ಕನ್ನಡಿಗರಿಗೆ ನಿರಾಸೆ: ಪ್ರೋ ಕಬಡ್ಡಿ ಬೆಂಗಳೂರು ಪಂದ್ಯ ಪುಣೆಗೆ ಶಿಫ್ಟ್?

By Web DeskFirst Published Oct 7, 2018, 11:20 AM IST
Highlights

ಕಳೆದ ಪ್ರೋ ಕಬಡ್ಡಿ ಆವೃತ್ತಿ ನೋಡಲು ಕಾದು ಕುಳಿತಿದ್ದ ಕನ್ನಡಿಗರಿಗೆ ನಿರಾಸೆಯಾಗಿತ್ತು ಕಾರಣ, ಕಳೆದ ಬಾರಿಯ ಬೆಂಗಳೂರು ಪಂದ್ಯಗಳು ನಾಗ್ಪುರಕ್ಕೆ ಸ್ಥಳಾಂತರವಾಗಿತ್ತು. ಇದೀಗ ಈ ಬಾರಿಯೂ ಕನ್ನಡಿಗರಿಗೆ ನಿರಾಸೆಯಾಗೋ ಸಾಧ್ಯತೆ ಇದೆ. ಇದಕ್ಕೆ ಕಾರಣವೇನು? ಇಲ್ಲಿದೆ.
 

ಬೆಂಗಳೂರು(ಅ.07):  ದೇಸೀ ಕ್ರೀಡೆ ಕಬಡ್ಡಿ ಪಂದ್ಯಾವಳಿಯಾದ ‘ಪ್ರೊ ಕಬಡ್ಡಿ’ 6ನೇ ಆವೃತ್ತಿಗೆ ವೇದಿಕೆಯೇನೋ ಸಜ್ಜಾಗಿದೆ. ಭಾನುವಾರದಿಂದ ಪಂದ್ಯಾವಳಿ ಆರಂಭವಾಗಲಿದ್ದರೂ, ಬೆಂಗಳೂರಿನಲ್ಲಿ ಪ್ರೊ ಕಬಡ್ಡಿ ಚರಣ ನಡೆಯುವುದು ಮಾತ್ರ ಇನ್ನೂ ಅಂತಿಮಗೊಂಡಿಲ್ಲ.

ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಸಲು ಕರ್ನಾಟಕ ಕ್ರೀಡಾ ಇಲಾಖೆಗೆ ಕೆಲ ಕಾಲ ಹಿಂದೆಯೇ ಆಯೋಜಕರು ಮನವಿ ಸಲ್ಲಿಸಿದ್ದರೂ,
ಅಲ್ಲಿಂದ ಇನ್ನೂ ಹಸಿರು ನಿಶಾನೆ ದೊರಕಿಲ್ಲ. ಅಷ್ಟೇ ಅಲ್ಲದೆ, ಕೆಲವು ಪಾಲಿಸಲು ಸಾಧ್ಯವಾಗದ ಕಠಿಣ ಷರತ್ತು ವಿಧಿಸಲಾಗಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ
ಈ ಬಾರಿ ಬೆಂಗಳೂರಿನಲ್ಲಿ ಪ್ರೊ ಕಬಡ್ಡಿ ಚರಣ ನಡೆಯುವುದು ಬಹುತೇಕ ಅನುಮಾನ.

ಹಾಗೊಂದು ವೇಳೆ, ಬೆಂಗಳೂರಿನಲ್ಲಿ ನಡೆಸಲು ಅವಕಾಶವೇ ಸಿಗದಿದ್ದಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ನಡೆಸುವ  ಬಗ್ಗೆ ಆಯೋಜಕರು ಗಂಭೀರ ಚಿಂತನೆ
ನಡೆಸಿದ್ದಾರೆ. 2ನೇ ಆಯ್ಕೆಯಾಗಿ ತಮಿಳು ನಾಡು ರಾಜಧಾನಿ ಚೆನ್ನೈಯನ್ನೂ ಪರಿಗಣಿಸಲಾಗಿದೆ ಎಂದು ಪ್ರೊ ಕಬಡ್ಡಿಯ ಬಲ್ಲಮೂಲಗಳು  ಸುವರ್ಣ್‌ನ್ಯೂಸ್.ಕಾಂ’ಗೆ ಖಚಿತಪಡಿಸಿದ್ದಾರೆ.  ಕಳೆದ ಬಾರಿಯೂ ಕಂಠೀರವದಲ್ಲಿ ಅವಕಾಶ ಸಿಗದೆ ನಾಗ್ಪುರದಲ್ಲಿ ಬೆಂಗಳೂರು ಚರಣದ ಪಂದ್ಯಗಳನ್ನು ಆಡಿಸಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು. 

