
ಕೋಲ್ಕತಾ: 2017ರ ಆವೃತ್ತಿಯಲ್ಲಿ ಕೇವಲ 3 ಗೆಲುವುಗಳೊಂದಿಗೆ ಕೊನೆ ಸ್ಥಾನಕ್ಕೆ ಕುಸಿದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಈ ಬಾರಿ ಪುಟಿದೇಳುವ ವಿಶ್ವಾಸದಲ್ಲಿದೆ. ಆರಂಭಿಕ ಪಂದ್ಯದಲ್ಲೇ ಕೊಹ್ಲಿ ಪಡೆಗೆ ಕಠಿಣ ಸವಾಲು ಎದುರಾಗಲಿದ್ದು, 2 ಬಾರಿ ಚಾಂಪಿಯನ್ ಕೋಲ್ಕತಾ ನೈಟ್‌ರೈಡರ್ಸ್ ಸವಾಲನ್ನು ಅದರ ತವರಿನಲ್ಲಿ ಸ್ವೀಕರಿಸಲಿದೆ.
ಗೌತಮ್ ಗಂಭೀರ್ ಯುಗದಿಂದ ಹೊರಬಂದು ಹೊಸದಾಗಿ ಅಭಿಯಾನ ಆರಂಭಿಸಲು ಕೆಕೆಆರ್ ಕಾತರಿಸುತ್ತಿದ್ದು, ತಿಂಗಳ ಹಿಂದಷ್ಟೇ ಬಾಂಗ್ಲಾ ವಿರುದ್ಧ ಕೊನೆ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಭಾರತಕ್ಕೆ ತ್ರಿಕೋನ ಟಿ20 ಸರಣಿ ಗೆಲ್ಲಿಸಿಕೊಟ್ಟಿದ್ದ ದಿನೇಶ್ ಕಾರ್ತಿಕ್ ತಂಡದ ಸಾರಥ್ಯ ವಹಿಸಲಿದ್ದಾರೆ.
ಕಳೆದ ಆವೃತ್ತಿಯಲ್ಲಿ ಕೆಕೆಆರ್ ವಿರುದ್ಧ ೨ ಪಂದ್ಯಗಳಲ್ಲೂ ಹೀನಾಯ ಸೋಲು ಕಂಡಿದ್ದ ಆರ್‌ಸಿಬಿ ಸೇಡಿಗಾಗಿ ಕಾಯುತ್ತಿದೆ. ಮೆಕ್ಕಲಂ, ಎಬಿಡಿ, ಡಿಕಾಕ್, ವೋಕ್ಸ್, ಅಲಿ, ಕೋರಿ ಆ್ಯಂಡರ್‌ಸನ್, ಡಿಗ್ರಾಂಡ್ ಹೋಮ್, ಸೌಥಿ ಹೀಗೆ ತಾರಾ ಅಂತಾರಾಷ್ಟ್ರೀಯ ಆಟಗಾರರ ಉಪಸ್ಥಿತಿ ತಂಡಕ್ಕೆ ಆಯ್ಕೆ ಗೊಂದಲ ಸೃಷ್ಟಿಸಲಿದೆ.
ಎಬಿಡಿ, ಡಿಕಾಕ್, ಮೆಕ್ಕಲಂ ಹಾಗೂ ವೋಕ್ಸ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. ಸಹಜವಾಗಿಯೇ ರನ್ ಮಷಿನ್ ಕೊಹ್ಲಿ ಮೇಲೆ ನಿರೀಕ್ಷೆ ಹೆಚ್ಚಿದೆ. ಕೆಕೆಆರ್‌ಗೆ ಸ್ಟಾರ್ಕ್ ಅನುಪಸ್ಥಿತಿ ಕಾಡಲಿದ್ದು, ಲಿನ್ ಹಾಗೂ ರಸೆಲ್ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ನರೇನ್ ಬೌಲಿಂಗ್ ಶೈಲಿ ಬದಲಿಸಿದ್ದು ಮೊದಲಿನಷ್ಟೇ ಪ್ರಭಾವಿಯಾಗಲಿದ್ದಾರಾ ಎನ್ನುವ ಬಗ್ಗೆ ಅನುಮಾನವಿದೆ. ಉತ್ತಪ್ಪ, ಕುಲ್ದೀಪ್ ಮೇಲೆ ತಂಡ ಅವಲಂಬಿತಗೊಂಡಿದೆ.
ಸಮಯ: ರಾತ್ರಿ 08ಕ್ಕೆ; ಸ್ಥಳ: ಈಡನ್ ಗಾರ್ಡನ್ ; ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1, ಸುವರ್ಣ ಪ್ಲಸ್(ಕನ್ನಡ)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.