯಜ್ ಫಜಲ್, ಗಣೇಶ್ ಸತೀಶ್, ಅಕ್ಷಯ್ ವಾಡ್ಕರ್‌ರಂತಹ ಅನುಭವಿ ಬ್ಯಾಟ್ಸ್‌ಮನ್‌ಗಳ ಬಲ ವಿದರ್ಭಕ್ಕಿದೆ. ಮತ್ತೊಂದೆಡೆ ಪೂಜಾರ ಜತೆ ಶೆಲ್ಡನ್ ಜಾಕ್ಸನ್, ಭಾರತ ಅಂಡರ್-19 ತಂಡದ ಮಾಜಿ ಆರಂಭಿಕ ಹಾರ್ವಿಕ್ ದೇಸಾಯಿ, ಸ್ನೆಲ್ ಪಟೇಲ್‌ರಂತಹ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ಗಳು ಸೌರಾಷ್ಟ್ರ ತಂಡದಲ್ಲಿದ್ದಾರೆ.
ಇದನ್ನೂ ಓದಿ: ಏರ್ ಶೋ ಎಫೆಕ್ಟ್: ಬೆಂಗ್ಳೂರಲ್ಲಿ 2ನೇ ಟಿ20, ಮೊದಲ ಪಂದ್ಯಕ್ಕೆ ವೈಝಾಗ್ ಆತಿಥ್ಯ!
ಉಮೇಶ್ ಯಾದವ್, ರಜ್ನೀಶ್ ಗುರ್ಬಾನಿ, ಯಶ್ ಠಾಕೂರ್, ಸುನಿಕೇತ್, ಆದಿತ್ಯ ಥಕಾರೆ ವಿದರ್ಭದ ಬೌಲಿಂಗ್ ಬಲವಾದರೆ, ಜಯದೇವ್ ಉನಾದ್ಕತ್, ಚೇತನ್ ಸಕಾರಿಯಾ, ಕಮ್ಲೇಶ್ ಮಕವಾನ, ಧರ್ಮೇಂದ್ರ ಜಡೇಜಾರಂತಹ ಪರಿಣಾಮಕಾರಿ ಬೌಲರ್‌ಗಳು ಸೌರಾಷ್ಟ್ರ ತಂಡದಲ್ಲಿದ್ದಾರೆ. ಎರಡೂ ತಂಡಗಳ 9ನೇ ಕ್ರಮಾಂಕದ ಆಟಗಾರ ಸಹ ಉತ್ತಮ ಬ್ಯಾಟ್ಸ್‌ಮನ್ ಎನಿಸಿರುವುದು ವಿಶೇಷ. ಹೀಗಾಗಿ ಬೌಲರ್‌ಗಳಿಗೆ ಈ ಪಂದ್ಯದಲ್ಲಿ ಕಠಿಣ ಸವಾಲು ಎದುರಾಗಲಿದೆ.
ಸೆಮಿಫೈನಲ್‌ನಲ್ಲಿ ಕೇವಲ ಒಂದೂವರೆ ದಿನದಲ್ಲಿ ಕೇರಳವನ್ನು ಬಗ್ಗುಬಡಿದು ವಿದರ್ಭ ಫೈನಲ್ ಪ್ರವೇಶಿಸಿದರೆ, ವಿವಾದಾತ್ಮಕ ತೀರ್ಪುಗಳಿಂದ ಕೂಡಿದ್ದ ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಜಯಿಸಿ ಸೌರಾಷ್ಟ್ರ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟತು.
ಈ ಆವೃತ್ತಿಯಲ್ಲಿ ಜಾಫರ್ 1003 ರನ್ ಗಳಿಸಿ, ಗರಿಷ್ಠ ರನ್ ಸರದಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ತವರಿನ ಪಿಚ್‌ನಲ್ಲಿ ಜಾಫರ್ ಹಾಗೂ ಫಜಲ್‌ರಂತಹ ಟೆಸ್ಟ್ ತಜ್ಞರನ್ನು ಔಟ್ ಮಾಡುವುದು ಸೌರಾಷ್ಟ್ರ ಬೌಲರ್‌ಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಮತ್ತೊಂದೆಡೆ ಆಸ್ಪ್ರೇಲಿಯಾ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿ ಬಂದ ಉಮೇಶ್ ಯಾದವ್, ಕ್ವಾರ್ಟರ್ ಫೈನಲ್ ಹಾಗೂ ಸೆಮಿಫೈನಲ್‌ನಲ್ಲಿ ಒಟ್ಟು 21 ವಿಕೆಟ್ ಕಿತ್ತಿದ್ದಾರೆ. ಪ್ರಚಂಡ ಲಯದಲ್ಲಿರುವ ಉಮೇಶ್ ದಾಳಿಯನ್ನು ಸೌರಾಷ್ಟ್ರ ಬ್ಯಾಟ್ಸ್‌ಮನ್‌ಗಳು ಅದರಲ್ಲೂ ಪ್ರಮುಖವಾಗಿ ಪೂಜಾರ ಎಷ್ಟುಸಮರ್ಥವಾಗಿ ಎದುರಿಸಲಿದ್ದಾರೆ ಎನ್ನುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಪಂದ್ಯ ಆರಂಭ:
ಬೆಳಗ್ಗೆ 9.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋಟ್ಸ್‌ರ್ 2
1003
ಈ ಬಾರಿ ರಣಜಿ ಟ್ರೋಫಿಯಲ್ಲಿ ವಾಸೀಂ ಜಾಫರ್ 1003 ರನ್ ಗಳಿಸಿದ್ದಾರೆ.
21
ಕಳೆದ 2 ಪಂದ್ಯಗಳಲ್ಲಿ ಉಮೇಶ್ ಯಾದವ್ 21 ವಿಕೆಟ್ ಉರುಳಿಸಿದ್ದಾರೆ.