205 ರನ್ ಸಿಡಿಸಿ, 7 ಬೌಲರ್ ಇದ್ರೂ ರಸೆಲ್ ಸುನಾಮಿಗೆ ಕೊಚ್ಚಿ ಹೋಯ್ತು RCB

By Web DeskFirst Published Apr 5, 2019, 11:49 PM IST
Highlights

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲಿನ ಸರಣಿ ಮುಂದುವರಿದಿದೆ. ಸೋಲಿನ ಸಂಖ್ಯೆ 5ಕ್ಕೇರಿದೆ. ಕೆಕೆಆರ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ RCB ಗೆಲುವಿನ ದಡ ಸೇರೋ ಕನಸನ್ನು ಆ್ಯಂಡ್ರೆ ರಸೆಲ್ ನುಚ್ಚು ನೂರು ಮಾಡಿದರು. RCB Vs KKR ನಡುವಿನ ಪಂದ್ಯದ ಹೈಲೈಟ್ಸ್ ಇಲ್ಲಿದೆ.

ಬೆಂಗಳೂರು(ಏ.05): 12ನೇ ಆವೃತ್ತಿ ಐಪಿಎಲ್ ಟೂರ್ನಿ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸರಿಹೋಗುತ್ತಿಲ್ಲ. ಕಾರಣ RCB ಒಂದಲ್ಲ, ಎರಡಲ್ಲ ಬರೋಬ್ಬರಿ 5ನೇ ಸೋಲು ಕಂಡಿದೆ. ಕೋಲ್ಕತಾ ನೈಟ್ ರೈಡರ್ಸ್ ವಿರುದ್ದ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡೋ ಮೂಲಕ RCB 205 ರನ್ ಸಿಡಿಸಿದರೂ  ಗೆಲುವು ಮಾತ್ರ ಸಿಗಲಿಲ್ಲ. 19ನೇ ಓವರ್‌ನಲ್ಲಿ ಆ್ಯಂಡ್ರೆ ರಸೆಲ್ ಪಂದ್ಯದ ಗತಿಯನ್ನೇ ಬದಲಿಸಿದರು. ಈ ಮೂಲಕ ಕೆಕೆಆರ್ 5 ವಿಕೆಟ್ ರೋಚಕ ಗೆಲುವು ಸಾಧಿಸಿತು. 

ನಾಯಕ ವಿರಾಟ್ ಕೊಹ್ಲಿ ಸಿಡಿಸಿದ 84 ರನ್ ಹಾಗೂ ಎಬಿ ಡಿವಿಲಿಯರ್ಸ್ ಭಾರಿಸಿ 63 ರನ್‌ಗಳ ನೆರವಿನಿಂದ ಕೆಕೆಆರ್ ತಂಡಕ್ಕೆ 206 ರನ್ ಟಾರ್ಗೆಟ್ ನೀಡಿತ್ತು. ಬೃಹತ್ ಟಾರ್ಗೆಟ್ ಚೇಸ್ ಮಾಡೋ ವಿಶ್ವಾಸದಲ್ಲಿದ್ದ ಕೆಕೆಆರ್ ತಂಡಕ್ಕೆ RCB ಬೌಲರ್‌ಗಳು ಶಾಕ್ ನೀಡಿದರು. ಆರಂಭಿಕ ಸುನಿಲ್ ನರೈನ್ ಕೇವಲ 10 ರನ್ ಸಿಡಿಸಿ ಔಟಾದರು. 

ಕ್ರಿಸ್ ಲಿನ್ ಹಾಗೂ ರಾಬಿನ್ ಉತ್ತಪ್ಪ ಜೊತೆಯಾಟ ಕೆಕೆಆರ್‌ಗೆ ಚೇತರಿಕೆ ನೀಡಿತು. ಆದರೆ ಉತ್ತಪ್ಪ 33 ರನ್ ಸಿಡಿಸಿ ಔಟಾದರು. ಕ್ರಿಸ್ ಲಿನ್ 43 ರನ್ ಸಿಡಿಸಿ ಔಟಾದರು. ನಿತೀಶ್ ರಾಣ 37  ರನ್ ಸಿಡಿಸಿ ಔಟಾದರು. ನಾಯಕ ದಿನೇಶ್ ಕಾರ್ತಿಕ್ 19 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ಅಷ್ಟರಲ್ಲೇ ಆ್ಯಂಡ್ರೆ ರಸೆಲ್ ಅಬ್ಬರ ಆರಂಭಗೊಂಡಿತು. ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ RCBಗೆ ಶಾಕ್ ನೀಡಿದರು.

ಕೆಕೆಆರ್ ಗೆಲುವಿಗೆ 12 ಎಸೆತದಲ್ಲಿ 30 ರನ್ ಅವಶ್ಯಕತೆ ಇತ್ತು. ಟಿಮ್ ಸೌಥಿ ಓವರ್‌ನಲ್ಲಿ 4 ಸಿಕ್ಸರ್ ಹಾಗೂ 1 ಬೌಂಡರಿ ಸಿಡಿಸಿದರು. ಈ ಮೂಲಕ ಒಂದೇ ಓವರ್‌ನಲ್ಲಿ 29 ರನ್ ಸಿಡಿಸಿದರು. ಅಂತಿಮ ಓವರ್‌ನಲ್ಲಿ ಕೇವಲ 1 ರನ್  ಬೇಕಿತ್ತು. ಶುಬಮಾನ್ ಗಿಲ್ 1 ರನ್ ಸಿಡಿಸಿದರು. ಈ ಮೂಲಕ ಕೆಕೆಆರ್ ಇನ್ನೂ 5 ಎಸೆತ ಬಾಕಿ ಇರುವಂತೆ 5 ವಿಕೆಟ್ ಗೆಲುವು ಸಾಧಿಸಿತು.ರಸೆಲ್ 13 ಎಸೆತದಲ್ಲಿ 7 ಸಿಕ್ಸರ್ ಹಾಗೂ 1 ಬೌಂಡರಿ ಮೂಲಕ ಅಜೇಯ 48 ರನ್ ಸಿಡಿಸಿದರು.

click me!