IPL ಜೋಶ್: ಆರೆಂಜ್ ಕ್ಯಾಪ್ ಗೆದ್ದ ಸ್ಫೋಟಕ ಬ್ಯಾಟ್ಸ್’ಮನ್’ಗಳಿವರು

By Web DeskFirst Published Mar 23, 2019, 2:02 PM IST
Highlights

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುವಾಗ ಕ್ರಿಸ್ ಗೇಲ್ ಸತತ 2 ಬಾರಿ ಆರೆಂಜ್ ಕ್ಯಾಪ್ ಜಯಿಸಿದರೆ, ಡೇವಿಡ್ ವಾರ್ನರ್ ಒಟ್ಟಾರೆ 2 ಬಾರಿ ಆರೆಂಜ್ ಕ್ಯಾಪ್’ಗೆ ಮುತ್ತಿಕ್ಕಿದ್ದಾರೆ. ಕಳೆದ 11 ಆವೃತ್ತಿಗಳಲ್ಲಿ ಆರೆಂಜ್ ಕ್ಯಾಪ್ ಗೆದ್ದ ಆಟಗಾರರ ನೆನಪನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದೆ ಮೆಲುಕುಹಾಕುತ್ತಿದೆ. 

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪ್ರತಿ ಪಂದ್ಯದಲ್ಲೂ ಹೊಡಿ ಬಡಿ ಆಟದ್ದೇ ಕಾರುಬಾರು. ಹೈವೋಲ್ಟೇಜ್ ಪಂದ್ಯಗಳಲ್ಲಿ ರನ್ ಹೊಳೆಯೇ ಹರಿಯುತ್ತದೆ. ಟೂರ್ನಿಯ ಮೊದಲ ಪಂದ್ಯದಿಂದಲೇ ಗರಿಷ್ಠ ರನ್ ಬಾರಿಸಿದ ಆಟಗಾರನಿಗೆ ಆರೆಂಜ್ ಕ್ಯಾಪ್ ನೀಡಲಾಗುತ್ತದೆ. ಟೂರ್ನಿಯ ಮುಕ್ತಾಯದ ವೇಳೆಗೆ ಒಟ್ಟಾರೆ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸ್’ಮನ್ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಳ್ಳುತ್ತಾನೆ. 

ಇದುವರೆಗೆ 11 ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಸ್ಫೋಟಕ ಬ್ಯಾಟ್ಸ್’ಮನ್ ಕ್ರಿಸ್ ಗೇಲ್ 2 ಬಾರಿ ಆರೆಂಜ್ ಕ್ಯಾಪ್ ಗಳಿಸಿಕೊಂಡ ಏಕೈಕ ಬ್ಯಾಟ್ಸ್’ಮನ್ ಎನಿಸಿಕೊಂಡಿದ್ದರೆ, ಆರ್’ಸಿಬಿ ಹಾಲಿ ನಾಯಕ ವಿರಾಟ್ ಕೊಹ್ಲಿ 2016ರಲ್ಲಿ ಆರೆಂಜ್ ಕ್ಯಾಪ್ ಪಡೆದುಕೊಂಡಿದ್ದರು. ಆದರೆ ಈ ಆರೆಂಜ್ ಕ್ಯಾಪ್ ಆರ್’ಸಿಬಿ ಕಪ್ ಗೆಲ್ಲಿಸಿಕೊಡುವಲ್ಲಿ ನೆರವಾಗದಿರುವುದು ವಿಪರ್ಯಾಸ.
ಕಳೆದ 11 ಆವೃತ್ತಿಗಳಲ್ಲಿ ಆರೆಂಜ್ ಕ್ಯಾಪ್ ಗೆದ್ದ ಆಟಗಾರರ ನೆನಪನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದೆ ಮೆಲುಕುಹಾಕುತ್ತಿದೆ.

01 ಶಾನ್ ಮಾರ್ಶ್(2008): 616 ರನ್

ಐಪಿಎಲ್ ಚೊಚ್ಚಲ ಆವೃತ್ತಿಯ ಆರೆಂಜ್ ಕ್ಯಾಪ್ ಆಸ್ಟ್ರೇಲಿಯಾ ಮೂಲದ ಪ್ರತಿಭಾನ್ವಿತ ಬ್ಯಾಟ್ಸ್’ಮನ್ ಶಾನ್ ಮಾರ್ಶ್ ಪಾಲಾಗಿತ್ತು. ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಮಾರ್ಶ್ ಆಡಿದ 11 ಇನ್ನಿಂಗ್ಸ್’ಗಳಲ್ಲಿ 68.6ರ ಸರಾಸರಿಯಲ್ಲಿ 616 ರನ್ ಬಾರಿಸಿದ್ದರು. ಇದರಲ್ಲಿ 5 ಅರ್ಧಶತಕ ಹಾಗೂ 1 ಶತಕವೂ ಸೇರಿದ್ದವು.

