
- ನವೀನ್ ಕೊಡಸೆ
ಯುಪಿ ಯೋಧ ತಂಡದ ಪ್ರಮುಖ ಡಿಫೆಂಡರ್ ಕನ್ನಡಿಗ ಜೀವಾ ಕುಮಾರ್ ಮೂಲತಃ ತಮಿಳುನಾಡಿನವರಾದರೂ, ದೀರ್ಘಕಾಲ ಬೆಂಗಳೂರಿನಲ್ಲೇ ನೆಲೆಸುವ ಮೂಲಕ ಕರ್ನಾಟಕವನ್ನೇ ತನ್ನ ತವರನ್ನಾಗಿಸಿಕೊಂಡಿದ್ದಾರೆ. ಇದೀಗ ಯುಪಿ ಯೋಧ ತಂಡ ಭರ್ಜರಿ ಪ್ರದರ್ಶನ ತೋರುವ ಮೂಲಕ ಕ್ವಾಲಿಫೈಯರ್ ಹಂತ ಪ್ರವೇಶಿಸಿದೆ. ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್ ವೆಬ್'ಸೈಟ್'ನೊಂದಿಗೆ ಜೀವಕುಮಾರ್ ಸುದೀರ್ಘವಾಗಿ ವೈಯುಕ್ತಿಕ ಹಾಗೂ ವೃತ್ತಿ ಬದುಕಿನ ಅನುಭವವನ್ನು ಹಂಚಿಕೊಂಡಿದ್ದು ಹೀಗೆ...
* ನಿಮ್ಮ ತಂಡ ಕ್ವಾಲಿಫೈಯರ್ ಹಂತ ಪ್ರವೇಶಿಸಿದೆ. ಹೇಗನಿಸುತ್ತಿದೆ?
ತುಂಬಾನೆ ಸಂತೋಷವಾಗುತ್ತಿದೆ. ಸಹಜವಾಗಿಯೇ ನಿರೀಕ್ಷೆಗಳು ಹೆಚ್ಚಾಗಿವೆ. ಚೊಚ್ಚಲ ಆವೃತ್ತಿಯಲ್ಲೇ ಕ್ವಾಲಿಫೈಯರ್ ಹಂತ ಪ್ರವೇಶಿಸಿದ್ದು ಖುಷಿ ತಂದಿದೆ.
* ನೀವು ಮೂಲತಃ ತಮಿಳುನಾಡಿನವರು, ಬೆಂಗಳೂರಿಗೆ ಬಂದು ನೆಲೆಸಲು ಕಾರಣ?
ನಾನು ತಮಿಳುನಾಡಿನ ಕನ್ಯಾಕುಮಾರಿಯವನು. ನನ್ನ ಅಣ್ಣ ಕಬಡ್ಡಿಯಾಡುತ್ತಿದ್ದರು, ಅವರನ್ನು ನೋಡಿ ನಾನು ಕಬಡ್ಡಿಯಾಡಲು ಆರಂಭಿಸಿದೆ. ತಮಿಳುನಾಡಿನಿಂದಲೇ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದೆ. ಆ ಬಳಿಕ ವೆಸ್ಟರ್ನ್ ರೈಲ್ವೇಯಲ್ಲಿ ಬಾಂಬೆಯಲ್ಲಿ ಕೆಲಸ ಸಿಕ್ತು. ನನ್ನ ಆಟ ನೋಡಿ ಅರ್ಜುನ ಪ್ರಶಸ್ತಿ ವಿಜೇತ ಬಿ.ಸಿ. ರಮೇಶ್ ಸರ್ ಕರ್ನಾಟಕ ತಂಡದಲ್ಲಿ ಆಡಲು ಅವಕಾಶ ಮಾಡಿಕೊಟ್ಟರು. ಬೆಂಗಳೂರಿನಲ್ಲೇ ಇದ್ದು 11 ವರ್ಷವಾಯ್ತು. ಬೆಂಗಳೂರಿಗೆ ಬಂದ ಮೇಲೆ ಭಾರತ ತಂಡವನ್ನು ಪ್ರತಿನಿಧಿಸಿದೆ. ಆಗ ತಮಿಳುನಾಡಿನಲ್ಲಿ ಕಬಡ್ಡಿಗೆ ಪೂರಕ ವಾತಾವರಣವಿರಲಿಲ್ಲ, ಇಲ್ಲಿ ಒಳ್ಳೆಯ ಸಹಕಾರ ಸಿಗುತ್ತಿದೆ. ಹಾಗಾಗಿ ಇಲ್ಲೇ ನೆಲೆಸಲು ತೀರ್ಮಾನಿಸಿದೆ.
* ಪ್ರಸಕ್ತ ವರ್ಷ ಪ್ರೊ ಕಬಡ್ಡಿ ದೀರ್ಘಕಾಲ ನಡೆಯುತ್ತಿರುವುದರ ಬಗ್ಗೆ ನಿಮ್ಮ ಅಭಿಪ್ರಾಯ?
ಆಟಗಾರನಾದವನಿಗೆ ಇದು ಅಷ್ಟೇನು ಸಮಸ್ಯೆ ಅನ್ನಿಸೋದಿಲ್ಲ. ಪ್ರತಿದಿನ ಪ್ರಾಕ್ಟೀಸ್ ಮಾಡ್ತಾ ಇರ್ತೀವಿ, ಇದರಿಂದ ನಮ್ಮ ಪ್ರದರ್ಶನವೂ ಉತ್ತಮವಾಗುತ್ತದೆ. ವೈಯಕ್ತಿಕ ಸಮಸ್ಯೆ ಬದಿಗಿಟ್ಟು ಕೇವಲ ಕಬಡ್ಡಿ ಬಗ್ಗೆ ಗಮನ ಹರಿಸುವುದರಿಂದ ಆಟಗಾರರಿಗೆ ಅನುಕೂಲವೇ ಹೆಚ್ಚು ಎನ್ನಬಹುದು.
