
ವಿಶಾಖಪಟ್ಟಣಂ(ನ.14): ಅನುಭವಿ ವೇಗಿಗಳಾದ ನಾಯಕ ವಿನಯ್ ಕುಮಾರ್ (28ಕ್ಕೆ4) ಮತ್ತು ಎಸ್. ಅರವಿಂದ್ (36ಕ್ಕೆ4) ದಾಳಿಗೆ ತತ್ತರಿಸಿದ ರಾಜಸ್ಥಾನ ತಂಡ, ರಣಜಿ ಟ್ರೊಫಿ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಕುಸಿದಿದ್ದು, ತೀವ್ರ ಹಿನ್ನಡೆ ಅನುಭವಿಸಿದೆ.
ಇಲ್ಲಿನ ವಿಜೈನಗರಂ ಡಾ.ಪಿ.ವಿ.ಜಿ ರಾಜು ಎಸಿಎ ಕ್ರೀಡಾ ಸಂಕೀರ್ಣದಲ್ಲಿ ಎರಡನೇ ದಿನವಾದ ಸೋಮವಾರ 6 ವಿಕೆಟ್‌ಗೆ 345ರನ್‌ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ ತಂಡ 374ರನ್'ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಇತ್ತ ಮೊದಲ ಇನಿಂಗ್ಸ್ ಆರಂಭಿಸಿದ ರಾಜಸ್ಥಾನ, ಕರ್ನಾಟಕದ ಬಿಗುವಿನ ದಾಳಿಗೆ ಕಂಗಾಲಾಗಿ 148ರನ್'ಗಳಿಗೆ ಆಲೌಟ್‌ಗೆ ಗುರಿಯಾಗಿ 226ರನ್‌ಗಳ ಹಿನ್ನಡೆ ಅನುಭವಿಸಿತು. ಎರಡನೇ ಇನಿಂಗ್ಸ್ ಆರಂಭಿಸಿರುವ ಕರ್ನಾಟಕ ದಿನಾಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 78ರನ್'ಗಳಿಸಿದೆ. ಆರ್. ಸಮರ್ಥ (46), ಕೆ.ಎಲ್. ರಾಹುಲ್ (32)ರನ್‌ಗಳಿಸಿ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಅಲ್ಲದೇ 304ರನ್‌ಗಳ ಮುನ್ನಡೆ ಪಡೆದಿದೆ.
ರಾಜಸ್ಥಾನ ತಂಡಕ್ಕೆ ಫಾಲೋ ಆನ್ ಹೇರುವ ಅವಕಾಶ ಇದ್ದರೂ, ಹೇರದೆ ಇರುವ ಕರ್ನಾಟಕ ತಂಡದ ನಾಯಕ ವಿನಯ್ ಕುಮಾರ್ ತಂಡಕ್ಕೆ ದ್ವಿತೀಯ ಇನಿಂಗ್ಸ್ ಆಡಲು ಮುಂದಾದರು. ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ ಅರ್ಧಶತಕದೊಂದಿಗೆ ಆಟ ಆರಂಭಿಸಿದ್ದ ಕರ್ನಾಟಕದ ಆರಂಭಿಕ ಜೋಡಿಯಾದ ಸಮರ್ಥ ಮತ್ತು ರಾಹುಲ್ ಬ್ಯಾಟಿಂಗ್‌ನಲ್ಲಿ ಭರವಸೆ ಮೂಡಿಸಿದ್ದಾರೆ. ಒಂದೆಡೆ ಸಮರ್ಥ ವೇಗದ ಬ್ಯಾಟಿಂಗ್‌ಗೆ ಮೊರೆ ಹೋದರೆ, ರಾಹುಲ್ ತಾಳ್ಮೆಯಿಂದಲೇ ರನ್ ಹೆಕ್ಕಿದರು.
