IPL 2018: ಧೋನಿ ಹುಡುಗರು ಮತ್ತೊಮ್ಮೆ ಚಾಂಪಿಯನ್ಸ್

First Published May 27, 2018, 10:44 PM IST
Highlights

ಶೇನ್ ವಾಟ್ಸನ್ ಮನಮೋಹಕ ಶತಕ, ಬೌಲರ್’ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಬಲಿಷ್ಠ ಸನ್’ರೈಸರ್ಸ್ ಪಡೆಯನ್ನು ಬಗ್ಗುಬಡಿದು ಚೆನ್ನೈ ಸೂಪರ್’ಕಿಂಗ್ಸ್ 2018ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. 2 ವರ್ಷಗಳ ನಿಷೇಧದ ಬಳಿಕ ಐಪಿಎಲ್’ಗೆ ಕಮ್’ಬ್ಯಾಕ್ ಮಾಡಿರುವ ಧೋನಿ ನೇತೃತ್ವದ ಸಿಎಸ್’ಕೆ 8 ವಿಕೆಟ್’ಗಳ ಅಮೋಘ ಜಯ ಸಾಧಿಸುವುದರೊಂದಿಗೆ ಮೂರನೇ ಐಪಿಎಲ್ ಟ್ರೋಫಿ ಎತ್ತಿ ಹಿಡಿಯಿತು.

ಮುಂಬೈ[ಮೇ.27]: ಶೇನ್ ವಾಟ್ಸನ್ ಮನಮೋಹಕ ಶತಕ, ಬೌಲರ್’ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಬಲಿಷ್ಠ ಸನ್’ರೈಸರ್ಸ್ ಪಡೆಯನ್ನು ಬಗ್ಗುಬಡಿದು ಚೆನ್ನೈ ಸೂಪರ್’ಕಿಂಗ್ಸ್ 2018ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. 2 ವರ್ಷಗಳ ನಿಷೇಧದ ಬಳಿಕ ಐಪಿಎಲ್’ಗೆ ಕಮ್’ಬ್ಯಾಕ್ ಮಾಡಿರುವ ಧೋನಿ ನೇತೃತ್ವದ ಸಿಎಸ್’ಕೆ 8 ವಿಕೆಟ್’ಗಳ ಅಮೋಘ ಜಯ ಸಾಧಿಸುವುದರೊಂದಿಗೆ ಮೂರನೇ ಐಪಿಎಲ್ ಟ್ರೋಫಿ ಎತ್ತಿ ಹಿಡಿಯಿತು.

ಸನ್’ರೈಸರ್ಸ್ ಹೈದರಾಬಾದ್ ನೀಡಿದ್ದ 179 ರನ್’ಗಳ ಸವಾಲನ್ನು ಇನ್ನೂ 9 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಬಹುತೇಕ ಬೌಲಿಂಗ್ ಬಲದಿಂದಲೇ ಫೈನಲ್ ಪ್ರವೇಶಿಸಿದ್ದ ಹೈದರಾಬಾದ್ 178 ರನ್’ಗಳನ್ನು ರಕ್ಷಿಸಿಕೊಳ್ಳಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆರಂಭದಲ್ಲೇ ಫಾಪ್ ಡು ಪ್ಲೆಸಿಸ್ ವಿಕೆಟ್ ಉರುಳಿದಾಗ ಎಲ್ಲರೂ ರೋಚಕ ಕಾದಾಟಕ್ಕೆ ಸಾಕ್ಷಿಯಾಗಬಹುದು ಎಂದು ಊಹಿಸಿದ್ದರು. ಆದರೆ ರೈನಾ-ವಾಟ್ಸನ್ ಜೋಡಿ ಹೈದರಾಬಾದ್ ಅಭಿಮಾನಿಗಳ ಆಸೆಯನ್ನು ಹೊಸಕಿ ಹಾಕಿದರು. ಎರಡನೇ ವಿಕೆಟ್’ಗೆ 117 ರನ್’ಗಳ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ಹೊಸ್ತಿಲಲ್ಲಿ ತಂದು ನಿಲ್ಲಿಸಿದರು. ಶೇನ್ ವಾಟ್ಸನ್ ಆರ್ಭಟಿಸುತ್ತಿದ್ದಾಗ ರೈನಾ ತಕ್ಕ ಸಾಥ್[32] ನೀಡಿದರು. ಮತ್ತೊಂದೆಡೆ ಅಕ್ಷರಶಃ ಆರ್ಭಟಿಸಿದ ವಾಟ್ಸನ್ ಕೇವಲ 57 ಎಸೆತಗಳಲ್ಲಿ ಅಜೇಯ 117 ರನ್ ಚಚ್ಚಿದರು. ಅವರ ಸ್ಫೋಟಕ ಇನಿಂಗ್ಸ್’ನಲ್ಲಿ 11 ಬೌಂಡರಿ ಹಾಗೂ 8 ಸಿಕ್ಸರ್’ಗಳು ಸೇರಿದ್ದವು. ಕೊನೆಯಲ್ಲಿ ಅಂಬಟಿ ರಾಯುಡು 16 ರನ್ ಬಾರಿಸಿ ಅಜೇಯರಾಗುಳಿದರು.

ಟೂರ್ನಿಯಲ್ಲಿ ವಾಟ್ಸನ್ 2ನೇ ಶತಕ: ಪ್ರಸಕ್ತ ಆವೃತ್ತಿಯಲ್ಲಿ ವಾಟ್ಸನ್’ಗಿದು 2ನೇ ಹಾಗೂ ಒಟ್ಟಾರೆ ಐಪಿಎಲ್’ನಲ್ಲಿ 4ನೇ ಶತಕವಾಗಿದೆ. ಈ ಮೊದಲು ಗ್ರೂಪ್ ಹಂತದಲ್ಲಿ ಶೇನ್ ವಾಟ್ಸನ್ ರಾಜಸ್ಥಾನ ರಾಯಲ್ಸ್ ಎದುರು 106 ರನ್ ಸಿಡಿಸಿದ್ದರು. ಇದೀಗ ಫೈನಲ್’ನಲ್ಲಿ ಮತ್ತೊಂದು ಶತಕ ಸಿಡಿಸುವ ಮೂಲಕ ಧೋನಿ ಪಡೆಗೆ ಮೂರನೇ ಕಪ್ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಇದಕ್ಕೂ ಮೊದಲು ಕೇನ್ ವಿಲಿಯಮ್ಸನ್ ಹಾಗೂ ಯೂಸುಪ್ ಪಠಾಣ್ ಬ್ಯಾಟಿಂಗ್ ನೆರವಿನಿಂದ 178 ರನ್ ಕಲೆಹಾಕಿತ್ತು.
ಸಂಕ್ಷಿಪ್ತ ಸ್ಕೋರ್:
SRH: 178/7
ವಿಲಿಯಮ್ಸನ್: 47
ಜಡೇಜಾ: 24/1
CSK: 181/2
ಶೇನ್ ವಾಟ್ಸನ್: 117
ಬ್ರಾಥ್’ವೈಟ್: 27/1
 

click me!