
ವಿಶಾಖಪಟ್ಟಣ(ನ.16): ಮೊದಲ ಪಂದ್ಯದಲ್ಲಿಯೇ ಆತಿಥೇಯ ಭಾರತಕ್ಕೆ ಪ್ರಬಲ ಪೈಪೋಟಿ ನೀಡಿದ ಪ್ರವಾಸಿ ಇಂಗ್ಲೆಂಡ್ ಪಡೆ ಮತ್ತೊಮ್ಮೆ ಕೊಹ್ಲಿ ಪಡೆ ಮೇಲೆ ಪ್ರಭುತ್ವ ಮೆರೆಯಲು ಮುಂದಾಗಿದೆ. ಇನ್ನೊಂದೆಡೆ ಟೀಂ ಇಂಡಿಯಾ ಅನಿರೀಕ್ಷಿತ ಹಿನ್ನಡೆಯನ್ನು ಮೆಟ್ಟಿನಿಂತು ಆಂಗ್ಲರಿಗೆ ತಿರುಗೇಟು ನೀಡುವ ವಿಶ್ವಾಸದಲ್ಲಿದೆ.
ವೈಜಾಗ್‌ನಲ್ಲಿ ಚೊಚ್ಚಲ ಟೆಸ್ಟ್
ಇದುವರೆಗೆ ಏಳು ಏಕದಿನ ಹಾಗೂ ಎರಡು ಟಿ20 ಪಂದ್ಯಗಳ ಆತಿಥ್ಯ ಹೊತ್ತಿರುವ ಈ ಮೈದಾನದಲ್ಲಿ ಮೊಟ್ಟ ಮೊದಲ ಬಾರಿಗೆ ಐದು ದಿನಗಳ ಪಂದ್ಯ ಜರುಗುತ್ತಿದೆ. ಈ ಮೂಲಕ ಭಾರತದ 24ನೇ ಟೆಸ್ಟ್ ತಾಣವೆಂಬ ಗರಿಮೆಗೆ ಡಾ. ವೈ.ಎಸ್. ರಾಜಶೇಖರ ರೆಡ್ಡಿ ಮೈದಾನ ಭಾಜನವಾಗಲಿದೆ. ಇಲ್ಲಿನ ಮೈದಾನದಲ್ಲಿ ಹೆಚ್ಚಿನ ಹುಲ್ಲಿಲ್ಲದಿರುವುದು ಪಿಚ್ ತಿರುವು ಪಡೆಯುವ ಸಾಧ್ಯತೆ ದಟ್ಟವಾಗಿದೆ. ಇದು ಆತಿಥೇಯ ಭಾರತಕ್ಕೆ ವರದಾನವಾಗಲಿದೆ ಎಂದೇ ಭಾವಿಸಲಾಗಿದೆ. ಮುಖ್ಯವಾಗಿ ಸ್ಪಿನ್‌ದ್ವಯರಾದ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾ ಪಿಚ್'ನ ಲಾಭ ಪಡೆಯಲು ತವಕಿಸುತ್ತಿದ್ದಾರೆ. ಅಂತೆಯೇ ಇಂಗ್ಲೆಂಡ್‌ನ ಮೊಯೀನ್ ಅಲಿ ಕೂಡ ಇದೇ ನಿರೀಕ್ಷೆಯಲ್ಲಿದ್ದಾರೆ.
50ನೇ ಪಂದ್ಯದಲ್ಲಿ ಕೊಹ್ಲಿ
ರಾಜ್'ಕೋಟ್ ಟೆಸ್ಟ್'ನ ಕೊನೆಯ ದಿನದಂದು ಪ್ರವಾಸಿ ತಂಡದ ಸ್ಪಿನ್ನರ್'ಗಳು ಭಾರತದ ವಿರುದ್ಧ ಪ್ರಭಾವಿ ಪ್ರದರ್ಶನ ನೀಡಿ ಕೊಹ್ಲಿ ಪಡೆಯನ್ನು ಕೆಣಕಿದ್ದರು. ಸೂಕ್ಷ್ಮತೆಯಿಂದ ಬ್ಯಾಟ್ ಬೀಸಿದ ವಿರಾಟ್ ಕೊಹ್ಲಿ ಪಂದ್ಯ ಕೈಚೆಲ್ಲಿ ಹೋಗದಂತೆ ನೋಡಿಕೊಂಡಿದ್ದರು. ಇದೀಗ ಆಂಗ್ಲರ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವು ಅವರ ಪಾಲಿಗೆ ಚಾರಿತ್ರಿಕವಾಗಿದೆ. 50ನೇ ಪಂದ್ಯವನ್ನು ಆಡುತ್ತಿರುವ ಅವರು ಈ ಪಂದ್ಯವನ್ನು ಗೆದ್ದು ಸ್ಮರಣೀಯವಾಗಿಸಲು ಪಣ ತೊಟ್ಟಿದ್ದಾರೆ. ಇಂಗ್ಲೆಂಡ್‌ನ ಸ್ಟಾರ್ ಆಟಗಾರ ಜೋ ರೂಟ್‌ಗೂ ಈ ಪಂದ್ಯ 50ನೆಯದ್ದು ಎಂಬುದು ವಿಶೇಷ. ‘‘ಮೊದಲ ಟೆಸ್ಟ್ ಪಂದ್ಯವನ್ನು ಹಲವರು ಹಲವು ಬಗೆಯಾಗಿ ವಿಶ್ಲೇಷಿಸಿದರು. ಕೆಲವೊಮ್ಮೆ ನಾವು ಒತ್ತಡದಲ್ಲಿ ಸಿಲುಕಿಸಲ್ಪಟ್ಟೆವು ಮತ್ತು ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ತಿಣುಕಿದೆವು ಎಂದರು. ಆದರೆ, ಓರ್ವ ಕ್ರಿಕೆಟಿಗನಾಗಿ ನಾವು ಆ ಪರಿಸ್ಥಿತಿಯಲ್ಲಿ ಏನನ್ನು ಕಲಿತೆವು ಎಂಬುದಷ್ಟೇ ನನಗೆ ಮುಖ್ಯವಾಗುತ್ತದೆ’’ ಎಂದು ಪಂದ್ಯದ ಮುನ್ನಾ ದಿನದಂದು ನಡೆದ ಸುದ್ದಿಗೋಷ್ಠಿಯಲ್ಲಿ ಕೊಹ್ಲಿ ತಿಳಿಸಿದರು.
