ಇಂದಿನಿಂದ ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ ಆರಂಭ

By Naveen Kodase  |  First Published Apr 5, 2022, 10:26 AM IST

* ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯು ಇಂದಿನಿಂದ ಆರಂಭ

* ಪಿ.ವಿ. ಸಿಂಧು, ಲಕ್ಷ್ಯ ಸೆನ್ ಮೇಲೆ ಎಲ್ಲರ ಚಿತ್ತ

* 2017ರಲ್ಲಿ ಸಿಂಧು ಮಹಿಳಾ ಸಿಂಗಲ್ಸ್‌ನಲ್ಲಿ ಚಾಂಪಿಯನ್‌ ಆಗಿದ್ದರು


ಸಂಚಿಯಾನ್‌(ಏ.05): ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ (Korea Open Badminton ) ಮಂಗಳವಾರ ಆರಂಭವಾಗಲಿದ್ದು, ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು (PV Sindu) ಹಾಗೂ ಲಕ್ಷ್ಯ ಸೆನ್‌ (Lakshya Sen) ಪದಕ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದ್ದಾರೆ. 2017ರಲ್ಲಿ ಸಿಂಧು ಮಹಿಳಾ ಸಿಂಗಲ್ಸ್‌ನಲ್ಲಿ ಚಾಂಪಿಯನ್‌ ಆಗಿದ್ದು ಭಾರತ ಈವರೆಗೆ ಟೂರ್ನಿಯಲ್ಲಿ ಗೆದ್ದಿರುವ ಏಕೈಕ ಚಿನ್ನದ ಪದಕ. 

ಇತ್ತೀಚೆಗಷ್ಟೇ ಸಯ್ಯದ್‌ ಮೋದಿ, ಸ್ವಿಸ್‌ ಓಪನ್‌ ಪ್ರಶಸ್ತಿ ಗೆದ್ದಿದ್ದ ಅವರು ಅಮೆರಿಕದ ಲಾರೆನ್‌ ಲ್ಯಾಮ್‌ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ. ಆಲ್‌ ಇಂಗ್ಲೆಂಡ್‌, ಜರ್ಮನ್‌ ಓಪನ್‌ ಟೂರ್ನಿಯ ರನ್ನರ್‌-ಅಪ್‌, 20 ವರ್ಷದ ಸೆನ್‌ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಚೀನಾದ ಲು ಗ್ವಾಂಗ್‌ ಜು ವಿರುದ್ಧ ಆಡಲಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್‌, ಮಾಳವಿಕಾ ಬನ್ಸೋದ್‌, ಶ್ರೀ ಕೃಷ್ಣ ಪ್ರಿಯಾ, ಪುರುಷರ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್‌, ಎಚ್‌.ಎಸ್‌.ಪ್ರಣಯ್‌, ಕಿರಣ್‌ ಜಾರ್ಚ್‌‍, ಸೌರಭ್‌ ವರ್ಮಾ ಹಾಗೂ ಪಾರುಪಳ್ಳಿ ಕಶ್ಯಪ್‌ ಕೂಡಾ ಕಣದಲ್ಲಿದ್ದಾರೆ.

Tap to resize

Latest Videos

ಆರ್ಲಿಯಾನ್ಸ್‌ ಬ್ಯಾಡ್ಮಿಂಟನ್‌: ರಾಜ್ಯದ ಮಿಥುನ್‌ಗೆ ಬೆಳ್ಳಿ

ಆರ್ಲಿಯಾನ್ಸ್‌(ಫ್ರಾನ್ಸ್‌): ಆರ್ಲಿಯಾನ್ಸ್‌ ಮಾಸ್ಟ​ರ್ಸ್‌ ಸೂಪರ್‌ 100 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕರ್ನಾಟಕದ ಮಿಥುನ್‌ ಮಂಜುನಾಥ್‌ ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಸೋಮವಾರ ನಡೆದ ಫೈನಲ್‌ನಲ್ಲಿ ಅವರು ಫ್ರಾನ್ಸ್‌ನ ಟೊಮಾ ಜೂನಿಯರ್‌ ಪೊಪೊವ್‌ ವಿರುದ್ಧ 11-21, 19-21 ನೇರ ಗೇಮ್‌ಗಳಲ್ಲಿ ಪರಾಭವಗೊಂಡರು. 

