
ನವದೆಹಲಿ(ಡಿ.22): ಭಾರತೀಯ ಟೆನಿಸ್ ರಂಗದ ದಂತಕತೆ ಮಹೇಶ್ ಭೂಪತಿ ಅವರನ್ನು ಭಾರತೀಯ ಡೇವಿಸ್ ಕಪ್ ಟೆನಿಸ್ ತಂಡದ ‘ಆಡದ ನಾಯಕ’ನನ್ನಾಗಿ ಆರಿಸಲಾಗಿದೆ. ಈ ಕುರಿತಂತೆ ಅಖಿಲ ಭಾರತ ಟೆನಿಸ್ ಸಂಸ್ಥೆಯು (ಎಐಬಿಎ) ಇಂದು ಅಧಿಕೃತ ಆದೇಶ ಹೊರಡಿಸಿದೆ. ಭೂಪತಿ ನೇಮಕಾತಿಯ ಮೂಲಕ ಈ ಹಿಂದಿನ ಆಡದ ನಾಯಕ ಆನಂದ್ ಅಮೃತ್‌ರಾಜ್ ಅವರಿಗೆ ಗೇಟ್‌ಪಾಸ್ ನೀಡಲಾಗಿದೆ.
ಹಾಗಾಗಿ, ಮುಂದಿನ ವರ್ಷ ಫೆ. 3ರಿಂದ 5ರವರೆಗೆ ನವದೆಹಲಿಯಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಡೇವಿಸ್ ಕಪ್ ಪಂದ್ಯಾವಳಿಯಲ್ಲಿ ಭಾರತ ತಂಡ, ನೂತನ ಆಡದ ನಾಯಕನೊಂದಿಗೆ ಕಣಕ್ಕಿಳಿಯಲಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯಾವಳಿಯ ಸಂದರ್ಭದಲ್ಲೇ ಆನಂದ್ ಅಮೃತ್‌ರಾಜ್ ಅವರಿಗೆ ಬೀಳ್ಕೊಡುಗೆ ಸಮಾರಂಭವನ್ನೂ ನಡೆಸಲಾಗುತ್ತದೆ ಎಂದು ಎಐಟಿಎ ಹೇಳಿದೆ.
ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಪ್ರಕಟಣೆ ನೀಡಿದ ಎಐಟಿಎ ಮಹಾ ಕಾರ್ಯದರ್ಶಿ ಹಿರಣ್ಮಯ್ ಚಟರ್ಜಿ, ‘‘ಡೇವಿಸ್ ಕಪ್ ತಂಡದ ಆಡದ ನಾಯಕನ ಹುದ್ದೆ ಒಬ್ಬ ವ್ಯಕ್ತಿಗೇ ಸೀಮಿತವಾಗಬಾರದು. ಹಾಗಾಗಿಯೇ ನಾವು (ಎಐಟಿಎ) ಆನಂದ್ ಅಮೃತ್‌ರಾಜ್ ಅವರನ್ನು ನಾಯಕನ ಪಟ್ಟದಿಂದ ಕೆಳಗಿಳಿಸಲು ಚಿಂತನೆ ನಡೆಸಿದ್ದೆವು. ನಾನೇ ಖುದ್ದಾಗಿ ಮಹೇಶ್ ಭೂಪತಿಯವರ ಬಳಿ ಮಾತನಾಡಿ ನಾಯಕನ ಸ್ಥಾನಕ್ಕೆ ಅವರನ್ನು ಒಪ್ಪಿಸಿದೆ. ನಮಗೆ ಆನಂದ್ ಅವರ ಮೇಲೆ ಗೌರವವಿದೆ. ಫೆಬ್ರವರಿಯಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಡೇವಿಸ್ ಕಪ್ ಪಂದ್ಯಾವಳಿ ಸಂದರ್ಭದಲ್ಲಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗುತ್ತದೆ’’ ಎಂದು ಹೇಳಿದರು.
ಕಳೆದ ಕೆಲ ವಾರಗಳ ಹಿಂದೆಯೇ ಆನಂದ್ ಅಮೃತ್‌ರಾಜ್ ಅವರನ್ನು ಆಡದ ನಾಯಕನ ಪಟ್ಟದಿಂದ ಕೆಳಗಿಳಿಸಲು ಎಐಟಿಎ ಸನ್ನದ್ಧವಾಗಿತ್ತು. ಡೇವಿಸ್ ಕಪ್ ಪಂದ್ಯಾವಳಿಗಳ ಸಂದರ್ಭದಲ್ಲಿ ಆನಂದ್ ಅಮೃತ್‌ರಾಜ್ ಅವರು ಶಿಸ್ತಿನ ಉಲ್ಲಂಘನೆಗೆ ಅವಕಾಶ ನೀಡುತ್ತಿದ್ದಾರೆಂದು ಹೇಳಿದ್ದ ಎಐಟಿಎ ಈ ಕಾರಣದಿಂದಲೇ ಅವರನ್ನು ಆ ಸ್ಥಾನದಿಂದ ತೆರವುಗೊಳಿಸಲು ಚಿಂತನೆ ನಡೆಸಿರುವುದಾಗಿ ಹೇಳಿತ್ತು.
ಆದರೆ, ತಂಡದ ಆಟಗಾರರು ಎಐಟಿಎ ನಿರ್ಧಾರಕ್ಕೆ ಬೆಂಬಲ ನೀಡಿರಲಿಲ್ಲ. ಅಮೃತ್‌ರಾಜ್ ಅವರನ್ನು ಬದಲಿಸಕೂಡದೆಂದು ಪಟ್ಟು ಹಿಡಿದಿದ್ದರು. ಅದರ ಬೆನ್ನಲ್ಲೇ ಪತ್ರಿಕಾ ಹೇಳಿಕೆ ನೀಡಿದ್ದ ಅಮೃತ್‌ರಾಜ್, ಪಂದ್ಯಾವಳಿಗಳ ವೇಳೆ ತಾವು ಯಾವುದೇ ಶಿಸ್ತು ಉಲ್ಲಂಘನೆಗೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಆದರೆ, ಎಐಟಿಎ ಚಿತ್ತ ಬೇರೆಯದ್ದೇ ಆಗಿತ್ತು. ತಾನು ನಿರ್ಧರಿಸಿದಂತೆ ಇದೀಗ ಆನಂದ್ ಅವರನ್ನು ಆ ಹುದ್ದೆಯಿಂದ ತೆರವುಗೊಳಿಸಿದ ಭೂಪತಿಯವನ್ನು ತಂದು ಕೂರಿಸಿದೆ.
ಹಾಗಾಗಿಯೇ, ಬುಧವಾರದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ‘‘ಆನಂದ್ ಅವರು ಈ ನಿರ್ಧಾರದಿಂದ ಖುಷಿಯಾಗಿದ್ದಾರೆಯೇ ಎಂದು ಕೇಳಿದಾಗ ಉತ್ತರಿಸಿದ ಚಟರ್ಜಿ, ‘‘ನಾಯಕನ ಹುದ್ದೆಯಿಂದ ಕೆಳಗಿಳಿಯಲು ಯಾರು ಇಚ್ಛಿಸುತ್ತಾರೆ ಹೇಳಿ? ಆದರೆ, ಕಾಲಾನುಕ್ರಮದಲ್ಲಿ ನಾಯಕನ ಹುದ್ದೆಗೆ ಅರ್ಹರು ನೇಮಕವಾಗುತ್ತಿರಬೇಕು’’ ಎಂದು ತಿಳಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.