
ನವದೆಹಲಿ(ಡಿ.30): ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ (ಐಒಎ) ಸಹ ಉಪಾಧ್ಯಕ್ಷ ನರೀಂದರ್ ಬಾತ್ರಾ ಅವರು, ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಭ್ರಷ್ಟಾಚಾರದ ಕಳಂಕ ಹೊತ್ತಿರುವ ಮಾಜಿ ಅಧ್ಯಕ್ಷರಾದ ಸುರೇಶ್ ಕಲ್ಮಾಡಿ ಹಾಗೂ ಅಭಯ್ ಸಿಂಗ್ ಚೌಟಾಲಾ ಅವರನ್ನು ಐಒಎ ಆಜೀವ ಅಧ್ಯಕ್ಷರನ್ನಾಗಿಸುವ ಬಗ್ಗೆ ಸಂಸ್ಥೆಯು ಕೈಗೊಂಡಿದ್ದ ನಿರ್ಣಯವನ್ನು ಖಂಡಿಸಿದ್ದ ಅವರು, ಪ್ರತಿಭಟನಾ ಸೂಚಕವಾಗಿ ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ.
ಡಿ. 27ರಂದು ಚೆನ್ನೈನಲ್ಲಿ ನಡೆದಿದ್ದ ಐಒಎ ವಾರ್ಷಿಕ ಮಹಾಸಭೆಯಲ್ಲಿ ಮಂಡಿಸಲಾಗಿದ್ದ ಕಲ್ಮಾಡಿ ಹಾಗೂ ಚೌಟಾಲಾ ಅವರನ್ನು ಆಜೀವ ಅಧ್ಯಕ್ಷರನ್ನಾಗಿಸುವ ಪ್ರಸ್ತಾವನೆಯನ್ನು ಐಒಎ ಸದಸ್ಯರು ಸರ್ವಾನುಮತದಿಂದ ಅನುಮೋದಿಸಿದ್ದರು. ಆದರೆ, ಅದು ವಿವಾದಕ್ಕೆ ನಾಂದಿ ಹಾಡಿತ್ತು.
ಇತ್ತೀಚೆಗಷ್ಟೇ, ಅಂತಾರಾಷ್ಟ್ರೀಯ ಹಾಕಿ ಸಂಸ್ಥೆಯ (ಎಫ್‌ಐಎಚ್) ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಾತ್ರಾ, ಕಲ್ಮಾಡಿ ಹಾಗೂ ಚೌಟಾಲಾ ಅವರ ಆಯ್ಕೆ ವಿರುದ್ಧ ಕಿಡಿಕಾರಿದ್ದರು. ತಮ್ಮ ರಾಜಿನಾಮೆಯನ್ನು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ಐಒಎ ಆಜೀವ ಅಧ್ಯಕ್ಷರ ಆಯ್ಕೆಯಾಗಿ ಮೂರು ದಿನಗಳು ಕಳೆದಿವೆ. ದೇಶಾದ್ಯಂತ ಈ ಆಯ್ಕೆ ಬಗ್ಗೆ ಸಾಕಷ್ಟು ವಿರೋಧವೂ ವ್ಯಕ್ತವಾಗಿದೆ. ಆದರೂ, ಐಒಎ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇದರಿಂದ ಬೇಸತ್ತು ನನ್ನ ಸಹ ಉಪಾಧ್ಯಕ್ಷ ಹುದ್ದೆಗೆ ರಾಜಿನಾಮೆ ಸಲ್ಲಿಸುತ್ತಿದ್ದೇನೆ’’ ಎಂದು ತಿಳಿಸಿದ್ದಾರೆ.
ಆಜೀವ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಐಒಎ ಏಕಪಕ್ಷೀಯವಾಗಿ ನಡೆದುಕೊಂಡಿದೆ ಎಂದು ಆರೋಪಿಸಿದ ಅವರು, ‘‘ವಾರ್ಷಿಕ ಮಹಾ ಸಮ್ಮೇಳನಕ್ಕೆ ಹೋಗಿದ್ದ ಐಒಎ ಸದಸ್ಯರಲ್ಲಿ ಕೆಲವರನ್ನು ನಾನು ವಿಚಾರಿಸಿದ್ದೇನೆ. ಆಜೀವ ಅಧ್ಯಕ್ಷರ ಹುದ್ದೆಗಳಿಗೆ ಕಲ್ಮಾಡಿ, ಚೌಟಾಲಾ ಅವರ ನೇಮಕಾತಿಯ ಬಗ್ಗೆ ಸಮ್ಮೇಳನದ ಮೊದಲು ಯಾವುದೇ ಸದಸ್ಯನಿಗೆ ಸುಳಿವು ಇರಲಿಲ್ಲವೆಂದು ಅವರು ತಿಳಿಸಿದ್ದಾರೆ. ಇದು ನನಗೆ ಅಚ್ಚರಿ ಹಾಗೂ ಬೇಸರ ತರಿಸಿದೆ. ಇಂಥ ಏಕಪಕ್ಷೀಯ ನಡೆಗಳಿಗೆ ನನ್ನ ವಿರೋಧವಿದೆ’’ ಎಂದು ಅವರು ತಿಳಿಸಿದ್ದಾರೆ.
ಧನ್ಯವಾದ: ಇದೇ ವೇಳೆ, ವಿವಾದ ಭುಗಿಲೇಳುತ್ತಲೇ ಆಜೀವ ಅಧ್ಯಕ್ಷರ ಹುದ್ದೆಯಿಂದ ಹಿಂದೆ ಸರಿದ ಕಲ್ಮಾಡಿಯವರಿಗೆ ಅವರ ಹೆಸರನ್ನೆತ್ತದೇ ಬಾತ್ರಾ ಧನ್ಯವಾದ ಅರ್ಪಿಸಿದರು. ‘‘ವಿರೋಧದ ಬಿಸಿಯನ್ನು ಮನಗಂಡು ಗೌರವ ಹುದ್ದೆಯನ್ನು ಒಬ್ಬರು ಒಲ್ಲೆ ಎಂದಿದ್ದಾರೆ. ಇದು ಸ್ವಾಗತಾರ್ಹ ನಡೆ’’ ಎಂದ ಅವರು, ಯಾವುದೇ ಕಳಂಕಿತ ವ್ಯಕ್ತಿ ಯಾವುದೇ ಕ್ರೀಡಾ ಸಂಸ್ಥೆಯ ಉನ್ನತ ಹುದ್ದೆಗೆ ಹಿಂಬದಿ ಬಾಗಿಲಿನಿಂದ ಪ್ರವೇಶಿಸುವುದನ್ನು ನಾನು ಪ್ರೋತ್ಸಾಹಿಸುವುದಿಲ್ಲ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.