
ಕೋಲ್ಕತಾ(ಡಿ.18): ವಿದರ್ಭ ಪಡೆಯನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ್ದ ಕರ್ನಾಟಕ ಮೊದಲ ಇನಿಂಗ್ಸ್'ನ ಎರಡನೇ ದಿನದಾಟದಂತ್ಯಕ್ಕೆ 109 ರನ್'ಗಳ ಮುನ್ನಡೆ ಸಾಧಿಸಿದೆ. ಭರ್ಜರಿ ಶತಕ ಸಿಡಿಸುವ ಮೂಲಕ ಕರುಣ್ ನಾಯರ್ ಕರ್ನಾಟಕ ತಂಡಕ್ಕೆ ಆಸರೆಯಾದರು.
ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಸೆಮಿಫೈನಲ್ ಪಂದ್ಯದಲ್ಲಿ ಮೊದಲ ದಿನದ ಆಘಾತವನ್ನು ಕರ್ನಾಟಕ ಮೆಟ್ಟಿನಿಂತಿದೆ. ಮೊದಲ ದಿನದಂತ್ಯಕ್ಕೆ 30 ರನ್'ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕ ಎರಡನೇ ದಿನ ದಿಟ್ಟ ಆರಂಭವನ್ನೇ ಪಡೆಯಿತು. ಕರುಣ್ ನಾಯರ್ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್'ಮನ್ ಸಿಎಂ ಗೌತಮ್ ಶತಕದ ಜತೆಯಾಟವಾಡುವ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಸಿ.ಎಂ. ಗೌತಮ್ 73 ರನ್ ಸಿಡಿಸಿ ಉಮೇಶ್ ಯಾದವ್'ಗೆ ವಿಕೆಟ್ ಒಪ್ಪಿಸಿದರು. ಆಗ ಕರ್ನಾಟಕ 150 ರನ್'ಗಳ ಗಡಿ ದಾಟಿತ್ತು.
ಗೌತಮ್ ಔಟ್ ಆಗುತ್ತಿದ್ದಂತೆ ಕರ್ನಾಟಕ ದಿಢೀರ್ ಕುಸಿತ ಕಂಡಿತು. ರಾಜ್ಯ ತಂಡದ ಮಧ್ಯಮ ಕ್ರಮಾಂಕಕ್ಕೆ ಗುರ್ಬಾನಿ ಮತ್ತೆ ಪೆಟ್ಟುಕೊಟ್ಟರು. ಬಿನ್ನಿ(4), ಎಸ್. ಗೋಪಾಲ್(7) ಹಾಗೂ ಕೆ. ಗೌತಮ್(1) ಮೂರು ಬ್ಯಾಟ್ಸ್'ಮನ್'ಗಳನ್ನು ಗುರ್ಬಾನಿ ಪೆವಿಲಿಯನ್ ಹಾದಿ ತೋರಿಸಿದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ದಿಟ್ಟ ಬ್ಯಾಟಿಂಗ್ ನಡೆಸಿದ ಕರುಣ್ ನಾಯರ್ ಭರ್ಜರಿ ಶತಕ ಸಿಡಿಸಿ ತಂಡಕ್ಕೆ ನೆರವಾದರು. ಕರುಣ್ ನಾಯರ್(148*) ಹಾಗೂ ನಾಯಕ ವಿನಯ್ ಕುಮಾರ್(20*) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ವಿದರ್ಭ ಪರ ಗುರ್ಬಾನಿ 5 ವಿಕೆಟ್ ಪಡೆದರೆ, ಉಮೇಶ್ ಯಾದವ್ 2 ಹಾಗೂ ಆದಿತ್ಯ ಸರ್ವಾತೆ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
ವಿದರ್ಭ ಮೊದಲ ಇನಿಂಗ್ಸ್: 185/10
ಆದಿತ್ಯ ಸರ್ವಾತೆ: 47
ಮಿಥುನ್: 45/5
ಕರ್ನಾಟಕ ಮೊದಲ ಇನಿಂಗ್ಸ್: 294/8
ಕರುಣ್ ನಾಯರ್: 148*
ಗುರ್ಬಾನಿ: 90/5
(*ಎರಡನೇ ದಿನದಾಟ ಮುಕ್ತಾಯಕ್ಕೆ)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.