ಪುಣೆಗೆ ಶಿಫ್ಟ್?: ವೇಳಾಪಟ್ಟಿ ಪ್ರಕಾರ ನ.23 ರಿಂದ ನ.29ರವರೆಗೆ ಬೆಂಗಳೂರಿನಲ್ಲಿ ಪಂದ್ಯಗಳು ನಡೆಯಬೇಕಿತ್ತು. 7 ದಿನಗಳ ಕಾಲ 12 ಪಂದ್ಯಗಳನ್ನು ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕಂಠೀರವ ಒಳಾಂಗಣ ಕ್ರೀಡಾಂಗಣವನ್ನು ಆ ಸಮಯದಲ್ಲಿ ನೀಡಲು ಕ್ರೀಡಾ ಇಲಾಖೆ ಕ್ರಮ ಕೈಗೊ ಳ್ಳದ ಪರಿಣಾಮ ಬೆಂಗಳೂರು ಬುಲ್ಸ್ ಫ್ರಾಂಚೈಸಿ, ತನ್ನ ಚರಣದ ಪಂದ್ಯಗಳನ್ನು ಪುಣೆಗೆ ವರ್ಗಾಯಿಸುವ ಗಂಭೀರ ಚಿಂತನೆ ನಡೆಸಿದೆ.

ಆತಿಥ್ಯಕ್ಕಾಗಿ ತಿಂಗಳ ಹಿಂದೆಯೇಓಡಾಟ: ಮೊದಲ 4 ಚರಣಗಳು ಬೆಂಗಳೂರಿನಲ್ಲಿ ನಡೆದ ಬಳಿಕ ಕಳೆದ ಬಾರಿ ನಡೆದ 5ನೇ ಆವೃತ್ತಿ ವೇಳೆಗೆ ಬೆಂಗಳೂರಿನಲ್ಲಿ ಆತಿಥ್ಯ ಸಿಕ್ಕಿರಲಿಲ್ಲ. ಈ ಬಾರಿಯಾದರೂ ಕಬಡ್ಡಿಯನ್ನು ಬೆಂಗಳೂರಿನಲ್ಲಿ ನಡೆಸಬೇಕು ಎಂದು ಆಯೋಜಕರು ಸಂಬಂಧಪಟ್ಟ ಅಧಿಕಾರಿಗಳ ಬೆನ್ನು ಬಿದ್ದಿದ್ದರು. ರಾಜ್ಯ ಕ್ರೀಡಾ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ|ಜಿ.ಪರ ಮೇಶ್ವರ್ ಅವರಲ್ಲಿಯೂ ಮನವಿ ಮಾಡಲಾಗಿತ್ತು. ಪರಮೇಶ್ವರ್ ಕೂಡ ಸಮ್ಮತಿಸಿದ್ದರು. ಆದರೆ ಕ್ರೀಡಾ ಕ್ಷೇತ್ರದ ಕೆಲ ಪ್ರಭಾವಿಗಳು ಕಬಡ್ಡಿ ಆಯೋಜನೆಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಆರೋಪವಿದೆ.

