
ಮುಂಬೈ[ಆ.16]: ವಿದೇಶದಲ್ಲಿ ಭಾರತ ಟೆಸ್ಟ್ ಗೆಲ್ಲಬಹುದು ಎಂದು ತೋರಿಸಿಕೊಟ್ಟ, ಭಾರತ ಆಡಿದ ಚೊಚ್ಚಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ನಾಯಕರಾಗಿದ್ದ ಅಜಿತ್ ವಾಡೇಕರ್[77 ವರ್ಷ] ಬುಧವಾರ ರಾತ್ರಿ ನಿಧನರಾಗಿದ್ದಾರೆ. ಮುಂಬೈನ ಜಸ್‌ಲೋಕ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ವಯೋಸಹಜ ಕಾಯಿಲೆಗಳಿಂದ ಅವರು ಬಳಲುತ್ತಿದ್ದರು. 1958ರಲ್ಲಿ ಮುಂಬೈ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅಜಿತ್, 1966ರಲ್ಲಿ ಭಾರತ ತಂಡಕ್ಕೆ ಕಾಲಿಟ್ಟರು. 37 ಟೆಸ್ಟ್, 2 ಏಕದಿನ ಪಂದ್ಯಗಳನ್ನು ಅವರು ಆಡಿದರು. 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದ ಅವರು, ಅತ್ಯುತ್ತಮ ಸ್ಲಿಪ್ ಫೀಲ್ಡರ್ ಆಗಿ ಗುರುತಿಸಿಕೊಂಡಿದ್ದರು. ಅಜಿತ್ ನಾಯಕತ್ವದಲ್ಲಿ ಭಾರತ ತಂಡ 1971ರಲ್ಲಿ ವೆಸ್ಟ್ ಇಂಡೀಸ್, 1972-73ರಲ್ಲಿ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಗೆದ್ದಿತ್ತು. 1974ರಲ್ಲಿ ಭಾರತ ತನ್ನ ಚೊಚ್ಚಲ ಏಕದಿನ ಪಂದ್ಯವನ್ನಾಡಿದಾಗ ವಾಡೇಕರ್ ತಂಡದ ನಾಯಕರಾಗಿದ್ದರು.
90ರ ದಶಕದಲ್ಲಿ ಭಾರತ ತಂಡದ ಕೋಚ್, ವ್ಯವಸ್ಥಾಪಕರಾಗಿಯೂ ಕಾರ್ಯನಿರ್ವಹಿಸಿದ್ದರು. ಆಟಗಾರ, ನಾಯಕ, ಕೋಚ್, ವ್ಯವಸ್ಥಾಪಕ, ಆಯ್ಕೆ ಸಮಿತಿ ಮುಖ್ಯಸ್ಥ ಹೀಗೆ ಭಾರತೀಯ ಕ್ರಿಕೆಟ್‌ನಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸಿದ ಕೆಲವೇ ಕೆಲವು ಕ್ರಿಕೆಟಿಗರಲ್ಲಿ ಅಜಿತ್ ಸಹ ಒಬ್ಬರು.
ವಾಡೇಕರ್ ಬದುಕಿನ ಕೆಲ ಕ್ಷಣಗಳು..
1941 ಏಪ್ರಿಲ್ 1 ರಂದು ಅಜಿತ್ ಲಕ್ಷ್ಮಣ್ ವಾಡೇಕರ್ ಜನನ
1958-59- ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ
237 - ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದ ವಾಡೇಕರ್
1966 - ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ
37 - ಟೆಸ್ಟ್ ಪಂದ್ಯಗಳನ್ನು ಆಡಿದ್ದರು.
1974 - ಚೊಚ್ಚಲ ಏಕದಿನ ಪಂದ್ಯವಾಡಿದ್ದ ಭಾರತಕ್ಕೆ ಅಜಿತ್ ನಾಯಕ
02 - ಏಕದಿನ ಪಂದ್ಯಗಳಲ್ಲಿ ಆಡಿದ್ದ ವಾಡೇಕರ್
1967 - ಅರ್ಜುನ ಪ್ರಶಸ್ತಿ
1972 - ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ
ಅಜಿತ್ ನಾಯಕತ್ವದಲ್ಲಿ ವಿದೇಶದಲ್ಲಿ ಭಾರತಕ್ಕೆ ಮೊದಲ ಸರಣಿ ಜಯ
1971 - ವಿಂಡೀಸ್‌ನಲ್ಲಿ ಟೆಸ್ಟ್ ಸರಣಿ
1972-73 - ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ
ವಾಡೇಕರ್ ನಿಧನಕ್ಕೆ ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ಸಚಿನ್ ತೆಂಡುಲ್ಕರ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ದಿಗ್ಗಜರು ಕಂಬನಿ ಮಿಡಿದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.