ಪ್ರೊ ಕಬಡ್ಡಿ: ಮದಗಜಗಳ ಕಾದಾಟಕ್ಕೆ ವೇದಿಕೆ ಸಜ್ಜು; ಇಂದಿನಿಂದ ಸೂಪರ್ ಪ್ಲೇ-ಆಫ್

By Suvarna Web DeskFirst Published Oct 23, 2017, 3:49 PM IST
Highlights

ಸೂಪರ್ ಪ್ಲೇ-ಆಫ್ ಹಂತದಲ್ಲಿ ಒಟ್ಟು 6 ಪಂದ್ಯಗಳು ನಡೆಯಲಿದ್ದು, ಇಂದು ಮುಂಬೈನಲ್ಲಿ ಮೊದಲೆರಡು ಎಲಿಮಿನೇಟರ್ ಪಂದ್ಯಗಳು ನಡೆಯಲಿವೆ. ಮೊದಲ ಎಲಿಮಿನೇಟರ್'ನಲ್ಲಿ ಪುಣೇರಿ ಪಲ್ಟಾನ್ ಹಾಗೂ ಯುಪಿ ಯೋಧಾ ಸೆಣಸಾಡಿದರೆ, ಎರಡನೇ ಎಲಿಮಿನೇಟರ್‌ನಲ್ಲಿ ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ಹಾಗೂ ಹೊಸ ತಂಡ ಹರ್ಯಾಣ ಸ್ಟೀಲರ್ಸ್‌ ಮುಖಾಮುಖಿಯಾಗಲಿವೆ.

ಬೆಂಗಳೂರು(ಅ.23): ಪ್ರೊ ಕಬಡ್ಡಿ ಲೀಗ್ 5ನೇ ಆವೃತ್ತಿ ಈ ವರೆಗೂ 132 ಪಂದ್ಯಗಳನ್ನು ಕಂಡಿದೆ. ಆದರೆ ಅಸಲಿ ರೋಚಕತೆ ಈಗ ಆರಂಭಗೊಳ್ಳಲಿದೆ. ಹೌದು, ಇಂದಿನಿಂದ ಸೂಪರ್ ಪ್ಲೇ-ಆಫ್ ಹಂತ ಆರಂಭಗೊಳ್ಳಲಿದ್ದು, ಫೈನಲ್‌'ಗೇರಿ ಪ್ರಶಸ್ತಿ ಎತ್ತಿಹಿಡಿಯಲು 6 ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಲಿವೆ.

ಸೂಪರ್ ಪ್ಲೇ-ಆಫ್ ಹಂತದಲ್ಲಿ ಒಟ್ಟು 6 ಪಂದ್ಯಗಳು ನಡೆಯಲಿದ್ದು, ಇಂದು ಮುಂಬೈನಲ್ಲಿ ಮೊದಲೆರಡು ಎಲಿಮಿನೇಟರ್ ಪಂದ್ಯಗಳು ನಡೆಯಲಿವೆ. ಮೊದಲ ಎಲಿಮಿನೇಟರ್'ನಲ್ಲಿ ಪುಣೇರಿ ಪಲ್ಟಾನ್ ಹಾಗೂ ಯುಪಿ ಯೋಧಾ ಸೆಣಸಾಡಿದರೆ, ಎರಡನೇ ಎಲಿಮಿನೇಟರ್‌ನಲ್ಲಿ ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ಹಾಗೂ ಹೊಸ ತಂಡ ಹರ್ಯಾಣ ಸ್ಟೀಲರ್ಸ್‌ ಮುಖಾಮುಖಿಯಾಗಲಿವೆ. ಈ ಪಂದ್ಯಗಳಲ್ಲಿ ಗೆಲ್ಲುವ ತಂಡ ಪ್ರಶಸ್ತಿ ಓಟದಲ್ಲಿ ಉಳಿದುಕೊಳ್ಳಲಿವೆ. ಸೋತವರು ಟೂರ್ನಿಯಿಂದ ಹೊರಬೀಳಲಿದ್ದಾರೆ.

