
ನವದೆಹಲಿ(ಅ.10): ಫಿಫಾ ಅಂಡರ್-17 ಫುಟ್ಬಾಲ್ ವಿಶ್ವಕಪ್‌ನ ನಾಕೌಟ್ ಹಂತಕ್ಕೇರುವ ಭಾರತ ತಂಡದ ಕನಸು ಬಹುತೇಕ ಭಗ್ನಗೊಂಡಿದೆ. ಸೋಮವಾರ ಇಲ್ಲಿ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಕೊಲಂಬಿಯಾ ವಿರುದ್ಧ ಭಾರತ 1-2 ಗೋಲುಗಳ ವೀರೋಚಿತ ಸೋಲು ಅನುಭವಿಸಿತು. ಪಂದ್ಯದಲ್ಲಿ 2 ಗೋಲು ಬಾರಿಸಿದ ಕೊಲಂಬಿಯಾದ ಜುವಾನ್ ಪೆನಲೊಜಾ ಭಾರತೀಯರ ಕನಸನ್ನು ಭಗ್ನಗೊಳಿಸಿದರು.
ಮೊದಲ ಪಂದ್ಯದಲ್ಲಿ ಯುಎಸ್‌ಎ ವಿರುದ್ಧ ೦-3 ಗೋಲುಗಳಿಂದ ಸೋತಿದ್ದ ‘ಭಾರತ, ಸತತ 2ನೇ ಪಂದ್ಯದಲ್ಲೂ ಪರಾಭವಗೊಂಡಿತು. ‘ಎ’ ಗುಂಪಿನಲ್ಲಿ ಕೊನೆ ಸ್ಥಾನದಲ್ಲಿರುವ ಭಾರತಕ್ಕೆ ಘಾನಾ ವಿರುದ್ಧದ ಕೊನೆ ಲೀಗ್ ಪಂದ್ಯ ಬಹು ಮುಖ್ಯವೆನಿಸಿದ್ದು, ತಂಡದ ನಾಕೌಟ್ ಕನಸು ನನಸಾಗಬೇಕಿದ್ದರೆ ದೊಡ್ಡ ಅಂತರದ ಗೆಲುವು ಸಾಧಿಸಬೇಕಿದೆ.
6 ಗುಂಪುಗಳಲ್ಲಿ ಅಗ್ರ 2 ತಂಡಗಳು ಹಾಗೂ 3ನೇ ಸ್ಥಾನ ಪಡೆದರೂ ಅಂಕ ಗಳಿಕೆಯಲ್ಲಿ ಉತ್ತಮವೆನಿಸುವ 4 ತಂಡಗಳು ಪ್ರೀ ಕ್ವಾರ್ಟರ್ ಫೈನಲ್‌ಗೇರಲಿವೆ. ಸದ್ಯದ ಪರಿಸ್ಥಿತಿಯಲ್ಲಿ ಭಾರತ ಮುಂದಿನ ಸುತ್ತಿಗೇರುವುದು ಅನುಮಾನವಾಗಿದೆ.
ಪ್ರಬಲ ಪೈಪೋಟಿ:
ದ.ಅಮೆರಿಕದ ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಕೊಲಂಬಿಯಾ ವಿರುದ್ಧ ಮೊದಲಾ‘ರ್ದಲ್ಲಿ ಭಾರತ ಅತ್ಯುತ್ತಮ ಆಟ ಪ್ರದರ್ಶಿಸಿತು. ಪ್ರಮುಖವಾಗಿ ಭಾರತದ ರಕ್ಷಣಾ ಪಡೆ ತೋರಿದ ಹೋರಾಟ ನೆರೆದಿದ್ದ ಸಾವಿರಾರು ಪ್ರೇಕ್ಷಕರಲ್ಲಿ ರೋಮಾಂಚನ ಉಂಟುಮಾಡಿತು. ಮೊದಲ 45 ನಿಮಿಷಗಳಲ್ಲಿ ಕೊಲಂಬಿಯಾ 7 ಬಾರಿ ಗೋಲು ಗಳಿಸುವ ಪ್ರಯತ್ನ ನಡೆಸಿದರೂ ಒಂದರಲ್ಲೂ ಸಲತೆ ಕಾಣಲಿಲ್ಲ. ಅದೇ ರೀತಿ ಭಾರತ ಸಹ 3 ಅವಕಾಶಗಳನ್ನು ಕೈಚೆಲ್ಲಿತು. ಮೊದಲಾ‘ರ್ದ ಮುಕ್ತಾಯಕ್ಕೆ ಯಾವುದೇ ಗೋಲು ದಾಖಲಾಗಲಿಲ್ಲ.
ದ್ವಿತೀಯಾರ್ದ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ಕೊಲಂಬಿಯಾ ಗೋಲಿನ ಖಾತೆ ತೆರೆಯಿತು.49ನೇ ನಿಮಿಷದಲ್ಲಿ ಪೆನಲೊಜಾ ಗೋಲು ಬಾರಿಸಿದರು.
ಇತಿಹಾಸ ಬರೆದ ಜೀಕ್ಸನ್
82ನೇ ನಿಮಿಷದಲ್ಲಿ ಜೀಕ್ಸನ್ ಸಿಂಗ್ ಭಾರತಕ್ಕೆ ಮೊದಲ ಗೋಲು ತಂದುಕೊಟ್ಟರು. ಫಿಫಾ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಆಡುತ್ತಿರುವ ಭಾರತ ಪರ ಚೊಚ್ಚಲ ಗೋಲು ಬಾರಿಸಿದ ದಾಖಲೆಯನ್ನು ಜೀಕ್ಸನ್ ಬರೆದರು. ಭಾರತ ಸಮಬಲ ಸಾಧಿಸಿತು. ಕ್ರೀಡಾಂಗಣದಲ್ಲಿ ಅಭಿಮಾನಿಗಳು ಹುಚ್ಚೆದ್ದು ಕುಣಿಯಲು ಆರಂಭಿಸಿದರು. ಆದರೆ ಈ ಸಂಭ್ರಮ ಹೆಚ್ಚು ಹೊತ್ತು ಬಾಳಲಿಲ್ಲ.
ಭಾರತಕ್ಕೆ ಪೆನಲೊಜಾ ಪೆಟ್ಟು:
ಜೀಕ್ಸನ್ ಗೋಲು ಬಾರಿಸಿದ ಮರು ನಿಮಿಷದಲ್ಲೇ ಅಂದರೆ 82ನೇ ನಿಮಿಷದಲ್ಲಿ ಪೆನಲೊಜಾ ಕೊಲಂಬಿಯಾ ಪರ 2ನೇ ಗೋಲು ಬಾರಿಸಿ, ಭಾರತೀಯರ ಸಂಭ್ರಮಕ್ಕೆ ತೆರೆ ಎಳೆದರು. ಮುಂದಿನ 10 ನಿಮಿಷಗಳ ಕಾಲ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ಕೊಲಂಬಿಯಾ 2-1 ಗೋಲುಗಳಿಂದ ಪಂದ್ಯವನ್ನು ತನ್ನದಾಗಿಸಿಕೊಂಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.