
ದೆಹಲಿ(ಅ. 11): ಪುರುಷರು ಆಡುವ ಎಲ್ಲಾ ಕ್ರೀಡೆಗಳನ್ನು ಮಹಿಳೆ ಆಡಿ ತೋರಿಸಿದ್ದಾಳೆ. ಚೆಸ್'ನಂತಹ ಕ್ರೀಡೆಗಳಲ್ಲಿ ಪುರುಷರಿಗೆ ಸರಿಸಮಾನರಾಗಿ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ, ದೈಹಿಕ ಶಕ್ತಿ ಬೇಡುವ ಕ್ರೀಡೆಗಳಲ್ಲಿ ಪುರುಷರೊಂದಿಗೆ ಮಹಿಳೆ ಸ್ಪರ್ಧಿಸುವುದು ಅಪರೂಪ. ಡೆಹ್ರಾಡೂನ್'ನ ಹುಡುಗಿ ನೇಹಾ ತೋಮರ್ ಕುಸ್ತಿ ಸ್ಪರ್ಧೆಯಲ್ಲಿ ಪುರುಷನೊಂದಿಗೆ ಸೆಣಸಿ ಸೈ ಎನಿಸಿದ್ದಾಳೆ. ಸೆಣಸಾಡಿದಷ್ಟೇ ಅಲ್ಲ, ಎದುರಾಳಿಯನ್ನು ನೆಲಕ್ಕುರುಳಿಸಿ ಅಚ್ಚರಿ ಹುಟ್ಟಿಸಿದ್ದಾಳೆ. ಬರೇಲಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಲಕ್ನೋದ ಚಾಂಪಿಯನ್ ವ್ರೆಸ್ಲರ್ ನವಾಬ್'ನನ್ನು ನೇಹಾ 18 ನಿಮಿಷಗಳಲ್ಲಿ ಕೆಳಕ್ಕೆ ಕೆಡವಿ ಗೆಲುವು ಪಡೆದಿದ್ದಾಳೆ.
ಬರೇಲಿಯಲ್ಲಿ ಪುರುಷರ ನಡುವೆ ಕುಸ್ತಿಸ್ಪರ್ಧೆ ನಡೆಯುತ್ತಿದ್ದ ವೇಳೆ ಕಾಲಿಟ್ಟ ನೇಹಾ ತೋಮರ್, ತನ್ನೊಂದಿಗೆ ಯಾರು ಬೇಕಾದರೂ ಕುಸ್ತಿ ಆಡಬಹುದು ಎಂದು ಸವಾಲು ಹಾಕಿದ್ದಾಳೆ. ಜಟ್ಟಿಗಳ ಅಡ್ಡಾಗೆ ಬಂದು ಹುಡುಗಿಯೊಬ್ಬಳು ಇಂಥ ಚಾಲೆಂಜ್ ಹಾಕಿದ್ದು ಎಲ್ಲರಿಗೂ ಅಚ್ಚರಿ ಹುಟ್ಟಿಸಿತ್ತು. ಅಲ್ಲಿದ್ದ 4 ಸಾವಿರ ಪ್ರೇಕ್ಷಕರು ಕೆಲ ಕ್ಷಣ ಸ್ತಂಬೀಭೂತರಾದರು. ಜಟ್ಟಿಗಳು ಮೌನಕ್ಕೆ ಶರಣಾದರು. ಕೆಲ ಹೊತ್ತಿನ ಮೌನದ ಬಳಿಕ ನೇಹಾಳ ಚಾಲೆಂಜ್ ಸ್ವೀಕರಿಸಿದ್ದು ನವಾಬ್ ಎಂಬ ಕುಸ್ತಿಪಟು. ಈತನೂ ಚಾಂಪಿಯನ್ ವ್ರೆಸ್ಲರ್. ಆದರೆ, ನೇಹಾ ತೋಮರ್ ತನ್ನ ಅಪ್ರತಿಮ ಬಲ ಹಾಗೂ ಕ್ಷಮತೆಯನ್ನು ಮತ್ತೊಮ್ಮೆ ನಿರೂಪಿಸಿದರು.
ನೇಹಾ ತೋಮರ್ ಇಂಥ ಸಾಹಸ ಮಾಡಿದ್ದು ಇದೇ ಮೊದಲಲ್ಲ. ಈಕೆ ಎರಡು ವರ್ಷಗಳ ಹಿಂದೆ ಬೇರೊಬ್ಬ ಪುರಷ ಕ್ರೀಡಾಪಟುವನ್ನು ಸೋಲಿಸಿದ್ದಳು. 2014ರಲ್ಲಿ ರುದ್ರಾಪುರ್'ನಲ್ಲಿ ಸೋನು ಪೆಹಲ್ವಾನ್ ವಿರುದ್ಧ ನೇಹಾ ತೋಮರ್ ಗೆಲುವು ಪಡೆದಿದ್ದಳು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.