02 ಮ್ಯಾಥ್ಯೂ ಹೇಡನ್(2009): 572 ರನ್


ಚೆನ್ನೈ ಸೂಪರ್’ಕಿಂಗ್ಸ್ ತಂಡದ ಸ್ಫೋಟಕ ಆರಂಭಿಕ ಬ್ಯಾಟ್ಸ್’ಮನ್ ಮ್ಯಾಥ್ಯೂ ಹೇಡನ್ ಎರಡನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರೆಂಜ್ ಕ್ಯಾಪ್ ಗೆದ್ದುಕೊಂಡಿದ್ದರು. 12 ಇನ್ನಿಂಗ್ಸ್’ಗಳಲ್ಲಿ 52ರ ಸರಾಸರಿಯಲ್ಲಿ 5 ಅರ್ಧಶತಕ ಸಹಿತ 572 ರನ್ ಬಾರಿಸಿದ್ದರು.

03 ಸಚಿನ್ ತೆಂಡುಲ್ಕರ್(2010): 618 ರನ್


ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ 3ನೇ ಆವೃತ್ತಿಯ ಆರೆಂಜ್ ಕ್ಯಾಪ್ ವಿಜೇತರಾಗಿ ಹೊರಹೊಮ್ಮಿದ್ದರು. ಆಡಿದ 15 ಇನ್ನಿಂಗ್ಸ್’ಗಳಲ್ಲಿ 47ರ ಸರಾಸರಿಯಲ್ಲಿ 5 ಅರ್ಧಶತಕ ಸಹಿತ 618 ರನ್ ಬಾರಿಸಿದ್ದರು.

04 ಕ್ರಿಸ್ ಗೇಲ್(2011): 608 ರನ್


ಆರ್’ಸಿಬಿ ತಂಡದಲ್ಲಿದ್ದ ಕ್ರಿಸ್ ಗೇಲ್ ಆಡಿದ 12 ಇನ್ನಿಂಗ್ಸ್’ಗಳಲ್ಲಿ 67ರ ಸರಾಸರಿಯಲ್ಲಿ 608 ರನ್ ಬಾರಿಸಿದ್ದರು. ಒಂದೇ ಆವೃತ್ತಿಯಲ್ಲಿ 2 ಶತಕ ಸಿಡಿಸಿದ ಮೊದಲ ಆಟಗಾರ ಎನ್ನುವ ಕೀರ್ತಿಗೂ ಕೆರಿಬಿಯನ್ ಆಟಗಾರ ಪಾತ್ರರಾಗಿದ್ದರು. ಗೇಲ್ ಅದ್ಭತ ಬ್ಯಾಟಿಂಗ್ ನೆರವಿನಿಂದ ಆರ್’ಸಿಬಿ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿತ್ತು.

05 ಕ್ರಿಸ್ ಗೇಲ್(2012): 733 ರನ್


ಐಪಿಎಲ್ ಇತಿಹಾಸದಲ್ಲಿ ಸತತ 2ನೇ ಬಾರಿಗೆ ಆರೆಂಜ್ ಕ್ಯಾಪ್ ಗೆದ್ದ ಮೊದಲ ಕ್ರಿಕೆಟಿಗನೆಂದರೆ ಅದು ಕ್ರಿಸ್ ಗೇಲ್. ಆಡಿದ 14 ಪಂದ್ಯಗಳಲ್ಲಿ 61ರ ಸರಾಸರಿಯಲ್ಲಿ ಗೇಲ್ 733 ರನ್ ಬಾರಿಸಿದ್ದರು. ಇದರಲ್ಲಿ 7 ಅರ್ಧ ಶತಕ ಹಾಗೂ 1 ಶತಕ ಸೇರಿತ್ತು.

06 ಮೈಕೆಲ್ ಹಸ್ಸಿ(2013): 733 ರನ್


ಮಿಸ್ಟರ್ ಕನ್ಸಿಟೆಂಟ್ ಎಂದೇ ಹೆಸರಾಗಿದ್ದ ಚೆನ್ನೈ ಸೂಪರ್’ಕಿಂಗ್ಸ್ ತಂಡದ ಮೈಕೆಲ್ ಹಸ್ಸಿ ಆಡಿದ 17 ಇನ್ನಿಂಗ್ಸ್’ಗಳಲ್ಲಿ 52ರ ಸರಾಸರಿಯಲ್ಲಿ 733 ರನ್ ಬಾರಿಸಿದ್ದರು. ಇದರಲ್ಲಿ 6 ಸಮಯೋಚಿತ ಅರ್ಧಶತಕಗಳು ಸೇರಿದ್ದವು.

