ಲಾರ್ಡ್ಸ್ ಟೆಸ್ಟ್: ಇಂಗ್ಲೆಂಡ್ ಮಣಿಸಿ ಸಮಬಲ ಸಾಧಿಸುತ್ತಾ ಟೀಂ ಇಂಡಿಯಾ?

By Web DeskFirst Published Aug 9, 2018, 10:54 AM IST
Highlights

ಮೊದಲ ಟೆಸ್ಟ್ ಪಂದ್ಯದ ಸೋಲಿನ ಬಳಿಕ ಇದೀಗ  ದ್ವಿತೀಯ ಟೆಸ್ಟ್ ಪಂದ್ಯಕ್ಕೆ ರೆಡಿಯಾಗಿರುವ ಟೀಂ ಇಂಡಿಯಾ ಗೆಲುವಿನ ವಿಶ್ವಾಸದಲ್ಲಿದೆ. ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಈ  ಪಂದ್ಯ ಕೊಹ್ಲಿ ಸೈನ್ಯಕ್ಕೂ ಮಹತ್ವದ್ದಾಗಿದೆ. ಇಂದಿನ ಪಂದ್ಯದಲ್ಲಿ ಆಡೋ ಹನ್ನೊಂದರ ಬಳಗ ಹೇಗಿದೆ? ಇಲ್ಲಿದೆ ಸಂಪೂರ್ಣ ವಿವರ.

ಲಾರ್ಡ್ಸ್(ಆ.09): ಬರ್ಮಿಂಗ್‌ಹ್ಯಾಮ್‌ನಲ್ಲಿ ಜಯದ ಹೊಸ್ತಿಲಲ್ಲಿ ಎಡವಿದ್ದ ಭಾರತ, ಲಂಡನ್‌ನಲ್ಲಿ ಜಯದ ರುಚಿ ಸವಿಯಲು ಕಾಯುತ್ತಿದೆ. ಗುರುವಾರದಿಂದ ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್ ಆರಂಭಗೊಳ್ಳಲಿದ್ದು, ಕ್ರಿಕೆಟ್ ಕಾಶಿ ಲಾರ್ಡ್ಸ್ ಪಂದ್ಯಕ್ಕೆ ವೇದಿಕೆ ಒದಗಿಸಲಿದೆ. 31 ರನ್ ಗಳಿಂದ ಮೊದಲ ಟೆಸ್ಟ್ ಗೆದ್ದು 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿರುವ ಆತಿಥೇಯರು ಮುನ್ನಡೆ ಕಾಯ್ದುಕೊಳ್ಳುವ ಗುರಿ ಹೊಂದಿದ್ದಾರೆ.

ನಾಯಕ ವಿರಾಟ್ ಕೊಹ್ಲಿಗೆ ಮೊದಲ ಟೆಸ್ಟ್‌ನಲ್ಲಿ ಸರಿಯಾದ ಬೆಂಬಲ ಸಿಕ್ಕಿದ್ದರೆ ಸರಣಿಯ ದಿಕ್ಕೇ ಬದಲಾಗುತ್ತಿತ್ತು. ವಿಶ್ವ ನಂ.1 ತಂಡ ಮುನ್ನಡೆ ಸಾಧಿಸುವ ಸನಿಹಕ್ಕೆ ಬಂದು ಮುಗ್ಗರಿಸಿತ್ತು. ಎಡ್ಜ್‌ಬಾಸ್ಟನ್ ಸೋಲು ತಂಡಕ್ಕೆ ಪಾಠ ಕಲಿಸಿದ್ದು, 2ನೇ ಟೆಸ್ಟ್‌ಗೆ ತಂಡ ಅಗತ್ಯ ತಯಾರಿ ಮಾಡಿಕೊಂಡಿದೆ. 

