ಪ್ರೊ ಕುಸ್ತಿ ಲೀಗ್'ಗೆ ದಿನಗಣನೆ ಆರಂಭ

By Suvarna Web DeskFirst Published Dec 29, 2016, 2:31 PM IST
Highlights

ಲೀಗ್‌ನಲ್ಲಿ ಒಟ್ಟು 15 ಪಂದ್ಯಗಳನ್ನು ನಡೆಸಲಾಗುವುದು. ಜ. 17 ಮತ್ತು 18ರಂದು ಎರಡು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ.

ನವದೆಹಲಿ(ಡಿ.12): ಬಹುನಿರೀಕ್ಷಿತ ಪ್ರೊ ಕುಸ್ತಿ ಲೀಗ್ ಮುಂದಿನ ಜನವರಿ 2 ರಿಂದ ಆರಂಭಗೊಳ್ಳಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ತಂಡ, ಹರ್ಯಾಣ ಹ್ಯಾಮರ್ಸ್ ತಂಡವನ್ನು ಎದುರಿಸಲಿದೆ. ದೆಹಲಿಯಲ್ಲಿನ ಎಲ್ಲಾ ಪಂದ್ಯಗಳನ್ನು ಇಲ್ಲಿನ ಕೆಡಿ ಜಾಧವ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. 15 ಕೋಟಿ ಪ್ರಶಸ್ತಿ ಮೊತ್ತವನ್ನು ಒಳಗೊಂಡ ಪಂದ್ಯಾವಳಿಯಲ್ಲಿ 6 ತಂಡಗಳ ಸ್ಪರ್ಧಾಳುಗಳು ಸೆಣಸಲಿದ್ದಾರೆ. ದೆಹಲಿ ಸುಲ್ತಾನ್ಸ್, ಜೈಪುರ ನಿಂಜಾಸ್, ಮುಂಬೈ ಮಹಾರತಿ, ಉತ್ತರಪ್ರದೇಶ ದಂಗಲ್, ಎನ್‌'ಸಿಆರ್ ಪಂಜಾಬ್ ರಾಯಲ್ಸ್ ಮತ್ತು ಹರ್ಯಾಣ ಹ್ಯಾಮರ್ಸ್ ತಂಡಗಳು ವಿಭಿನ್ನ ತಂತ್ರಗಾರಿಕೆಯಲ್ಲಿ ಕಣಕ್ಕಿಳಿಯುತ್ತಿದ್ದು, ಈ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿವೆ.

ಮೊದಲ ಆವೃತ್ತಿಯ ಲೀಗ್‌'ಗೆ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ಅದರಂತೆ ಎರಡನೇ ಲೀಗ್‌'ನಲ್ಲೂ ಇದೇ ರೀತಿಯ ಪ್ರತಿಕ್ರಿಯೆ ಮೂಡುವ ವಿಶ್ವಾಸವಿದೆ. ಅಲ್ಲದೇ ಲೀಗ್ ಟೂರ್ನಿಗಳು ಆರಂಭಗೊಂಡ ನಂತರ ಕುಸ್ತಿ ಬಗ್ಗೆ ಜನರಲ್ಲಿ ಉತ್ತಮ ಭಾವನೆ ಮೂಡಿದೆ ಎಂದು ಭಾರತೀಯ ಕುಸ್ತಿ ಫೆಡರೇಷನ್‌'ನ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಹೇಳಿದ್ದಾರೆ.

Latest Videos

ಲೀಗ್‌ನಲ್ಲಿ ಒಟ್ಟು 15 ಪಂದ್ಯಗಳನ್ನು ನಡೆಸಲಾಗುವುದು. ಜ. 17 ಮತ್ತು 18ರಂದು ಎರಡು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ನಾಲ್ಕು ಗುಂಪಿನ ಅಂಕಗಳಿಕೆಯಲ್ಲಿ ಅಗ್ರಸ್ಥಾನ ಪಡೆಯುವ ಕುಸ್ತಿಪಟುಗಳು ಜ.19ರಂದು ನಡೆಯುವ ಫೈನಲ್‌'ನಲ್ಲಿ ಸೆಣಸುವ ಅವಕಾಶ ಪಡೆಯಲಿದ್ದಾರೆ. ಈ ಆವೃತ್ತಿಯಲ್ಲಿ 54 ಕುಸ್ತಿಪಟುಗಳು ಸ್ಪರ್ಧಿಸಲಿದ್ದಾರೆ. 9 ವಿಭಾಗಗಳಲ್ಲಿ ಪಂದ್ಯಗಳು ನಡೆಯಲಿವೆ. ಪುರುಷರ ವಿಭಾಗದಲ್ಲಿ 57, 65, 70, 74 ಮತ್ತು 97ಕೆಜಿಯಲ್ಲಿ ಸ್ಪರ್ಧೆ ಏರ್ಪಟ್ಟರೆ, ಮಹಿಳೆಯರ ವಿಭಾಗದಲ್ಲಿ 48, 53, 58 ಮತ್ತು 69-75ಕೆಜಿ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿದೆ.

