ಮೇರಿಗೆ ಎಐಬಿಎ ಲೆಜೆಂಡ್ ಪ್ರಶಸ್ತಿ

By Suvarna Web DeskFirst Published Dec 21, 2016, 3:14 PM IST
Highlights

ಭಾರತೀಯ ಬಾಕ್ಸಿಂಗ್ ರಂಗಕ್ಕೆ ಸಲ್ಲಿಸಿದ ಅನುಪಮ ಸೇವೆಗಾಗಿ ಮೇರಿಯವರಿಗೆ ಈ ಪ್ರಶಸ್ತಿ ನೀಡಲಾಗಿದೆ.

ನವದೆಹಲಿ(ಡಿ.21): ಭಾರತೀಯ ಬಾಕ್ಸಿಂಗ್‌'ನ ದಂತಕತೆ ಮೇರಿ ಕೋಮ್ ಹಾಗೂ ಏಷ್ಯನ್ ಕ್ರೀಡಾಕೂಟ ಚಿನ್ನದ ಪದಕ ವಿಜೇತ ವಿಕಾಸ್ ಕೃಷ್ಣನ್, ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯ (ಎಐಬಿಎ) 70ನೇ ವಾರ್ಷಿಕೋತ್ಸವದಲ್ಲಿ ವಿಭಿನ್ನ ಪ್ರಶಸ್ತಿಗಳಿಗೆ ಭಾಜನರಾದರು.

ನ್ಯೂಜಿಲೆಂಡ್‌'ನ ಮಾಂಟ್ರೆಕ್ಸ್‌ನಲ್ಲಿ ಮಂಗಳವಾರ ತಡರಾತ್ರಿ ನಡೆದ ಭವ್ಯ ಸಮಾರಂಭದಲ್ಲಿ, ಐದು ಬಾರಿ ವಿಶ್ವ ಚಾಂಪಿಯನ್ ಸಾಧನೆಯೊಂದಿಗೆ ಲಂಡನ್ ಒಲಿಂಪಿಕ್ಸ್‌'ನಲ್ಲಿ ಕಂಚಿನ ಪದಕವನ್ನೂ ಪಡೆದಿರುವ ಮೇರಿಗೆ ಎಐಬಿಎ (ಎಐಬಿಎ ಪ್ರೊ ಬಾಕ್ಸಿಂಗ್) ಲೆಜೆಂಡ್ಸ್ ಪ್ರಶಸ್ತಿ ನೀಡಿ ಗೌರವಿಸಿದರೆ, ವಿಕಾಸ್ ಅವರು ಎಪಿಬಿ ಶ್ರೇಷ್ಠ ಬಾಕ್ಸರ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.

ಭಾರತೀಯ ಬಾಕ್ಸಿಂಗ್ ರಂಗಕ್ಕೆ ಸಲ್ಲಿಸಿದ ಅನುಪಮ ಸೇವೆಗಾಗಿ ಮೇರಿಯವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಇನ್ನು, ರಿಯೊ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ಕಂಚು ಗೆದ್ದಿದ್ದ ಕೃಷ್ಣನ್, ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌'ವೆರೆಗೆ ಸಾಗಿದ್ದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೇರಿ, ‘‘ಪ್ರಶಸ್ತಿ ನೀಡಿದ ಎಐಬಿಎ ಪದಾಧಿಕಾರಿಗಳಿಗೆ ನಾನು ಆಭಾರಿ. ನಾಲ್ಕು ವರ್ಷಗಳಿಂದ ಭಾರತೀಯ ಬಾಕ್ಸಿಂಗ್‌'ಗಾಗಿ ಯಾವುದೇ ಆಡಳಿತ ಸಂಸ್ಥೆಯಿರಲಿಲ್ಲ. ಇದೀಗ, ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಭಾರತೀಯ ಬಾಕ್ಸಿಂಗ್ ಸಂಸ್ಥೆ ಕ್ರೀಡೆಯ ಉಸ್ತುವಾರಿ ವಹಿಸಿಕೊಂಡಿದೆ. ಇದು ಎಲ್ಲಾ ಭಾರತೀಯ ಬಾಕ್ಸರ್‌'ಗಳಲ್ಲೂ ಹುಮ್ಮಸ್ಸು ತಂದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡಲು ಸ್ಫೂರ್ತಿ ನೀಡಿದೆ’’ ಎಂದು ತಿಳಿಸಿದರು.

click me!