
ಚೆನ್ನೈ(ಡಿ.16): ಈಗಾಗಲೇ ಸರಣಿ ಸೋಲಿನಿಂದ ಕಂಗೆಟ್ಟಿದ್ದ ಇಂಗ್ಲೆಂಡ್ ತಂಡಕ್ಕೆ ಇಂದು ಕೊಂಚ ಸಮಾಧಾನ ಸಿಕ್ಕಿದೆ. ಅತ್ಯಂತ ನಾಜೂಕಿನ ಪ್ರದರ್ಶನ ನೀಡಿದ ಆಲ್ರೌಂಡರ್ ಮೊಯೀನ್ ಅಲಿ (120*) ಹಾಗೂ ಜೋ ರೂಟ್ (88) ಅವರ ಸೊಗಸಾದ ಅರ್ಧಶತಕವು ಪ್ರವಾಸಿ ಇಂಗ್ಲೆಂಡ್ ತಂಡದ ಮೊಗದಲ್ಲಿ ನವೋಲ್ಲಾಸ ಮೂಡಿಸಿತು.
ಇಲ್ಲಿನ ಎಂ ಎ ಚಿದಂಬರಂ (ಚೆಪಾಕ್) ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 90 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 284 ರನ್ ಕಲೆಹಾಕುವಲ್ಲಿ ಸಫಲವಾಯಿತು. ಮೊಯೀನ್ ಅಲಿ ಜತೆಗೆ ಆಲ್ರೌಂಡರ್ ಬೆನ್ ಸ್ಟೋಕ್ಸ್ 5 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡದ ಆರಂಭ ಅಷ್ಟೇನು ಉತ್ತಮವಾಗಿರಲಿಲ್ಲ. ತಂಡದ ಮೊತ್ತ 7 ರನ್'ಗಳಿದ್ದಾಗ ಕಳೆದ ಪಂದ್ಯದ ಹೀರೋ ಕೇತನ್ ಜೆನ್ನಿಂಗ್ಸ್ ಒಂದು ರನ್'ಗಳಿಸಿ ಇಶಾಂತ್ ಶರ್ಮಾಗೆ ವಿಕೆಟ್ ಒಪ್ಪಿಸಿದರು. ಇದಾದ ಕೆಲಹೊತ್ತಿನಲ್ಲೇ ನಾಯಕ ಅಲಿಸ್ಟರ್ ಕುಕ್(10) ಅವರನ್ನು ಜಡೇಜಾ ಪೆವಿಲಿಯನ್ ಹಾದಿ ತೋರಿಸಿದರು. ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡ ನಂತರ ಜತೆಯಾದ ಅಲಿ ಹಾಗೂ ಜೋ ರೂಟ್ ಮೂರನೇ ವಿಕೆಟ್'ಗೆ 146 ರನ್'ಗಳ ಜೊತೆಯಾಟವಾಡಿದರು. ಉತ್ತಮ ಬ್ಯಾಟಿಂಗ್ ಮೂಲಕ ಶತಕದತ್ತ ಮುನ್ನುಗ್ಗುತ್ತಿದ್ದ ಜೋ ರೂಟ್ ಜಡೇಜಾ ಎಸೆತದಲ್ಲಿ ಪಾರ್ಥೀವ್ ಪಟೇಲ್'ಗೆ ಕ್ಯಾಚ್ ನೀಡಿ ಹೊರನಡೆದರು. ನಂತರ ಕ್ರೀಸ್'ಗಿಳಿದ ಜಾನಿ ಬ್ರಿಸ್ಟೋ ಮೊಯಿನ್ ಅಲಿಗೆ ಉತ್ತಮ ಸಾಥ್ ನೀಡಿದರು. ಮೂರು ಸ್ಫೋಟಕ ಸಿಕ್ಸರ್ ಸಿಡಿಸಿದ ಬ್ರಿಸ್ಟೋ ಅರ್ಧಶತಕಕ್ಕೆ ಕೇವಲ ಒಂದು ರನ್ ಬಾಕಿಯಿದ್ದಾಗ ರಾಹುಲ್'ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಬೇಕಾಯಿತು. ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಮೂರು ವಿಕೆಟ್ ಪಡೆದು ಮಿಂಚಿದರು.
ಮೊದಲ ದಿನದಿಂದಲೇ ತಿರುವು ಪಡೆಯಲು ಶುರು ಮಾಡಿರುವ ಪಿಚ್ ಎರಡನೇ ದಿನದಂದು ಇಂಗ್ಲೆಂಡ್‌ಗೆ ಮತ್ತಷ್ಟು ಸವಾಲೊಡ್ಡುವ ಸೂಚನೆ ನೀಡಿದೆ. ಆರಂಭಿಕ ದಿನದಂದು ತವರಿನಲ್ಲಿ ವಿಕೆಟ್ ಪಡೆಯಲು ವಿಫಲವಾದ ಆರ್. ಅಶ್ವಿನ್ ಎರಡನೇ ದಿನದಂದು ಮ್ಯಾಜಿಕ್ ಮಾಡುತ್ತಾರೆಂದು ನಿರೀಕ್ಷಿಸಲಾಗಿದೆ. ಇತ್ತ, ಉಳಿದ ಆರು ವಿಕೆಟ್‌ಗಳಲ್ಲಿ ಸಾಧ್ಯವಾದಷ್ಟೂ ಸವಾಲಿನ ಮೊತ್ತ ಪೇರಿಸಿ ಆ ಮೂಲಕ ಆತಿಥೇಯರ ಮೇಲೆ ಒತ್ತಡ ಹೇರಲು ನಿರ್ಧರಿಸಿರುವ ಇಂಗ್ಲೆಂಡ್ ಕಾರ್ಯತಂತ್ರ ಎಷ್ಟರಮಟ್ಟಿಗೆ ಫಲ ಕೊಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಸ್ಕೋರ್ ವಿವರ
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: 284/4
ಮೊಯೀನ್ ಅಲಿ: 120*
ಜೋ ರೂಟ್: 88
ಬೌಲಿಂಗ್
ರವೀಂದ್ರ ಜಡೇಜಾ: 73/3
ಇಶಾಂತ್ ಶರ್ಮಾ: 25/1
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.