ವಿಶ್ವ ಬ್ಯಾಡ್ಮಿಂಟನ್‌ ರ‍್ಯಾಂಕಿಂಗ್‌‌: ಮೊದಲ ಬಾರಿಗೆ ಲಕ್ಷ್ಯ ಸೆನ್ ಟಾಪ್‌-10ಗೆ ಪ್ರವೇಶ!

ಬೆಂಗಳೂರಿನ ಪ್ರಕಾಶ್‌ ಪಡುಕೋಣೆ ಬ್ಯಾಡ್ಮಿಂಟನ್‌ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುತ್ತಿರುವ 23 ವರ್ಷದ ಮಿಥುನ್‌ ಇದೇ ಮೊದಲ ಬಾರಿ ಸೂಪರ್‌ 100 ಫೈನಲ್‌ ಪ್ರವೇಶಿಸಿದ್ದರು. ಕಳೆದ ಡಿಸೆಂಬರ್‌ನಲ್ಲಿ ನಾಲ್ಕು ಆಲ್‌ ಇಂಡಿಯಾ ರಾರ‍ಯಂಕಿಂಗ್‌ ಪ್ರಶಸ್ತಿ ಗೆದ್ದಿರುವ ಅವರು ವಿಶ್ವ ಶ್ರೇಯಾಂಕದಲ್ಲಿ ಸದ್ಯ 79ನೇ ಸ್ಥಾನದಲ್ಲಿದ್ದಾರೆ.

ಭಾರತ-ನಾರ್ವೆ ಡೇವಿಸ್‌ ಕಪ್‌ ವೇಳಾಪಟ್ಟಿ ಬದಲು

ನವದೆಹಲಿ: ಭಾರತೀಯ ಟೆನಿಸ್‌ ಸಂಸ್ಥೆಯ ಮನವಿ ಪುರಸ್ಕರಿಸಿದ ಅಂತಾರಾಷ್ಟ್ರೀಯ ಟೆನಿಸ್‌ ಫೆಡರೇಷನ್‌(ಐಟಿಎಫ್‌) ನಾರ್ವೆ ವಿರುದ್ಧದ ಡೇವಿಸ್‌ ಕಪ್‌ ವಿಶ್ವ ಗುಂಪು-1 ಪಂದ್ಯದ ವೇಳಾಪಟ್ಟಿ ಬದಲಿಸಲು ಒಪ್ಪಿಗೆ ನೀಡಿದೆ. ಕಳೆದ ವಾರ ಪ್ರಕಟಗೊಂಡಿದ್ದ ಡೇವಿಸ್‌ ಕಪ್‌ ವೇಳಾಪಟ್ಟಿಯ ಪ್ರಕಾರ, ಭಾರತ ತಂಡ ನಾರ್ವೆ ವಿರುದ್ಧ ಸೆ.16-17 ಅಥವಾ ಸೆ.17-18ಕ್ಕೆ ಆಡಬೇಕಿತ್ತು. ಆದರೆ ಏಷ್ಯನ್‌ ಗೇಮ್ಸ್‌ ಸೆಪ್ಟೆಂಬರ್ 10ರಿಂದ 14ರ ವರೆಗೆ ನಿಗದಿಯಾಗಿದ್ದರಿಂದ ಡೇವಿಸ್‌ ಕಪ್‌ ದಿನಾಂಕ ಬದಲಾವಣೆಗೆ ಭಾರತ ಮನವಿ ಮಾಡಿತ್ತು. ಹೊಸ ವೇಳಾಪಟ್ಟಿಪ್ರಕಾರ ಡೇವಿಸ್‌ ಕಪ್‌ ಸೆ.14-15ರಂದು ನಡೆಯಲಿದ್ದು, ಏಷ್ಯನ್‌ ಗೇಮ್ಸ್‌ನಲ್ಲಿನ ಟೆನಿಸ್‌ ಪಂದ್ಯಗಳು ಸೆ.18-24ಕ್ಕೆ ಮುಂದೂಡಲಾಗಿದೆ.