148ಕ್ಕೆ ರಾಜಸ್ಥಾನ ಆಲೌಟ್
ಮೊದಲ ಇನಿಂಗ್ಸ್ ಆರಂಭಿಸಿದ ರಾಜಸ್ಥಾನ ತಂಡ ಕಳಪೆ ಆರಂಭ ಪಡೆಯಿತು. ತಂಡ 20 ರನ್'ಗಳಿಸುವಷ್ಟರಲ್ಲಿ ಆರಂಭಿಕ ಎಂ.ಎನ್. ಸಿಂಗ್ (11) ವಿಕೆಟ್ ಪಡೆಯುವಲ್ಲಿ ವಿನಯ್ ಕುಮಾರ್ ಯಶಸ್ವಿಯಾಗಿದ್ದರು. ನಂತರದ 3 ಓವರ್‌ಗಳ ಅಂತರದಲ್ಲಿ ಮತ್ತೊಬ್ಬ ಆರಂಭಿಕ ಎವಿ ಗೌತಮ್ (10) ವಿಕೆಟ್ ಎಗರಿಸಿದ ಅರವಿಂದ್, ರಾಜಸ್ಥಾನಕ್ಕೆ ಆಘಾತ ನೀಡಿದರು. 24ರನ್'ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡ ರಾಜಸ್ಥಾನ ಸಂಕಷ್ಟಕ್ಕೆ ಸಿಲುಕಿತ್ತು.
ಈ ವೇಳೆ ಜತೆಯಾದ ಶರ್ಮ ಮತ್ತು ಲೊಮ್ರರ್ ತಾಳ್ಮೆಯ ಬ್ಯಾಟಿಂಗ್‌ನಿಂದ ಗಮನಸೆಳೆದರು. ಅಲ್ಲದೇ ತಂಡವನ್ನು ಆರಂಭಿಕ ಕುಸಿತದಿಂದ ಪಾರು ಮಾಡಿದರು. ಲೊಮ್ರರ್ (18)ರನ್‌ಗಳಿಸಿದಾಗ ಅರವಿಂದ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು. ನಂತರ ಶರ್ಮ (26), ಎಸ್.ಎಸ್. ಖಾನ್ (01)ರನ್‌ಗಳಿಸಿ 5 ರನ್ ಅಂತರದಲ್ಲಿ 3 ವಿಕೆಟ್ ಉರುಳಿದರಿಂದ ರಾಜಸ್ಥಾನ ತಂಡ ಮತ್ತೆ ಸಂಕಷ್ಟ ಎದುರಿಸಿತು. ಬಿಶ್ಟ್ (02)ರನ್‌ಗಳಿಸಿದರು.
ಏಳನೇ ವಿಕೆಟ್‌ಗೆ ದೊಬಾಲ್ ಮತ್ತು ಬಿಷ್ಣೋಯಿ 53ರನ್ ಸೇರಿಸಿದ್ದರಿಂದ ರಾಜಸ್ಥಾನ 100ರ ಗಡಿ ದಾಟಿ ಕೊಂಚ ನಿಟ್ಟುಸಿರು ಬಿಟ್ಟಿತು. ಬಿಷ್ಣೋಯಿ (25)ರನ್‌ಗಳಿಸಿದರೆ, ದೊಬಾಲ್ (47) ರನ್‌ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿದರು. ಚಹಾರ್ (5), ಉಲ್ ಹಕ್ ಶೂನ್ಯಗಳಿಸಿದ್ದರಿಂದ ರಾಜಸ್ಥಾನ ಆಲೌಟ್ ಆಯಿತು. ಕರ್ನಾಟಕ ಪರ ವಿನಯ್ ಕುಮಾರ್, ಎಸ್. ಅರವಿಂದ್ ತಲಾ 4 ವಿಕೆಟ್ ಪಡೆದರು.
ಸ್ಕೋರ್ ವಿವರ
ಕರ್ನಾಟಕ ಮೊದಲ ಇನಿಂಗ್ಸ್ 99.1 ಓವರ್‌ಗಳಲ್ಲಿ 374
ರಾಜಸ್ಥಾನ ಮೊದಲ ಇನಿಂಗ್ಸ್ 54 ಓವರ್‌ಗಳಲ್ಲಿ 148
ಕರ್ನಾಟಕ ದ್ವಿತೀಯ ಇನಿಂಗ್ಸ್ 15 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 78
ಸಮರ್ಥ ಬ್ಯಾಟಿಂಗ್ 46
ರಾಹುಲ್ ಬ್ಯಾಟಿಂಗ್ 32
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.