ಪ್ರೊ ಕಬಡ್ಡಿ ಪಂದ್ಯಾವಳಿ ವೇಳೆಯೇ ಒಳಾಂಗಣ ಕ್ರೀಡಾಂಗಣದಲ್ಲಿ ಮಹಿಳಾ ಏಷ್ಯನ್ ಬಾಸ್ಕೆಟ್‌ಬಾಲ್ ಟೂರ್ನಿಯನ್ನು ನಡೆಸಲಾಗುತ್ತಿದೆ. ಈ ಟೂರ್ನಿ ಅ. 28
ರಿಂದ ನ. 3 ವರೆಗೆ ನಡೆಯಲಿದೆ. ಇದಾದ 23 ದಿನಗಳ ಬಳಿಕ ಬೆಂಗಳೂರಿನ ಚರಣ ನಿಗದಿಯಾಗಿದೆ. ಆದರೂ ಕ್ರೀಡಾಂಗಣ ದಲ್ಲಿ ಕಬಡ್ಡಿ ಆಯೋಜನೆಗೆ ಕ್ರೀಡಾ
ಇಲಾಖೆ ಅನುಮತಿ ನೀಡಿಲ್ಲ.

ಆಯೋಜನೆಗೆ ಕಠಿಣ ಷರತ್ತು: ಕಂಠೀರವದಲ್ಲಿ ಕಬಡ್ಡಿ ಆಯೋಜಿಸಲು ಕ್ರೀಡಾ ಇಲಾಖೆ ಕೆಲ ಕಠಿಣ ಷರತ್ತು ವಿಧಿಸಿದೆ ಎನ್ನಲಾಗಿದೆ. ಒಳಾಂಗಣ ಕ್ರೀಡಾಂಗಣದಲ್ಲಿ ಮರದ ಹಾಸು ಹಾಕಲಾಗಿದೆ. ಇವು ಹಾಳಾಗದಂತೆ ಎಚ್ಚರವಹಿಸಬೇಕು. ಹಾನಿಯಾದಲ್ಲಿ ನವೀಕರಣಗೊಳಿಸಿ ಅಥವಾ ಅದಕ್ಕೆ ತಗಲುವ ವೆಚ್ಚವನ್ನು ಭರಿಸಬೇಕು ಎಂದು ಕ್ರೀಡಾ ಇಲಾಖೆ ಷರತ್ತು ಹಾಕಿದೆ ಎಂದು ತಿಳಿದು ಬಂದಿದೆ. ಇದಲ್ಲದೆ, ಕ್ಯಾಮೆರಾ ಅಳವಡಿಸುವಂತಿಲ್ಲ. ವಿಐಪಿ ಗ್ಯಾಲರಿ ನಿರ್ಮಿಸುವಂತಿಲ್ಲ. ದೊಡ್ಡ ಲೈಟ್ ಬಳಸುವಂತಿಲ್ಲ ಎಂದೂ ಪಾಲಿಸಲು ಸಾಧ್ಯವೇ ಇಲ್ಲದ ಷರತ್ತು ಮುಂದಿಟ್ಟಿದೆ ಎಂದು ಮೂಲಗಳು ತಿಳಿಸಿದೆ. 