ರಾಷ್ಟ್ರೀಯ ಬಾಸ್ಕೆಟ್‌ಬಾಲ್‌: ರಾಜ್ಯಕ್ಕೆ ಸತತ 2ನೇ ಜಯ

ಚೆನ್ನೈ: 71ನೇ ರಾಷ್ಟ್ರೀಯ ಬಾಸ್ಕೆಟ್‌ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಪುರುಷರ ತಂಡ ಸತತ 2ನೇ ಪಂದ್ಯ ಗೆದ್ದಿದ್ದು, 2ನೇ ಸುತ್ತು ಪ್ರವೇಶಿಸಿದೆ. ಸೋಮವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ, ಉತ್ತರ ಪ್ರದೇಶ ವಿರುದ್ಧ 85-56 ಅಂತರದಲ್ಲಿ ಗೆಲುವು ಸಾಧಿಸಿತು. ಕೊನೆ ಪಂದ್ಯದಲ್ಲಿ ಮಂಗಳವಾರ ರಾಜಸ್ಥಾನ ವಿರುದ್ಧ ಆಡಲಿದೆ. ಆದರೆ ಮಹಿಳೆಯರ ವಿಭಾಗದ 2ನೇ ಪಂದ್ಯದಲ್ಲಿ ಕರ್ನಾಟಕ, ಪಂಜಾಬ್‌ ವಿರುದ್ಧ 72-79 ಅಂತರದಲ್ಲಿ ಪರಾಭವಗೊಂಡಿತು.

ಫೆಡರೇಶನ್‌ ಕಪ್‌: ರಾಜ್ಯದ ಕೃಷಿಕ್‌, ಸಂದೇಶ್‌ಗೆ ಕಂಚು

ಕಲ್ಲಿಕೋಟೆ: 25ನೇ ಫೆಡರೇಷನ್‌ ಕಪ್‌ ಅಥ್ಲೆಟಿಕ್ಸ್‌ ಕೂಟದ 3ನೇ ದಿನವಾದ ಸೋಮವಾರ ಕರ್ನಾಟಕದ ಇಬ್ಬರು ಕ್ರೀಡಾಪಟುಗಳು ಪದಕ ಗೆದ್ದಿದ್ದಾರೆ. ಪುರುಷರ ವಿಭಾಗದ 110 ಮೀ. ಹರ್ಡಲ್ಸ್‌ನಲ್ಲಿ ಕೃಷಿಕ್‌ ಎಂ. 14.60 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದುಕೊಂಡರು. ಪುರುಷರ ಹೈ ಜಂಪ್‌ ಸ್ಪರ್ಧೆಯಲ್ಲಿ ಜೆಸ್ಸಿ ಸಂದೇಶ್‌ 2.15 ಮೀ. ಎತ್ತರಕ್ಕೆ ನೆಗೆದು ಕಂಚು ತಮ್ಮದಾಗಿಸಿಕೊಂಡರು. ರಾಜ್ಯದ ಚೇತನ್‌ ಕೂಡಾ 2.15 ಮೀ. ಎತ್ತರ ದಾಖಲಿಸಿದರೂ 4ನೇ ಸ್ಥಾನ ಪಡೆದುಕೊಂಡರು. ಭಾನುವಾರ ಕರ್ನಾಟಕ 2 ಬೆಳ್ಳಿ, 1 ಕಂಚು ಜಯಿಸಿತ್ತು.
 

click me!