
ಬೆಂಗಳೂರು(ಸೆ.30): 9ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಹಿರಿಯ ಡಿಫೆಂಡರ್ ಮಹೇಂದರ್ ಸಿಂಗ್ ಮುನ್ನಡೆಸಲಿದ್ದಾರೆ. ಮತ್ತೊಬ್ಬ ಡಿಫೆಂಡರ್ ಸೌರಭ್ ನಂದಲ್‌ರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ ಎಂದು ತಂಡ ಗುರುವಾರ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ಘೋಷಿಸಿತು.
ಬೆಂಗಳೂರು ಬುಲ್ಸ್ ತಂಡವು 9ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿ ಆರಂಭಕ್ಕೂ ಮುನ್ನವೇ ತನ್ನ ಸ್ಟಾರ್ ಆಟಗಾರ ಪವನ್ ಕುಮಾರ್ ಶೆರಾವತ್ ಅವರನ್ನು ತಮ್ಮ ತಂಡದಿಂದ ಕೈಬಿಟ್ಟು ಅಚ್ಚರಿ ಮೂಡಿಸಿತ್ತು. ಇದಾದ ಬಳಿಕ ಆಟಗಾರರ ಹರಾಜಿನಲ್ಲಿ ವಿಕಾಸ್ ಖಂಡೋಲಾ ಅವರಿಗೆ 1.70 ಕೋಟಿ ರುಪಾಯಿ ನೀಡಿ ಬುಲ್ಸ್ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ವಿಕಾಸ್ ಖಂಡೋಲಾ, ಪಿಕೆಎಲ್ ಟೂರ್ನಿಯ ಎರಡನೇ ದುಬಾರಿ ಆಟಗಾರ ಎನಿಸಿಕೊಂಡಿದ್ದರು.
ಹರ್ಯಾಣ ಸ್ಟೀಲರ್ಸ್ ತಂಡದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದ ವಿಕಾಸ್ ಖಂಡೋಲಾ, ಬೆಂಗಳೂರು ಬುಲ್ಸ್ ತಂಡದ ಪರ ಯಾವ ರೀತಿ ಪ್ರದರ್ಶನ ತೋರಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ. ಪವನ್ ಶೆರಾವತ್ ಅವರ ಅನುಪಸ್ಥಿತಿಯನ್ನು ವಿಕಾಸ್ ಖಂಡೋಲಾ ಯಶಸ್ವಿಯಾಗಿ ತುಂಬಲಿದ್ದಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
PKL ಕನ್ನಡದ ಕೂಸು ರಾಕೇಶ್ ಗೌಡರನ್ನು ಸ್ವಾಗತಿಸಿದ ಬೆಂಗಳೂರು ಬುಲ್ಸ್..!
ಅಕ್ಟೋಬರ್ 7ರಿಂದ ಪ್ರೊ ಕಬಡ್ಡಿ ಲೀಗ್ ಟೂರ್ನಿಯು ಆರಂಭಗೊಳ್ಳಲಿದ್ದು ಮೊದಲ ಹಂತದ ಲೀಗ್ ಪಂದ್ಯಗಳು ಬೆಂಗಳೂರು, ಪುಣೆ ಹಾಗೂ ಹೈದರಾಬಾದ್‌ನಲ್ಲಿ ನಡೆಯಲಿವೆ. ಎರಡು ವರ್ಷಗಳ ಬಳಿಕ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣ ಪ್ರೊ ಕಬಡ್ಡಿ ಪಂದ್ಯಗಳಿಗೆ ಸಾಕ್ಷಿಯಾಗಲಿದೆ. ಅಕ್ಟೋಬರ್ 7ರಂದು ಬೆಂಗಳೂರು ತಂಡ ತನ್ನ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಸೆಣಸಲಿದೆ. ಲೀಗ್ ಹಂತದ ಮೊದಲ 41 ಪಂದ್ಯಗಳು ಬೆಂಗಳೂರಲ್ಲಿ ನಡೆಯಲಿವೆ.
9ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಗೆ ಬೆಂಗಳೂರು ಬುಲ್ಸ್ ತಂಡ ಹೀಗಿದೆ ನೋಡಿ
ರೈಡರ್: ವಿಕಾಸ್ ಖಂಡೋಲಾ, ಭರತ್, ನೀರಜ್ ನರ್ವಾಲ್, ಮೋರೆ ಜಿ.ಬಿ, ಹರ್ಮನ್‌ಜಿತ್ ಸಿಂಗ್, ನಾಗೇಶರ್ ಥಾರು, ಲಾಲ್ ಮೊಹಾರ್ ಯಾದವ್.
ಡಿಫೆಂಡರ್ಸ್: ಮಯೂರ್ ಕದಂ, ಮಹೇಂದರ್ ಸಿಂಗ್, ಆಮನ್, ಸೌರಭ್ ನಂದಲ್, ರಜನೀಶ್, ಯಶ್ ಹೂಡಾ, ವಿನೋದ್ ಲಚ್‌ಮಯ್ಯ ನಾಯ್ಕ್, ರೋಹಿತ್ ಕುಮಾರ್.
ಆಲ್ರೌಂಡರ್: ರಾಹುಲ್ ಕಾರ್ತಿಕ್, ಸಚಿನ್ ನರ್ವಾಲ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.