ಭರವಸೆಗೆ ಬಗ್ಗದ ಕ್ರೀಡಾ ಇಲಾಖೆ:  ಒಳಾಂಗಣದ ಮರದ ಹಾಸಿನ ಮೇಲೆ ದಪ್ಪನಾದ ಹೊದಿಕೆಯನ್ನು ಹಾಸುತ್ತೇವೆ. ಅದರ ಮೇಲೆ ಮತ್ತೊಂದು ಹೊದಿಕೆ ಹಾಕಿ ಮ್ಯಾಟ್ ಜೋಡಿಸಲಾ ಗುವುದು. ಮರದ ಹಾಸಿಗೆ ಹಾನಿ ಆಗದಂತೆ ನಡೆಸುವ ಯೋಚನೆ ಇದೆ. ಆದಾಗ್ಯೂ ತೊಂದರೆ ಆದಲ್ಲಿ ವೆಚ್ಚ ಭರಿಸಲಾಗುವುದು ಎಂದು ಬೆಂಗಳೂರು ಬುಲ್ಸ್ ತಂಡ, ಪ್ರೊಕಬಡ್ಡಿ ಆಯೋಜಕರು ಭರವಸೆನೀಡಿದ್ದಾರಂತೆ. ಆದರೆ ಇಲಾಖೆ ಇದಕ್ಕೆ ಪ್ರತಿಕ್ರಿ ಯಿಸಿಲ್ಲ. ಈ ಹಿನ್ನೆಲೆಯಲ್ಲಿ ಬೆಂಗ್ಳೂರಿನಲ್ಲಿ ಪಂದ್ಯ ಗಳ ಆಯೋಜನೆ ಸಾಧ್ಯವಿಲ್ಲ. ಬದ ಲಾಗಿ ಪುಣೆ ಅಥವಾ ಚೆನ್ನೈಲ್ಲಿ ಆಯೋಜಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಜೈಪುರು ಪಂದ್ಯ ಪಂಚಕುಲಕ್ಕೆ ಶಿಫ್ಟ್:  ಈ ವರ್ಷ ಕೇವಲ ಬೆಂಗಳೂರು ಚರಣ ಮಾತ್ರವಲ್ಲ, ಜೈಪುರದಿಂದಲೂ ಪ್ರೊ ಕಬಡ್ಡಿ ಎತ್ತಂಗಡಿಯಾಗಿದೆ. ಜೈಪುರ
ಚರಣವನ್ನು ತಂಡದ ಮಾಲೀಕರು ಹರ್ಯಾಣದ ಪಂಚಕುಲಕ್ಕೆ ಸ್ಥಳಾಂತರ ಗೊಳಿಸಿದ್ದಾರೆ. ಆಯೋಜಕರು ತಾಂತ್ರಿಕ ಸಮಸ್ಯೆ ಕಾರಣ ನೀಡುತ್ತಿದ್ದರೂ,
ಮೂಲಗಳ ಪ್ರಕಾರ ಪ್ರೊ ಕಬಡ್ಡಿ ಇಲ್ಲಿಂದ ಎತ್ತಂಗಡಿಯಾಗಲು ಭಾರತೀಯ ಕಬಡ್ಡಿ ಫೆಡರೇಷನ್‌ನ ಮಾಜಿ ಅಧ್ಯಕ್ಷ, ರಾಜಸ್ಥಾನದ ರಾಜಕಾರಣಿ ಜನಾರ್ಧನ್ ಸಿಂಗ್ ಗೇಲೋಟ್ ಕಾರಣ ಎನ್ನಲಾಗಿದೆ. ಕಬಡ್ಡಿ ಸಂಸ್ಥೆಯಿಂದ ಹೊರಬಿದ್ದ ಬಳಿಕ ಗೇಲೋಟ್ ಇಲ್ಲಿ ಈ ಆವೃತ್ತಿ ನಡೆಸಲು ಅಡ್ಡಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಪಂಚಕುಲ ಏಕೆ?: ತಂಡದ ನಾಯಕ ಅನೂಪ್ ಕುಮಾರ್, ಹರ್ಯಾಣ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಯಾಗಿ ದ್ದಾರೆ. ಇಲ್ಲಿ ಉತ್ತಮ ಸಂಪರ್ಕ ಹೊಂದಿದ್ದು, ಆಯೋಜನೆಗೆ ಸಮಸ್ಯೆಯಾಗ ದಂತೆ ನೋಡಿಕೊಳ್ಳಬಲ್ಲರು ಎನ್ನಲಾಗಿದೆ. ಜತೆಗೆ ಅನೂಪ್ ಒಬ್ಬ ದಿಗ್ಗಜ ಆಟಗಾರ. ಹರ್ಯಾ ಣದಲ್ಲಿ ಅವರಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಹೀಗಾಗಿ ಇಲ್ಲಿ ನಡೆಸಿದರೆ ತಂಡಕ್ಕೆ ಉತ್ತಮ ಬೆಂಬಲ ದೊರೆಯಲಿದೆ ಎನ್ನುವುದು ತಂಡದ ಮಾಲೀಕರ ಲೆಕ್ಕಾಚಾರ.

ವರದಿ: ಧನಂಜಯ ಎಸ್.ಹಕಾರಿ/ ಸ್ಪಂದನ್ ಕಣಿಯಾರ್
ಕನ್ನಡಪ್ರಭ ವಾರ್ತೆ ಬೆಂಗಳೂರು

click me!