ಬಲ ಹೆಚ್ಚಿಸಿದ ರಾಹುಲ್ ಆಗಮನ
ಇನ್ನು ಇಂಗ್ಲೆಂಡ್'ನ ದಿಟ್ಟ ಬ್ಯಾಟಿಂಗ್‌ಗೆ ಪ್ರತಿಯಾಗಿ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಕೂಡ ಉತ್ತಮ ಪ್ರದರ್ಶನವನ್ನೇ ನೀಡಿತು. ಚೇತೇಶ್ವರ ಪೂಜಾರ, ಮುರಳಿ ವಿಜಯ್ ಆಕರ್ಷಕ ಪ್ರದರ್ಶನ ನೀಡಿ ತಂಡ ಬ್ಯಾಟಿಂಗ್‌ನಲ್ಲಿ ಹಿನ್ನಡೆ ಅನುಭವಿಸದಂತೆ ನೋಡಿಕೊಂಡರು. ಏತನ್ಮಧ್ಯೆ ಭಾರತ ತಂಡದ ಬ್ಯಾಟಿಂಗ್ ಕ್ರಮಾಂಕ ಇನ್ನಷ್ಟು ಸದೃಢಗೊಳ್ಳುವಂತೆ ಕನ್ನಡಿಗ ಕೆ.ಎಲ್. ರಾಹುಲ್ ತಂಡಕ್ಕೆ ಮರಳಿರುವುದು ಕೂಡ ಆಶಾದಾಯಕವೆನಿಸಿದೆ. ಗಾಯದ ನಿಮಿತ್ತ ಮೊದಲ ಟೆಸ್ಟ್‌ಗೆ ಅಲಭ್ಯವಾದ ರಾಹುಲ್, ರಾಜಸ್ಥಾನ ವಿರುದ್ಧದ ಎರಡೂ ಇನ್ನಿಂಗ್ಸ್‌ಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ಇಂಗ್ಲೆಂಡ್ ವಿರುದ್ಧವೂ ಇದೇ ಆಕರ್ಷಕ ಪ್ರದರ್ಶನ ನೀಡುತ್ತಾರೆಂಬ ವಿಶ್ವಾಸ ಇರಿಸಿಕೊಳ್ಳಲಾಗಿದೆ.
ಸಂಭವನೀಯರ ಪಟ್ಟಿ
ಭಾರತ
ಕೆ.ಎಲ್. ರಾಹುಲ್, ಮುರಳಿ ವಿಜಯ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ಕರುಣ್ ನಾಯರ್ / ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ವೃದ್ಧಿಮಾನ್ ಸಾಹ (ವಿಕೆಟ್‌ಕೀಪರ್), ರವೀಂದ್ರ ಜಡೇಜಾ, ಮೊಹಮದ್ ಶಮಿ, ಇಶಾಂತ್ ಶರ್ಮಾ / ಉಮೇಶ್ ಯಾದವ್.
ಇಂಗ್ಲೆಂಡ್
ಅಲಸ್ಟೈರ್ ಕುಕ್, ಹಸೀಬ್ ಹಮೀದ್, ಜೋ ರೂಟ್, ಬೆನ್ ಡಕೆಟ್, ಮೊಯೀನ್ ಅಲಿ, ಬೆನ್ ಸ್ಟೋಕ್ಸ್, ಜಾನಿ ಬೇರ್‌ಸ್ಟೋ (ವಿಕೆಟ್‌ಕೀಪರ್), ಕ್ರಿಸ್ ವೋಕೆಸ್ / ಜೇಮ್ಸ್ ಆ್ಯಂಡರ್ಸನ್, ಆದಿಲ್ ರಶೀದ್, ಜಾರ್ ಅನ್ಸಾರಿ, ಸ್ಟುವರ್ಟ್ ಬ್ರಾಡ್.
ನೇರ ಪ್ರಸಾರ: ಬೆಳಿಗ್ಗೆ 9.30 ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.