* ಈಗಾಗಲೇ ಪ್ರೊ ಕಬಡ್ಡಿಯಲ್ಲಿ ಸಾಕಷ್ಟು ಮಂದಿ ಕನ್ನಡಿಗರು ಮಿಂಚುತ್ತಿದ್ದಾರೆ, ಮುಂದಿನ ಆವೃತ್ತಿಯಲ್ಲೂ ಇನ್ನಷ್ಟು ಕನ್ನಡದ ಆಟಗಾರರನ್ನು ನಿರೀಕ್ಷಿಸಬಹುದಾ?
ಖಂಡಿತವಾಗಿಯೂ ಬರ್ತಾರೆ ಅನ್ನೋ ವಿಶ್ವಾಸವಿದೆ. ಕರ್ನಾಟಕದಲ್ಲಿ ಕಬಡ್ಡಿ ಕ್ಲಬ್'ಗಳು ಜಾಸ್ತಿಯಿವೆ, ಹಾಗಾಗಿ ಆಟಗಾರರಿಗೆ ಉತ್ತಮವಾಗಿ ಅಭ್ಯಾಸ ನಡೆಸಲು ಒಳ್ಳೆಯ ಅವಕಾಶ ಇದೆ. ಬೆಂಗಳೂರಿನಿಂದ ಹೊರಗಿನವರೂ ಸಹ ಇಲ್ಲಿಗೆ ಬಂದು ತರಬೇತಿ ಪಡೆಯುತ್ತಿದ್ದಾರೆ. ಪ್ರೊ ಕಬಡ್ಡಿ ಬಂದ ನಂತರ ಯುವಕರಲ್ಲಿ ಕಬಡ್ಡಿ ಕ್ರೇಜ್ ಇನ್ನಷ್ಟು ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಗುಣಮಟ್ಟದ ಆಟಗಾರರು ಕನ್ನಡದ ನೆಲದಲ್ಲಿ ಮೂಡಿಬರುವುದರಲ್ಲಿ ಯಾವುದೇ ಅನುಮಾನವಿಲ್ಲ.
* ಪ್ರೊ ಕಬಡ್ಡಿ ಆಡಬಯಸುವ ಯುವಕರಿಗೆ ನಿಮ್ಮ ಸಲಹೆಯೇನು?
ಮೊದಲು ಯಾವುದೇ ಆಟಗಾರರನಿಗೆ ಸರಿಯಾದ ಮಾರ್ಗದರ್ಶಕರಿರಬೇಕು. ಫಿಟ್'ನೆಸ್ ಕಾಪಾಡಿಕೊಳ್ಳಬೇಕು ಜೊತೆಗೆ ಒಳ್ಳೆಯ ಕಬಡ್ಡಿ ಕ್ಲಬ್'ನಲ್ಲಿ ತರಬೇತಿ ಪಡೆಯಬೇಕು. ನಿರಂತರವಾಗಿ ಶ್ರದ್ದೆಯಿಂದ ಅಭ್ಯಾಸ ನಡೆಸಿದರೆ, ಖಂಡಿತ ಕಬಡ್ಡಿಯಲ್ಲಿ ಹೆಸರು ಮಾಡಬಹುದು.
* ಬೆಂಗಳೂರು ಬುಲ್ಸ್ ತಂಡದಲ್ಲಿ ಆಡೋ ಆಸೆ ಇದೆಯಾ?
ಬೆಂಗಳೂರು ತಂಡದಲ್ಲಿ ಆಡುವ ಅವಕಾಶ ಸಿಕ್ಕರೆ ಖಂಡಿತ ಸಂತೋಷದಿಂದ ಆಡುತ್ತೇನೆ. ಈಗ ಎಲ್ಲ ಕಡೆಯ ಆಟಗಾರರು ಬೇರೆ ಬೇರೆ ತಂಡಗಳಲ್ಲಿ ಹಂಚಿಹೋಗಿದ್ದಾರೆ. ಮುಖ್ಯವಾಗಿ ಕೋಚ್ ಹಾಗೂ ಆಟಗಾರರ ನಡುವೆ ಹೊಂದಾಣಿಕೆ ಇರಬೇಕು. ಮುಂದೆ ನೋಡೋಣ ಅವಕಾಶ ಸಿಕ್ಕರೆ ಬೆಂಗಳೂರು ಬುಲ್ಸ್'ನಲ್ಲಿ ಆಡಲು ನಾನು ಸಿದ್ದ.
ಪ್ರೊ ಕಬಡ್ಡಿ ಬಂದ ಬಳಿಕ ನಿಮ್ಮ ಬದುಕಿನಲ್ಲಿ ಬದಲಾವಣೆಗಳಾಗಿದೆಯಾ?
ತುಂಬಾ ಜನ ಈಗ ನಮ್ಮನ್ನು ಗುರುತಿಸುತ್ತಾರೆ. ಕುಟುಂಬ, ಸಮಾಜ, ಇಲಾಖೆಯಲ್ಲೂ ಉತ್ತಮ ಗೌರವ ಸಿಗುತ್ತದೆ. ಒಟ್ಟಾರೆಯಾಗಿ ಪ್ರೊ ಕಬಡ್ಡಿ ವೈಯುಕ್ತಿಕವಾಗಿ ನೆಮ್ಮದಿಕೊಟ್ಟಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.