
ದಿಯು: ಕೇಂದ್ರಾಡಳಿತ ಪ್ರದೇಶವಾಗಿರುವ ದಿಯುನಲ್ಲಿ ನಡೆದ ಎರಡನೇ ಆವೃತ್ತಿಯ ಖೇಲೋ ಇಂಡಿಯಾ ಬೀಚ್ ಗೇಮ್ಸ್ ಕ್ರೀಡಾಕೂಟದಲ್ಲಿ ಕರ್ನಾಟಕದ ಈಜುಪಟುಗಳು ಅದ್ಭುತ ಪ್ರದರ್ಶನ ತೋರುವುದರೊಂದಿಗೆ ರಾಜ್ಯ ತಂಡವು ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಬಸವನಗುಡಿ ಈಜು ಕೇಂದ್ರದ ಈಜುಪಟು ಧ್ರುಪದ್ ರಾಮಕೃಷ್ಣ ಮತ್ತೊಮ್ಮೆ ಚಿನ್ನದ ಪದಕ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬ್ಲ್ಯೂ ಫ್ಲಾಗ್ ಮಾನ್ಯತೆ ಪಡೆದಿರುವ ದಿಯುವಿನ ಘೋಘ್ಲಾ ಕಡಲ ಕಿನಾರೆಯಲ್ಲಿ ಖೇಲೋ ಇಂಡಿಯಾ ಬೀಚ್ ಗೇಮ್ಸ್ ಕಳೆದ ಮಂಗಳವಾರದಿಂದ ಆರಂಭವಾಗಿದೆ.
ಬಸವನಗುಡಿ ಈಜು ಕೇಂದ್ರದ ದ್ರುಪದ್ ಅವರು 5 ಕಿ.ಮೀ. ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಉಳಿಸಿಕೊಂಡರು. ಕಳೆದ ಆವೃತ್ತಿಯಲ್ಲಿ ಚಿನ್ನ ಗೆದ್ದಿದ್ದ ಅವರು ಈ ಬಾರಿಯೂ 1 ಗಂಟೆ 21:33 ನಿಮಿಷಗಳಲ್ಲಿ ಗುರಿ ತಲುಪಿ ಅಗ್ರಸ್ಥಾನ ಪಡೆದರು.ಸ್ಪರ್ಧೆಯ ಆರಂಭದಿಂದ ಕೊನೆಯ ಹಂತದವರೆಗೂ ಉತ್ತರ ಪ್ರದೇಶದ ಅನುರಾಗ್ ಸಿಂಗ್ (1ಗಂ.21:38ನಿ) ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ, ಮುಕ್ತಾಯಕ್ಕೆ 150 ಮೀಟರ್ ದೂರ ಇರುವಂತೆ ವೇಗ ಪಡೆದುಕೊಂಡ ದ್ರುಪದ್ ಕೇವಲ ಐದು ಸೆಕೆಂಡ್‌ಗಳ ಅಂತರದಲ್ಲಿ ವಿಜಯಶಾಲಿಯಾದರು.
ಸಿಂಗಪುರದಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದ 15 ವರ್ಷದ ದ್ರುಪದ್ ಕಳೆದ ಒಂದು ದಶಕದಿಂದ ಈಜು ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಬನಶಂಕರಿ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ 10ನೇ ತರಗತಿ ಓದುತ್ತಿರುವ ಅವರು ಭಾರತವನ್ನು ಪ್ರತಿನಿಧಿಸಿ ಪದಕ ಗೆಲ್ಲುವ ಗುರಿಯನ್ನು ಹೊಂದಿದ್ದಾರೆ. ಆಶ್ರಾ ಮತ್ತು ಪ್ರಶಂನ್ಸ್ ಅವರೂ ಬಸವನಗುಡಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಇನ್ನು ಕಳೆದ ಶುಕ್ರವಾರ ನಡೆದ 10 ಕಿಲೋ ಮೀಟರ್ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಆರು ಪದಕಗಳ ಪೈಕಿ ನಾಲ್ಕು ಪದಕಗಳನ್ನು ಜಯಿಸುವಲ್ಲಿ ನಮ್ಮ ರಾಜ್ಯದ ಸ್ವಿಮ್ಮರ್‌ಗಳು ಯಶಸ್ವಿಯಾಗಿದ್ದರು. ಬೆಂಗಳೂರಿನ 20 ವರ್ಷದ ಪ್ರತಿಭಾನ್ವಿತ ಸ್ವಿಮ್ಮರ್ ಆಶ್ಮಿತಾ ಚಂದ್ರ 2 ಗಂಟೆ 46.34 ನಿಮಿಷಗಳಲ್ಲಿ ಗುರಿ ತಲುಪುವ ಮೂಲಕ ರಾಜ್ಯಕ್ಕೆ ಮೊದಲ ಚಿನ್ನದ ಪದಕದ ಖಾತೆ ತೆರೆದಿದ್ದರು. ಇದಾದ ಬಳಿಕ ಆಶ್ರಾ ಸುಧೀರ್, ಅಕ್ಷಜ್ ಪಿ ಬೆಳ್ಳಿ ಪದಕ ಜಯಿಸಿದರೆ, ಕನಿಷ್ಕ್ ಎಸ್. ಎ. ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. ಅಶ್ಮಿತಾ ಚಂದ್ರ ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್‌ನಲ್ಲಿ ಮತ್ತು ಆಶ್ರಾ, ಕನಿಷ್ಕ್ ಹಾಗೂ ಅಕ್ಷಜ್ ಬಸವನಗುಡಿ ಈಜು ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಎರಡನೇ ಆವೃತ್ತಿಯ ಖೇಲೋ ಇಂಡಿಯಾ ಬೀಚ್ ಗೇಮ್ಸ್‌ನಲ್ಲಿ ಸುಮಾರು 1400ಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. ಈ ಕ್ರೀಡಾಕೂಟದಲ್ಲಿ ಬೀಚ್ ಸಾಕರ್, ಬೀಚ್ ವಾಲಿಬಾಲ್, ಬೀಚ್ ಸೆಪಕ್ ಟಕ್ರಾ, ಬೀಚ್ ಕಬಡ್ಡಿ, ಓಪನ್ ವಾಟರ್ ಸ್ವಿಮ್ಮಿಂಗ್ ಜತೆಗೆ ಮಲ್ಲಕಂಬ ಹಾಗೂ ಹಗ್ಗಜಗ್ಗಾಟ ಪಂದ್ಯಾಟಗಳು ನಡೆದವು.
ಚೊಚ್ಚಲ ಆವೃತ್ತಿಯ ಖೇಲೋ ಇಂಡಿಯಾ ಬೀಚ್ ಗೇಮ್ಸ್ ಕ್ರೀಡಾಕೂಟದಲ್ಲಿ ಎರಡು ಚಿನ್ನದ ಪದಕ ಸೇರಿದಂತೆ ನಾಲ್ಕು ಪದಕ ಗೆದ್ದಿದ್ದ ಕರ್ನಾಟಕ, ಈ ಬಾರಿ ಅದ್ಭುತ ಪ್ರದರ್ಶನ ತೋರುವುದರೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ತನ್ನ ಅಭಿಯಾನ ಮುಗಿಸಿದೆ. ಈ ಬಾರಿಯ ಕ್ರೀಡಾಕೂಟದಲ್ಲಿ ಕರ್ನಾಟಕ 3 ಚಿನ್ನ, ಎರಡು ಬೆಳ್ಳಿ ಹಾಗೂ ಆರು ಕಂಚಿನ ಪದಕ ಸಹಿತ ಒಟ್ಟು 11 ಪದಕ ಗೆಲ್ಲುವ ಮೂಲಕ ಮೊದಲ ಸ್ಥಾನ ಪಡೆಯಿತು. ಇನ್ನು ತಮಿಳುನಾಡು 8 ಹಾಗೂ ಮಣಿಪುರ 7 ಪದಕಗಳನ್ನು ಪಡೆಯುವ ಮೂಲಕ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದವು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.