07 ರಾಬಿನ್ ಉತ್ತಪ್ಪ(2014): 660 ರನ್


ಕೋಲ್ಕತ ನೈಟ್’ರೈಡರ್ಸ್ ತಂಡದ ಅತ್ಯಂತ ನಂಬಿಕಸ್ಥ ಬ್ಯಾಟ್ಸ್’ಮನ್ ರಾಬಿನ್ ಉತ್ತಪ್ಪ. ಕೆಕೆಆರ್ ಪರ ಆರೆಂಜ್ ಕ್ಯಾಪ್ ಜಯಿಸಿದ ಮೊದಲ ಹಾಗೂ ಏಕೈಕ ಬ್ಯಾಟ್ಸ್’ಮನ್ ಉತ್ತಪ್ಪ ಆಡಿದ 16 ಇನ್ನಿಂಗ್ಸ್’ಗಳಲ್ಲಿ 44ರ ಸರಾಸರಿಯಲ್ಲಿ 5 ಅರ್ಧಶತಕ ಸಹಿತ 660 ರನ್ ಬಾರಿಸಿದ್ದರು. ಉತ್ತಪ್ಪ ಅಮೋಘ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಕೆಕೆಆರ್ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

08 ಡೇವಿಡ್ ವಾರ್ನರ್(2015): 562 ರನ್


ಸನ್’ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಆರಂಭಿಕ ಬ್ಯಾಟ್ಸ್’ಮನ್ ಡೇವಿಡ್ ವಾರ್ನರ್ ಆಡಿದ 14 ಇನ್ನಿಂಗ್ಸ್’ಗಳಲ್ಲಿ 43ರ ಸರಾಸರಿಯಲ್ಲಿ 7 ಅರ್ಧಶತಕ ಸಹಿತ 562 ರನ್ ಬಾರಿಸಿದ್ದರು. ಟೂರ್ನಿಯಲ್ಲಿ ವಾರ್ನರ್ ಗರಿಷ್ಠ ರನ್ ಸಿಡಿಸಿದರೂ ತಂಡವನ್ನು ಫೈನಲ್’ಗೇರಿಸಲು ವಿಫಲವಾದರು.

09 ವಿರಾಟ್ ಕೊಹ್ಲಿ(2016): 973 ರನ್


ಆರ್’ಸಿಬಿ ನಾಯಕ ವಿರಾಟ್ ಕೊಹ್ಲಿ 09ನೇ ಆವೃತ್ತಿಯಲ್ಲಿ ಆಡಿದ 16 ಇನ್ನಿಂಗ್ಸ್’ಗಳಲ್ಲಿ 81ರ ಸರಾಸರಿಯಲ್ಲಿ 4 ಶತಕ ಹಾಗೂ 7 ಅರ್ಧಶತಕ ಸಹಿತ ಬರೋಬ್ಬರಿ 973 ರನ್ ಬಾರಿಸಿ ಆರೆಂಜ್ ಕ್ಯಾಪ್’ಗೆ ಮುತ್ತಿಕ್ಕಿದ್ದರು. ಇನ್ನು ಕೇವಲ 27 ರನ್ ಬಾರಿಸಿದ್ದರೆ ಐಪಿಎಲ್ ಆವೃತ್ತಿಯೊಂದರಲ್ಲೇ ಸಾವಿರ ರನ್ ಬಾರಿಸಿದ ಆಟಗಾರನೆನಿಸಿಕೊಳ್ಳುತ್ತಿದ್ದರು. ವಿರಾಟ್ ಅದ್ಭುತ ಪ್ರದರ್ಶನದ ಹೊರತಾಗಿಯೂ ಆರ್’ಸಿಬಿ ಮೂರನೇ ಬಾರಿಗೆ ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸಿ ನಿರಾಸೆ ಅನುಭವಿಸಿತ್ತು.

10 ಡೇವಿಡ್ ವಾರ್ನರ್(2017): 641 ರನ್


ಸನ್’ರೈಸರ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಆಡಿದ 14 ಪಂದ್ಯಗಳಲ್ಲಿ 58ರ ಸರಾಸರಿಯಲ್ಲಿ 1 ಶತಕ ಹಾಗೂ 4 ಅರ್ಧಶತಕ ಸಹಿತ 641 ರನ್ ಬಾರಿಗೆ ಆರೆಂಜ್ ಕ್ಯಾಪ್ ಎರಡನೇ ಬಾರಿಗೆ ಜಯಿಸಿದರು. ಆದರೆ ಹೈದರಾಬಾದ್ ತಂಡ ಸತತ 2ನೇ ಬಾರಿಗೆ ಫೈನಲ್ ಪ್ರವೇಶಿಸುವ ಕನಸು ಸಾಕಾರವಾಗಲಿಲ್ಲ.

11 ಕೇನ್ ವಿಲಿಯಮ್ಸನ್(2018): 735 ರನ್

ಸನ್’ರೈಸರ್ಸ್ ತಂಡದ ನಾಯಕ ಕೇನ್ ವಿಲಿಯಮ್ಸನ್ 2018ರ ಆವೃತ್ತಿಯಲ್ಲಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡರು. ಟೂರ್ನಿಯುದ್ಧಕ್ಕೂ ಅದ್ಭುತ ಪ್ರದರ್ಶನ ತೋರಿದ ವಿಲಿಯಮ್ಸನ್ ಆಡಿದ 17 ಪಂದ್ಯಗಳಲ್ಲಿ 52ರ ಸರಾಸರಿಯಂತೆ 8 ಅರ್ಧಶತಕ ಸಹಿತ 735 ರನ್ ಬಾರಿಸಿದ್ದರು.  

click me!