Pro Kabaddi League: ತೆಲುಗು ಟೈಟಾನ್ಸ್‌ಗೆ ಡಿಚ್ಚಿ ಹೊಡೆದ ಬೆಂಗಳೂರಿನ ಗೂಳಿಗಳು..!

By Naveen Kodase  |  First Published Oct 7, 2022, 10:00 PM IST

ಪ್ರೊ ಕಬಡ್ಡಿ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ಶುಭಾರಂಭ
ತೆಲುಗು ಟೈಟಾನ್ಸ್‌ ಎದುರು ರೋಚಕ ಗೆಲುವು ಸಾಧಿಸಿದ ಬುಲ್ಸ್‌ ಪಡೆ
ರೈಡಿಂಗ್‌ನಲ್ಲಿ ಮಿಂಚಿದ ನೀರಜ್ ನರ್ವಾಲ್


ಬೆಂಗಳೂರು(ಅ.07): ಕೊನೆಕ್ಷಣದವರೆಗೂ ಕಬಡ್ಡಿ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡವು 34-29 ಅಂಕಗಳ ಅಂತರದಲ್ಲಿ ತೆಲುಗು ಟೈಟಾನ್ಸ್‌ ತಂಡವನ್ನು ಮಣಿಸಿ 9ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಬುಲ್ಸ್‌ ಪರ ನೀರಜ್ ನರ್ವಾಲ್ ರೈಡಿಂಗ್‌ನಲ್ಲಿ 7 ಅಂಕಗಳನ್ನು ಗಳಿಸಿದರೆ, ವಿಕಾಸ್ ಖಂಡೋಲಾ ಹಾಗೂ ಭರತ್ ತಲಾ 5 ಅಂಕಗಳನ್ನು ಗಳಿಸುವ ಮೂಲಕ ಬುಲ್ಸ್‌ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು.

ಇಲ್ಲಿನ ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಸದರ್ನ್‌ ಡರ್ಬಿ ಎನಿಸಿಕೊಂಡಿರುವ ತೆಲುಗು ಟೈಟಾನ್ಸ್‌ ಹಾಗೂ ಬೆಂಗಳೂರು ಬುಲ್ಸ್‌ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಬೆಂಗಳೂರು ಬುಲ್ಸ್‌ ತಂಡದ ನಾಯಕ ಮಹೇಂದರ್ ಸಿಂಗ್ ಡಿಫೆನ್ಸ್‌ ಆಯ್ದುಕೊಂಡರು. ಟೈಟಾನ್ಸ್‌ ತಂಡಕ್ಕೆ ಮೊದಲ ನಿಮಿಷದಲ್ಲೇ ವಿನಯ್ ಟಚ್‌ ಪಾಯಿಂಟ್‌ ಮೂಲಕ ಅಂಕಗಳಿಸಿಕೊಟ್ಟರು. ಇದರ ಬೆನ್ನಲ್ಲೇ ಸಿದ್ದಾರ್ಥ್‌ ದೇಸಾಯಿ ಬೋನಸ್ ಪಾಯಿಂಟ್ ಗಳಿಸಿದರು. ಆರಂಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದ ಟೈಟಾನ್ಸ್‌ ತಂಡದ ಡು ಆರ್ ಡೈ ರೈಡ್‌ನಲ್ಲಿ ಮೋನು ಗೋಯೆತ್ ಅವರನ್ನು ಟ್ಯಾಕಲ್ ಮಾಡುವಲ್ಲಿ ಸೌರಭ್ ಯಶಸ್ವಿಯಾದರು. ಈ ಮೂಲಕ ಬುಲ್ಸ್‌ ಅಂಕಗಳ ಖಾತೆ ತೆರೆಯಿತು.  