ಭಾರತೀಯ ಕುಸ್ತಿಪಟುಗಳಲ್ಲಿ ಪ್ರಮುಖ ಸ್ಪರ್ಧಿಗಳಾದ ಒಲಿಂಪಿಕ್ ಕೂಟದ ಕಂಚು ವಿಜೇತೆ ಸಾಕ್ಷಿ ಮಲಿಕ್, ರಿತು ಸಂಗೀತಾ, ಭಜರಂಗ್ ಪೂನಿಯಾ ಮತ್ತು ಸಂದೀಪ್ ತೋಮರ್ ಸೇರಿದಂತೆ ವಿದೇಶಿ ಸ್ಪರ್ಧಾಳುಗಳಲ್ಲಿ ಒಲಿಂಪಿಕ್ ಚಿನ್ನ ವಿಜೇತೆ ಎರಿಕಾ ವೈಬ್, ಒಡುನ್ಯೊ ಓಲಸಾಡೆ, ಸೋಫಿಯಾ ಮ್ಯಾಟ್ಸನ್, ಟೊಗ್ರಲ್ ಅಸ್ಗಾರೊವ್ ಮತ್ತು ವ್ಲಾದಿಮಿರ್ ಈಗಾಗಲೇ ತರಬೇತಿಯಲ್ಲಿ ತೊಡಗಿದ್ದು, ಪಂದ್ಯಾವಳಿ ಉತ್ತಮ ಪೈಪೋಟಿಯಿಂದ ಕೂಡಿರಲಿದೆ. ಉತ್ತರಪ್ರದೇಶ ದಂಗಾಲ್ ತಂಡದಲ್ಲಿರುವ ಗೀತಾ ಕುಮಾರಿ ಪೋಗಟ್ ಮತ್ತು ಬಬಿತಾ ಕುಮಾರಿ ಪೋಗಟ್ ಗಾಯದಿಂದ ಚೇತರಿಸಿಕೊಂಡಿದ್ದು, ಈ ಸೀಸನ್‌ನಲ್ಲಿ ಕಣಕ್ಕಿಳಿಯುವುದರೊಂದಿಗೆ ಪ್ರಭಾವಿ ಪ್ರದರ್ಶನದ ವಿಶ್ವಾಸದಲ್ಲಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಗೀತಾ ಮತ್ತು ಬಬಿತಾ ಅವರ ಜೀವನಾಧಾರಿತ ‘ದಂಗಾಲ್’ ಸಿನಿಮಾ ಬಿಡುಗಡೆಯಾಗಿ ಸುದ್ದಿ ಮಾಡುತ್ತಿದೆ.

ಸಮಯ: ಸಂಜೆ 7ಕ್ಕೆ ಆರಂಭ,

ನೇರಪ್ರಸಾರ: ಸೋನಿ ನೆಟ್‌ವರ್ಕ್

ಪ್ರೊ ಕುಸ್ತಿ ಲೀಗ್ ವೇಳಾಪಟ್ಟಿ

ಜ.2 ಹರ್ಯಾಣ-ಮುಂಬೈ

ಜ.3 ಪಂಜಾಬ್-ಜೈಪುರ

ಜ.4 ಉತ್ತರ ಪ್ರದೇಶ-ಹರ್ಯಾಣ

ಜ.5 ಪಂಜಾಬ್-ಮುಂಬೈ

ಜ.6 ದೆಹಲಿ-ಜೈಪುರ

ಜ.7 ಮುಂಬೈ-ಉತ್ತರಪ್ರದೇಶ

ಜ.8 ಪಂಜಾಬ್-ದೆಹಲಿ

ಜ.9 ಜೈಪುರ-ಮುಂಬೈ

ಜ.10 ಉತ್ತರಪ್ರದೇಶ-ಪಂಜಾಬ್

ಜ.11 ಹರ್ಯಾಣ-ದೆಹಲಿ

ಜ.12 ಜೈಪುರ-ಉತ್ತರಪ್ರದೇಶ

ಜ.13 ಮುಂಬೈ-ದೆಹಲಿ

ಜ.14 ಹರ್ಯಾಣ-ಜೈಪುರ

ಜ.15 ದೆಹಲಿ-ಉತ್ತರಪ್ರದೇಶ

ಜ.16 ಹರ್ಯಾಣ-ಪಂಜಾಬ್

ಜ.17 ಮೊದಲ ಸೆಮಿಫೈನಲ್

ಜ.18 ಎರಡನೇ ಸೆಮಿಫೈನಲ್

ಜ.19 ಫೈನಲ್ ಪಂದ್ಯ.

click me!