ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ತೆಲುಗು ಟೈಟಾನ್ಸ್ ನಿರಾಸೆಯಲ್ಲಿ ಮುಳುಗಿದೆ. ತವರಿನ ಅಭಿಮಾನಿಗಳಿಗೆ ಕನಿಷ್ಠ ಒಂದು ಗೆಲುವು ನೀಡಲು ತೆಲುಗು ತಂಡಕ್ಕೆ ಸಾಧ್ಯವಾಗಿಲ್ಲ. ಪಾಟ್ನಾ ಪೈರೇಟ್ಸ್ ವಿರುದ್ಧ ಮುಗ್ಗರಿಸೋ ಮೂಲಕ ತೆಲುಗು ಸೋಲಿನ ಸಂಖ್ಯೆ 4ಕ್ಕೇರಿದೆ.
ಹೈದರಾಬಾದ್(ಜು.26): ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ತೆಲುಗು ಟೈಟಾನ್ಸ್ ತವರಿನಲ್ಲಿ ಸತತ ಸೋಲು ಕಾಣುತ್ತಿದೆ. ಒಂದಲ್ಲ, ಎರಡಲ್ಲ, ಸತತ ನಾಲ್ಕನೇ ಸೋಲಿಗೆ ತೆಲುಗು ಟೈಟಾನ್ಸ್ ಗುರಿಯಾಗಿದೆ. ಪಾಟ್ನಾ ಪೈರೇಟ್ಸ್ ವಿರುದ್ಧ ಲೀಗ್ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಮುಗ್ಗರಿಸಿದೆ. ಬೆಂಗಳೂರು ಬುಲ್ಸ್ ವಿರುದ್ಧ ಸೋಲು ಕಂಡಿದ್ದ ಪಾಟ್ನಾ ಪೈರೇಟ್ಸ್, ಇದೀಗ ತೆಲುಗು ಟೈಟಾನ್ಸ್ ವಿರುದ್ದ 34-22 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿದೆ.
ಇದನ್ನೂ ಓದಿ: ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ !
ಪ್ರದೀಪ್ ನರ್ವಾಲ್ ರೈಡ್‌ನಿಂದ ಪಾಟ್ನಾ ಪೈರೇಟ್ಸ್ ಅಂಕ ಬೇಟೆ ಆರಂಭಿಸಿತು. ಇತ್ತ ಮೊದಲ ಅಂಕ ಪಡೆಯಲು ತೆಲುಗು 2 ನಿಮಿಷ ಹೋರಾಡಬೇಕಾಯಿತು. 8ನೇ ನಿಮಿಷಕ್ಕೆ ತೆಲುಗು ಟೈಟಾನ್ಸ್ ಆಲೌಟ್ ಆಗೋ ಮೂಲಕ ಹಿನ್ನಡೆ ಅನುಭವಿಸಿತು. 16ನೇ ನಿಮಿಷದಲ್ಲಿ 2ನೇ ಬಾರಿಗೆ ತೆಲುಗು ಆಲೌಟ್ ಆಯಿತು. ಈ ಮೂಲಕ ಪಾಟ್ನಾ 21-7 ಅಂಕಗಳ ಮುನ್ನಡೆ ಪಡೆದುಕೊಂಡಿತು. ಮೊದಲಾರ್ಧದ ಅಂತ್ಯದಲ್ಲಿ ಪಾಟ್ನಾ ಪೈರೇಟ್ಸ್ 23-9 ಅಂಕಗಳ ಮುನ್ನಡೆ ಕಾಯ್ದುಕೊಂಡಿತು.
ಇದನ್ನೂ ಓದಿ: ಪ್ರೊ ಕಬಡ್ಡಿ 7ನೇ ಆವೃತ್ತಿ ವಿಶೇಷತೆ!
ದ್ವಿತಿಯಾರ್ಧದಲ್ಲಿ ತೆಲುಗು ಚುರುಕಿನ ಆಟಕ್ಕೆ ಮುಂದಾದರೂ ಅಂತರ ಕಡಿಮೆಯಾಗಲಿಲ್ಲ. ರೈಡ್ ಹಾಗೂ ಸೂಪರ್ ಟ್ಯಾಕಲ್ ಮೂಲಕ ಪಾಟ್ನಾ ಅಂಕ ಕಲೆ ಹಾಕಿತು. ಅಂತಿಮ ಹಂತದಲ್ಲಿ ತೆಲುಗು ಹೋರಾಟ ನೀಡಿದರೂ ಗೆಲುವು ಸಿಗಲಿಲ್ಲ. ಪಾಟ್ನಾ ಪೈರೈಟ್ಸ್ 34-22 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು.
ವೃತ್ತಿಪರ ಕಬಡ್ಡಿ ಪಟುಗಳ ಲೀಗ್ ಟೂರ್ನಿಯಾಗಿರುವ ಪ್ರೊ ಕಬಡ್ಡಿ 6 ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿ ಇದೀಗ 7ನೇ ಆವೃತ್ತಿಗೆ ಕಾಲಿಟ್ಟಿದೆ. ಕ್ರಿಕೆಟ್ ಹಾಗೂ ಫುಟ್ಬಾಲ್ ಕ್ರೀಡೆಗಳು ಲೀಗ್ ಟೂರ್ನಿಗಳಾಗಿ ಪ್ರಖ್ಯಾತಿ ಪಡೆದಿದೆ. ಆದರೆ 2014ರ ವರೆಗೆ ಕಬಡ್ಡಿ ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಸೇರಿದಂತೆ ಕ್ರೀಡಾಕೂಟಗಳಿಗೆ ಸೀಮಿತವಾಗಿತ್ತು. ಆದರೆ 2014ರಲ್ಲಿ ಪ್ರೊ ಕಬಡ್ಡಿ ಲೀಗ್ ಟೂರ್ನಿ ಆರಂಭಗೊಂಡಿತು. ಇದೀಗ ಭಾರತದಲ್ಲಿ ಐಪಿಎಲ್ ರೀತಿಯಲ್ಲೇ ಪ್ರೊ ಕಬಡ್ಡಿ ಕೂಡ ಜನಪ್ರಿಯವಾಗಿದೆ.
8 ತಂಡಗಳೊಂದಿಗೆ ಆರಂಭಗೊಂಡ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಸದ್ಯ 12 ತಂಡಗಳು ಕಣದಲ್ಲಿವೆ. 6ನೇ ಆವೃತ್ತಿಯಲ್ಲಿ(2018) ಬೆಂಗಳೂರು ಬುಲ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತು. ಮೊದಲ ಬಾರಿಗೆ ಬೆಂಗಳೂರು ಈ ಸಾಧನೆ ಮಾಡಿತು. ಪ್ರೊ ಕಬಡ್ಡಿ ಟೂರ್ನಿಯಲ್ಲಿ ಪಾಟ್ನಾ ಪೈರೇಟ್ಸ್ 3 ಬಾರಿ ಪ್ರಶಸ್ತಿ ಗೆದ್ದುಕೊಂಡು, ಗರಿಷ್ಠ ಟ್ರೋಫಿ ಗೆದ್ದ ಸಾಧನೆ ಮಾಡಿದೆ.