Tap to resize

Latest Videos

ಇದಾದ ಬಳಿಕ ಮಹೇಂದರ್ ಸಿಂಗ್ ನೇತೃತ್ವದ ಬೆಂಗಳೂರಿನ ಗೂಳಿಗಳು ನಿರಂತರವಾಗಿ ಅಂಕಗಳಿಸುತ್ತಲೇ ಸಾಗಿದರು. ಪರಿಣಾಮ 10ನೇ ನಿಮಿಷದಲ್ಲಿ ಬೆಂಗಳೂರು ಬುಲ್ಸ್‌ ತಂಡವು ಎದುರಾಳಿ ತೆಲುಗು ಟೈಟಾನ್ಸ್‌ ತಂಡವು ಆಲೌಟ್‌ ಮಾಡುವ ಮೂಲಕ 10-06 ಅಂಕಗಳ ಮುನ್ನಡೆ ಸಾಧಿಸಿತು. ಆದರೆ ಇದಾದ ಬಳಿಕ ಪಂದ್ಯದಲ್ಲಿ ಬುಲ್ಸ್‌ಗೆ ತಿರುಗೇಟು ನೀಡುವತ್ತ ತೆಲುಗು ಟೈಟಾನ್ಸ್‌ ದಿಟ್ಟ ಹೆಜ್ಜೆಯಿಟ್ಟಿತು. ಮೊದಲಾರ್ಧ ಮಉಕ್ತಾಯಕ್ಕೆ ಕೆಲವೇ ಸೆಕೆಂಡ್‌ಗಳು ಬಾಕಿ ಇದ್ದಾಗ ಬುಲ್ಸ್‌ ತಂಡವನ್ನು ಆಲೌಟ್‌ ಮಾಡುವ ಮೂಲಕ ಸಮಬಲದ ಪೈಪೋಟಿ ನೀಡಿತು. ಈ ಮೂಲಕ ಮೊದಲಾರ್ಧ ಮುಕ್ತಾಯದ ವೇಳೆಗೆ ಉಭಯ ತಂಡಗಳು 17-17ರ ಸಮಬಲ ಸಾಧಿಸಿದವು.

ಇನ್ನು ಮೊದಲಾರ್ಧದಲ್ಲಿ ತೋರಿದ ಕೆಚ್ಚೆದೆಯ ಪ್ರದರ್ಶನವನ್ನು ದ್ವಿತಿಯಾರ್ಧದಲ್ಲೂ ತೋರಿದವು. ದ್ವಿತಿಯಾರ್ಧದ ಮೊದಲ 10 ನಿಮಿಷದವರೆಗೂ ಉಭಯ ತಂಡಗಳು 23-23 ಅಂಕಗಳನ್ನು ಗಳಿಸುವ ಮೂಲಕ ಸಮಬಲದ ಪ್ರದರ್ಶನ ತೋರಿದವು. ಆದರೆ ಇದಾದ 5 ನಿಮಿಷಗಳಲ್ಲಿ ಟಟಾನ್ಸ್‌ ಪಡೆಯನ್ನು ಆಲೌಟ್ ಮಾಡುವ ಮೂಲಕ ಬೆಂಗಳೂರು ಬುಲ್ಸ್‌ ತಂಡವು 30-25 ಅಂತರದಲ್ಲಿ ಸ್ಪಷ್ಟ ಮುನ್ನಡೆ ಗಳಿಸಿತು. ಇದಾದ ಬಳಿಕ ಬುಲ್ಸ್‌ ತಂಡವು ಕೊನೆಯ ನಿಮಿಷದವರೆಗೂ ಎದುರಾಳಿ ತಂಡವು ಮೆಲುಗೈ ಸಾಧಿಸಲು ಅವಕಾಶ ಮಾಡಿಕೊಡಲಿಲ್ಲ. ಅಂತಿಮವಾಗಿ ಬುಲ್ಸ್‌ ತಂಡವು 5 ಅಂಕಗಳ ರೋಚಕ ಗೆಲುವು ದಾಖಲಿಸಿತು. 
 

click me!