ಪುಣೆ ವರ್ಸಸ್ ಯೋಧಾ: ಪುಣೆಯ ಬಲಿಷ್ಠ ರಕ್ಷಣಾ ಪಡೆ ಹಾಗೂ ಯೋಧಾದ ಅತ್ಯುತ್ತಮ ರೈಡರ್‌'ಗಳ ನಡುವೆ ಭಾರೀ ಪೈಪೋಟಿ ನಿರೀಕ್ಷೆ ಮಾಡಲಾಗಿದೆ. ಈ ಆವೃತ್ತಿಯಲ್ಲಿ ಪುಣೆ 243 ಟ್ಯಾಕಲ್ ಅಂಕಗಳನ್ನು ಹೊಂದಿದ್ದು, ಉಳಿದೆಲ್ಲಾ ತಂಡಗಳಿಗಿಂತ ಮುಂದಿದೆ. ಮತ್ತೊಂದು ಕುತೂಹಲಕಾರಿ ಅಂಶವೆಂದರೆ 114 ಅಂಕಗಳೊಂದಿಗೆ ಪುಣೇರಿ, ಡು ಆರ್ ಡೈ ರೈಡ್‌'ಗಳಲ್ಲಿ ಅತಿಹೆಚ್ಚು ಅಂಕ ಕಲೆಹಾಕಿದ ತಂಡ ಎನಿಸಿದೆ. ಆಲ್ರೌಂಡರ್'ಗಳಾದ ಸಂದೀಪ್ ನರ್ವಾಲ್ ಹಾಗೂ ನಾಯಕ ದೀಪಕ್ ಹೂಡ ಪ್ರಮುಖ ಪಾತ್ರ ವಹಿಸಲಿದ್ದಾರೆ.

ಇದೇ ವೇಳೆ ಯೋಧಾ ತನ್ನ ತಾರಾ ರೈಡರ್'ಗಳಾದ ನಿತಿನ್ ತೋಮರ್ ಹಾಗೂ ರಿಶಾಂಕ್ ದೇವಾಡಿಗ ಮೇಲೆ ಹೆಚ್ಚಾಗಿ ಅವಲಂಬಿತಗೊಂಡಿದೆ. ಜತೆಗೆ ಅನುಭವಿ ಡಿಫೆಂಡರ್ ಜೀವ ಕುಮಾರ್ ಸಹ ಎಚ್ಚರಿಯ ಆಟ ಪ್ರದರ್ಶಿಸಬೇಕಿದೆ.

ಪಾಟ್ನಾ ವರ್ಸಸ್ ಹರ್ಯಾಣ: ಈ ಪಂದ್ಯದಲ್ಲಿ ಪಾಟ್ನಾದ ರೈಡ್ ಮಷಿನ್‌'ಗಳಾದ ಪ್ರದೀಪ್ ನರ್ವಾಲ್ ಹಾಗೂ ಮೋನು ಗೋಯತ್, ಪ್ರೊ ಕಬಡ್ಡಿಯ ಅತಿಶ್ರೇಷ್ಠ ಡಿಫೆಂಡರ್ ಜೋಡಿಯಾದ ಸುರೇಂದರ್ ನಾಡಾ ಹಾಗೂ ಮೋಹಿತ್ ಚಿಲ್ಲಾರ್ ಎದುರು ಅಂಕಗಳಿಗಾಗಿ ‘ಯುದ್ಧ’ ನಡೆಸಲಿದ್ದಾರೆ.

ಈ ಆವೃತ್ತಿಯಲ್ಲಿ ಅತಿಹೆಚ್ಚು ಅಂಕ (237) ಗಳಿಸಿರುವ ತಂಡ ಪಾಟ್ನಾ. ಅದೇ ರೀತಿ ಅತಿಹೆಚ್ಚು ಅಂಕ (777) ಬಿಟ್ಟುಕೊಟ್ಟಿರುವ ತಂಡವೂ ಪಾಟ್ನಾ. ಹೀಗಾಗಿ, ತಂಡದ ಅಸ್ಥಿರತೆಯನ್ನು ಹರ್ಯಾಣ ತನ್ನ ಲಾಭಕ್ಕೆ ಬಳಸಿಕೊಳ್ಳಬೇಕಿದೆ. ಪ್ರದೀಪ್ ಹಾಗೂ ಮೋನುರನ್ನು ಎಷ್ಟು ಸಾಧ್ಯವೋ ಅಷ್ಟು ಹೊತ್ತು ಅಂಕಣದಿಂದ ದೂರವಿರಿಸುವಲ್ಲಿ ಯಶಸ್ವಿಯಾದರೆ ಹರ್ಯಾಣ ಮುಕ್ಕಾಲು ಪಂದ್ಯ ಗೆದ್ದಂತೆ.

click me!