ಪಿಚ್‌ನಲ್ಲಿ ತೇವಾಂಶ ಹೆಚ್ಚಿರದ ಕಾರಣ ಭಾರತ ತಂಡ ಇಬ್ಬರು ಸ್ಪಿನ್ನರ್‌ಗಳನ್ನು ಆಡಿಸುವ ಸಾಧ್ಯತೆ ಹೆಚ್ಚು. ಈ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬೌಲಿಂಗ್ ಕೋಚ್ ಭರತ್ ಅರುಣ್ ಸಹ ಸುಳಿವು ನೀಡಿದ್ದರು. ಆದರೆ ಅಶ್ವಿನ್ ಜತೆ 2ನೇ ಸ್ಪಿನ್ನರ್ ಆಗಿ ಕಣಕ್ಕಿಳಿಯುವವರು ಯಾರು ಎನ್ನುವ ಕುತೂಹಲಕ್ಕೆ ಉತ್ತರ ಸಿಕ್ಕಿಲ್ಲ. ರವೀಂದ್ರ ಜಡೇಜಾ ಹಾಗೂ ಕುಲ್ದೀಪ್ ಯಾದವ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.

 

Tempted to play two spinners for the 2nd Test? Captain shares his views pic.twitter.com/OMTeBxNwKx

— BCCI (@BCCI)

 

ಬುಧವಾರ ನೆಟ್ಸ್‌ನಲ್ಲಿ ನಾಯಕ ಕೊಹ್ಲಿಗೆ ಕುಲ್ದೀಪ್ ಹೆಚ್ಚು ಸಮಯ ಬೌಲ್ ಮಾಡಿದ್ದರಿಂದ, ಅವರಿಗೇ ಅವಕಾಶ ಸಿಕ್ಕರೆ ಅಚ್ಚರಿಯಿಲ್ಲ. ಇಂಗ್ಲೆಂಡ್ ತಂಡದ ಬಹುತೇಕರು ಕುಲ್ದೀಪ್ ಬೌಲಿಂಗನ್ನು ಎದುರಿಸಿಲ್ಲ ಎನ್ನುವ ಅಂಶವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗಿದೆ. 2ನೇ ಸ್ಪಿನ್ನರ್ ಕಣಕ್ಕಿಳಿಸಿದಲ್ಲಿ ಉಮೇಶ್ ಯಾದವ್ ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕಾಗುತ್ತದೆ. ಇಶಾಂತ್, ಶಮಿ ಹಾಗೂ ಹಾರ್ದಿಕ್ ವೇಗದ ಬೌಲಿಂಗ್ ಹೊಣೆ ಹೊರಲಿದ್ದಾರೆ.

 ಬೌಲಿಂಗ್ ಸಂಯೋಜನೆಯ ಲೆಕ್ಕಾಚಾರದಷ್ಟೇ ಬ್ಯಾಟಿಂಗ್ ಪಡೆಯ ಆಯ್ಕೆ ಯಲ್ಲೂ ಭಾರತಕ್ಕೆ ಗೊಂದಲವಿದೆ. ಶಿಖರ್ ಧವನ್, ಮುರಳಿ ವಿಜಯ್, ಕೆ.ಎಲ್.ರಾಹುಲ್ ಮೂವರೂ ಮೊದಲ ಟೆಸ್ಟ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಿಲ್ಲ. ಚೇತೇಶ್ವರ್ ಪೂಜಾರ ಆಯ್ಕೆಗೆ ಬೇಡಿಕೆ ಹೆಚ್ಚಿದೆ. ತಂಡ ಯಾವ ಆಟಗಾರರನ್ನು ಕೈಬಿಟ್ಟು ಪೂಜಾ ರರನ್ನು ಆಯ್ಕೆ ಮಾಡಲಿದೆ ಎನ್ನುವುದು ಕುತೂಹಲ ಮೂಡಿಸಿದೆ. 

ಒಂದೊಮ್ಮೆ ಪೂಜಾರರನ್ನು ಆಡಿಸದೆ ಮೊದಲ ಟೆಸ್ಟ್‌ನಲ್ಲಿ ಆಡಿದ್ದ ಬ್ಯಾಟ್ಸ್‌ಮನ್‌ಗಳನ್ನೇ ಮುಂದುವರಿಸಲು ಕೊಹ್ಲಿ ನಿರ್ಧರಿಸಿದರೂ ಅಚ್ಚರಿಯಿಲ್ಲ. ಅಜಿಂಕ್ಯ ರಹಾನೆ ಲಯದ ಬಗ್ಗೆಯೂ ಆತಂಕ ಶುರುವಾಗಿದ್ದು, ಕರುಣ್ ನಾಯರ್‌ಗೆ ಸ್ಥಾನ ನೀಡುವ ಸಾಧ್ಯತೆಯಿದೆ. ಅದೇ ರೀತಿ ದಿನೇಶ್ ಕಾರ್ತಿಕ್ ಬದಲಿಗೆ ರಿಶಭ್ ಪಂತ್ ವಿಕೆಟ್ ಕೀಪರ್ ಆಗಿ ಕಣಕ್ಕಿಳಿದರೂ ಆಶ್ಚರ್ಯವಿಲ್ಲ.

ಪಿಚ್ ರಿಪೋರ್ಟ್:
ಪಂದ್ಯಕ್ಕೆ 2 ದಿನಗಳ ಮೊದಲು ಪಿಚ್ ಸಂಪೂರ್ಣ ಹುಲ್ಲಿನಿಂದ ಕೂಡಿತ್ತು. ಆದರೆ ಪಂದ್ಯಕ್ಕೂ ಮುನ್ನ ಸ್ವಲ್ಪ ಪ್ರಮಾಣದಲ್ಲಿ ಹುಲ್ಲು ಕತ್ತರಿಸುವ ಸಾಧ್ಯತೆ ಇದೆ. ಒಣ ಪಿಚ್ ಆಗಿರುವುದರಿಂದ ಸ್ಪಿನ್ನರ್‌ಗಳಿಗೆ ನೆರವು ಜಾಸ್ತಿ. ಹೀಗಾಗಿ, ಎರಡೂ ತಂಡಗಳು ಇಬ್ಬರು ತಜ್ಞ ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವ ನಿರೀಕ್ಷೆ ಇದೆ. ಟಾಸ್ ಗೆಲ್ಲುವ ತಂಡ ಮೊದಲು ಬ್ಯಾಟ್ ಮಾಡಲು ಇಚ್ಛಿಸಲಿದೆ ಎಂದು ವಿಶ್ಲೇಷಿಸಲಾಗಿದೆ.

ಭಾರತಕ್ಕೆ 2014ರ ಗೆಲುವೇ ಸ್ಫೂರ್ತಿ:
ಸರಣಿಯಲ್ಲಿ ಹಿನ್ನಡೆ ಅನುಭವಿಸಿರುವ ಭಾರತ ತಂಡಕ್ಕೆ ಪುಟಿದೇಳಲು ಕಳೆದ ಪ್ರವಾಸದಲ್ಲಿ ಸಾಧಿಸಿದ ರೋಚಕ ಗೆಲುವೇ ಸ್ಫೂರ್ತಿಯಾಗಿದೆ. 2014ರ ಲಾರ್ಡ್ಸ್ ಟೆಸ್ಟ್‌ನಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 95 ರನ್‌ಗಳ ಜಯ ಸಾಧಿಸಿತ್ತು. ರಹಾನೆ ಶತಕ ದಾಖಲಿಸಿದ್ದರೆ, ಇಶಾಂತ್ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ್ದರು. ಕೊಹ್ಲಿ ಪಡೆ ಕ್ರಿಕೆಟ್ ಕಾಶಿ ಸತತ 2ನೇ ಟೆಸ್ಟ್ ಜಯವನ್ನು ಎದುರು ನೋಡುತ್ತಿದೆ. 

click me!